‘ಖಿನ್ನತೆ’ಯಿಂದ ಪಾರಾಗುವುದು ಹೇಗೆ?

Update: 2018-03-30 18:42 GMT

ಗಮನಿಸಬೇಕಾದ ಸಂಗತಿಯೆಂದರೆ, ಕೆಲವು ವಾರಗಳ ತನಕ ಉಳಿಯುವ ಬೇಸರ ಅಥವಾ ಖಿನ್ನತೆ ಸಹಜವಾದುದಲ್ಲ. ಅದು ಅಷ್ಟು ಸುಲಭವಾಗಿ ಮರೆಯಾಗುವುದೂ ಇಲ್ಲ. ಹಲವರು ಸ್ಥಳ/ವಾತಾವರಣ ಬದಲಾವಣೆಯಿಂದ ಈ ರೀತಿಯ ಖಿನ್ನತೆ ಸರಿಯಾಗಬಹುದೆಂದು ತಿಳಿದಿದ್ದರೆ, ಅದು ಅವರ ತಪ್ಪುಕಲ್ಪನೆ. ಈ ತೊಂದರೆಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ, ವ್ಯಕ್ತಿತ್ವದ ಮೇಲೆ ಬಲವಾದ ಪರಿಣಾಮ ಬೀರಬಹುದು. ಆದ್ದರಿಂದ ದೀರ್ಘ ಅವಧಿಯ ಖಿನ್ನತೆಗೆ ಸಕಾಲದಲ್ಲಿ ಆವಶ್ಯಕ ಚಿಕಿತ್ಸೆ ಬೇಕು.

ಖಿನ್ನತೆಯು ನೆಗಡಿ, ಕೆಮ್ಮು, ಜ್ವರಗಳಷ್ಟೇ ಸಾಮಾನ್ಯವಾದ ಮಾನಸಿಕ ತೊಂದರೆ. ಇದು ಲಿಂಗಭೇದವಿಲ್ಲದೆ, ಬಡವ-ಬಲ್ಲಿದ, ಮೇಲು-ಕೀಳು, ವಯಸ್ಸಿನ ಪರಿಮಿತಿಯಿಲ್ಲದೆ ಯಾರನ್ನೂ ಕಾಡಬಹುದು ಮತ್ತು ಜೀವನದ ಯಾವ ಹಂತದಲ್ಲಿಯೂ ಕಾಣಿಸಿಕೊಳ್ಳಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಖಿನ್ನತೆ ಒಂದು ಕಾಯಿಲೆ. ಅದು ವ್ಯಕ್ತಿಯ ಯೋಚನೆ, ವರ್ತನೆ, ಭಾವನೆ, ಕಾರ್ಯಸಾಮರ್ಥ್ಯ ಮತ್ತು ಶಾರೀರಿಕ ಆರೋಗ್ಯಗಳನ್ನು ಹದಗೆಡಿಸುತ್ತದೆ. ಮಾನಸಿಕ ಪರಿಣಾಮವಾದ ಖಿನ್ನತೆಯಿಂದ ದೈಹಿಕ ಆರೋಗ್ಯ ಕೆಡುವ ಸಾಧ್ಯತೆಗಳೂ ಹೆಚ್ಚು.
ಖಿನ್ನತೆ ಯಾರನ್ನು ಬೇಕಿದ್ದರೂ, ಯಾವ ಸಮಯದಲ್ಲಾದರೂ ಬಾಧಿಸಬಹುದು. ಪುರುಷರಿಗಿಂತ ಮಹಿಳೆಯರಲ್ಲಿ ಖಿನ್ನತೆ ಉಂಟಾಗುವ ಸಾಧ್ಯತೆಗಳು ಎರಡು ಪಟ್ಟು ಹೆಚ್ಚು. ಸಾಮಾನ್ಯವಾಗಿ 30 ರಿಂದ 40ರ ನಡುವಿನ ಪ್ರಾಯದಲ್ಲಿ ಖಿನ್ನತೆ ಕಂಡುಬರುವ ಸಾಧ್ಯತೆಗಳು ಹೆಚ್ಚು. ವಯಸ್ಸು ಹೆಚ್ಚಿದಂತೆ ಖಿನ್ನತೆಯ ಸಾಧ್ಯತೆಯೂ ಹೆಚ್ಚು.

