ದೇಶಾದ್ಯಂತ ಅಂಬೇಡ್ಕರ್ ಹೆಸರು ಸರಿಪಡಿಸಬೇಕು: ರಾಜ್ಯಪಾಲ ರಾಮ್ ನಾಯ್ಕ್
ಅಮೃತಸರ, ಮಾ. 30: ದೇಶಾದ್ಯಂತ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಹೆಸರು ಸರಿಪಡಿಸಬೇಕು ಎಂದು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಹೇಳಿದ್ದಾರೆ. ಈ ವಿಷಯವನ್ನು ರಾಜಕೀಯಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.
ಕಚೇರಿಯ ಸಂವಹನ ಹಾಗೂ ದಾಖಲೆಗಳಲ್ಲಿ ಉಲ್ಲೇಖಿಸುವಾಗ ಅಂಬೇಡ್ಕರ್ ಅವರ ಮಧ್ಯದ ಹೆಸರಾಗಿ ರಾಮ್‌ಜಿ ಬಳಸುವಂತೆ ಉತ್ತರಪ್ರದೇಶ ಸರಕಾರ ಆದೇಶ ಜಾರಿಗೊಳಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ವಿಪಕ್ಷಗಳು, 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಬ್ಯಾಂಕ್ ರಾಜಕೀಯದಲ್ಲಿ ರಾಜ್ಯ ಸರಕಾರ ತೊಡಗಿಕೊಂಡಿದೆ ಎಂದು ಆರೋಪಿಸಿವೆ. ರಾಮ್‌ಜಿ ಅಂಬೇಡ್ಕರ್ ಅವರ ತಂದೆಯ ಹೆಸರು. ಮಹಾರಾಷ್ಟ್ರದ ಸಂಪ್ರದಾಯದ ಪ್ರಕಾರ ಪುತ್ರನ ಹೆಸರಿನ ಮಧ್ಯದಲ್ಲಿ ತಂದೆಯ ಹೆಸರು ಬಳಸಲಾಗುತ್ತದೆ ಎಂದು ನಾಯ್ಕ್ ಹೇಳಿದ್ದಾರೆ.
ಇಂಗ್ಲಿಷ್‌ನಲ್ಲಿ ಅಂಬೇಡ್ಕರ್ ಸ್ಪೆಲ್ಲಿಂಗ್ ಹಾಗೇ ಉಳಿದುಕೊಳ್ಳಲಿದೆ. ಆದರೆ, ಹಿಂದಿಯಲ್ಲಿ ‘ಆಂಬೇಡ್ಕರ್’ ಎಂದು ಉಚ್ಚರಿಸಬೇಕು ಎಂದು ಅವರು ಹೇಳಿದ್ದಾರೆ. ಇಲ್ಲಿನ ಇಂದಿರಾ ಗಾಂಧಿ ಕಲಾ ಕೇಂದ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ದೇಶಾದ್ಯಂತ ಅಂಬೇಡ್ಕರ್ ಅವರ ಹೆಸರನ್ನು ಸರಿಪಡಿಸಬೇಕು ಎಂದು ಹೇಳಿರುವ ರಾಜ್ಯಪಾಲರು, ಈ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ಹೆಸರನ್ನು ಸರಿಯಾದ ರೀತಿಯಲ್ಲಿ ಬರೆಯಬೇಕು ಎಂದು ನಾಯ್ಕ್ ಅವರು 2017 ಡಿಸೆಂಬರ್‌ನಿಂದ ಹೋರಾಟ ನಡೆಸುತ್ತಿದ್ದಾರೆ.