ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಇ-ಮೇಲ್ ಸಂದೇಶ ಸ್ವೀಕರಿಸಲಾಗಿತ್ತು: ಸಿಬಿಎಸ್‌ಇ
ಅಮೃತಸರ, ಮಾ. 30: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಗಣಿತ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ದಿಲ್ಲಿ ಕ್ರೈಮ್ ಬ್ರಾಂಚ್ 10ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ ಹಾಗೂ ಸಿಬಿಎಸ್‌ಇ ಪರೀಕ್ಷಣಾ ನಿಯಂತ್ರಣಾಧಿಕಾರಿಯೊಂದಿಗೆ ಸಂವಹನ ನಡೆಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪರೀಕ್ಷೆ ನಡೆಯುವುದಕ್ಕಿಂತ ಒಂದು ದಿನಕ್ಕಿಂತ ಮುನ್ನ 10ನೇ ತರಗತಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಬಗ್ಗೆ ಮಂಡಳಿಯ ಮುಖ್ಯಸ್ಥೆ ಇ-ಮೇಲ್ ಸಂದೇಶ ಸ್ವೀಕರಿಸಿದ್ದರು ಎಂದು ಸಿಬಿಎಸ್‌ಇ ದೂರಿನಲ್ಲಿ ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಣಿತ ಹಾಗೂ ಅರ್ಥಶಾಸ್ತ್ರ ಪರೀಕ್ಷೆಯನ್ನು ಅನುಕ್ರಮವಾಗಿ ಮಾರ್ಚ್ 28 ಹಾಗೂ ಮಾಚ್ 26ರಂದು ಆಯೋಜಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದಿಲ್ಲಿಯಲ್ಲಿರುವ ಸಿಬಿಎಸ್‌ಇ ಕೇಂದ್ರ ಕಚೇರಿಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಗಣಿತ ಪತ್ರಿಕೆ ಕುರಿತು ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಮಂಡಳಿ, ಪರೀಕ್ಷೆ ನಡೆಯುವ ಒಂದು ದಿನ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಸಿಬಿಎಸ್‌ಇ ಅಧ್ಯಕ್ಷೆ ಅವರ ಅಧೀಕೃತ ಇ-ಮೇಲ್ ವಿಳಾಸಕ್ಕೆ ಪತ್ರ ಬಂದಿತ್ತು ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇ-ಮೇಲ್ ಕಳುಹಿಸಿದವರು ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಅದು ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಪರೀಕ್ಷೆ ರದ್ದುಗೊಳಿಸಿ ಎಂದು ಹೇಳಿದ್ದರು. ಸಂದೇಶದೊಂದಿಗೆ ವಾಟ್ಸ್ ಆ್ಯಪ್‌ನಲ್ಲಿ ಸೋರಿಕೆಯಾಗಿದ್ದ ಗಣಿತ ಪರೀಕ್ಷೆಯ ಕೈಯಲ್ಲಿ ಬರೆದ ಪ್ರಶ್ನೆ ಪತ್ರಿಕೆಯನ್ನು ಲಗತ್ತಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.