ಖಿನ್ನತೆಗೆ ಕಾರಣಗಳು

♦ ಖಿನ್ನತೆಗೆ ವ್ಯಕ್ತಿಗಳು ಬದುಕಿನಲ್ಲಿ ಹಲವಾರು ಬಾರಿ ಒಳಗಾಗಬಹುದು. ಕೆಲವರು ಕೇವಲ ಒಂದೇ ಒಂದು ಬಾರಿ ಈ ತೊಂದರೆಗೆ ಒಳಗಾಗಬಹುದು.
♦ ಕಷ್ಟ-ನಷ್ಟಗಳ ಕಾರಣಗಳಿಂದಾಗಿ ಅನೇಕರು ತೀವ್ರವಾದ ಖಿನ್ನತೆ ಅನುಭವಿಸುತ್ತಾರೆ.
♦ ಹೆಚ್ಚಿನವರಲ್ಲಿ ಖಿನ್ನತೆಗೆ ಸಮರ್ಪಕವಾದ ಕಾರಣವಿರಲೇಬೇಕೆಂದಿಲ್ಲ. ವಂಶ ಪಾರಂಪರ್ಯದಿಂದ ಬರುವ ಜೀನ್ ಸಂಬಂಧಿತ ಅಂಶಗಳೂ ಅವರನ್ನು ಖಿನ್ನತೆಗೆ ಗುರಿಪಡಿಸಬಹುದು.
♦ ದೈಹಿಕ ಬದಲಾವಣೆಗಳು ಕೆಲವರಲ್ಲಿ ಖಿನ್ನತೆಯನ್ನು ತರಬಹುದು. ಉದಾಹರಣೆ: ಮುಟ್ಟಿನ ಸಮಯ, ಗರ್ಭಧಾರಣೆಯ ಬಳಿಕ, ಹೆರಿಗೆಯ ನಂತರ ಅಥವಾ ಋತುಚಕ್ರ ನಿಂತ ಮೇಲೆ ಕೆಲವರು ಹಾರ್ಮೋನ್ ವ್ಯತ್ಯಯಗಳಿಂದಾಗಿ ಖಿನ್ನತೆಯಿಂದ ಬಳಲುತ್ತಾರೆ.

♦ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ, ಹೃದಯರೋಗ, ಹೃದಯಾಘಾತ, ಲಕ್ವ... ಮುಂತಾದ ತೀವ್ರ ಸ್ವರೂಪದ ದೈಹಿಕ ರೋಗಗಳು ಹಾಗೂ ಅವಕ್ಕೆ ತೀವ್ರ ಪ್ರಮಾಣದ ಚಿಕಿತ್ಸೆಗಳಿಂದಲೂ ಖಿನ್ನತೆ ಉಂಟಾಗಬಹುದು.
♦ ಜೀವನದಲ್ಲಿ ನೊಂದ ಜೀವ, ಹಣಕಾಸಿನ ತೊಂದರೆ, ಹತ್ತಿರ ಸಂಬಂಧಿ ಕರ ಸಾವು, ಅಗಲಿಕೆ, ವಿವಾಹ ವಿಚ್ಛೇದನ, ವ್ಯವಹಾರದಲ್ಲಿ ಅತಿಯಾದ ಒತ್ತಡಗಳನ್ನು ಅನುಭವಿಸುತ್ತಿರುವವರಲ್ಲಿ ಅಥವಾ ಮೆದುಳಿನ ರಾಸಾಯನಿಕ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಉಂಟಾಗಿ, ಖಿನ್ನತೆ ಕಂಡುಬರಬಹುದು.

ಯಾರಿಗೆ ಚಿಕಿತ್ಸೆಗೆ?
ಒಂದು ಅಂದಾಜಿನ ಪ್ರಕಾರ, ಪ್ರತೀ ವರ್ಷ ಶೇ. 10ರಷ್ಟು ಜನರು ಚಿಕಿತ್ಸೆಗೆ ಒಳಗಾಗಬೇಕಾದ ಖಿನ್ನತೆಯಿಂದ ನರಳುತ್ತಾರೆ. ಇವರು ದಿನದ ಹೆಚ್ಚು ಭಾಗ ಹಾಗೂ ಪ್ರತೀದಿನ ಬೇಸರಗೊಂಡಿರುತ್ತಾರೆ. ಖಿನ್ನತೆಗೆ ಒಳಗಾದ ಮೂರನೇ ಎರಡಂಶ ಜನ ಅಗತ್ಯವಿರುವ ಚಿಕಿತ್ಸೆ ಪಡೆಯುವುದು ಅಪಮಾನಕರವೆಂದು ಹಿಂಜರಿದು, ಶುಶ್ರೂಷೆ ಪಡೆಯದೆ ಉಳಿಯುತ್ತಾರೆ. ಇನ್ನೂ ಕೆಲವರು ಖಿನ್ನತೆ, ವ್ಯಥೆ, ಬೇಸರಗಳು ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಿ, ಕಾಲವೇ ಅವುಗಳನ್ನು ಮರೆಸುವುದು ಎಂದು ವೈದ್ಯರ ಸಲಹೆ ಪಡೆಯದೆ ಉಳಿಯುತ್ತಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೆಲವು ವಾರಗಳ ತನಕ ಉಳಿಯುವ ಬೇಸರ ಅಥವಾ ಖಿನ್ನತೆ ಸಹಜವಾದುದಲ್ಲ. ಅದು ಅಷ್ಟು ಸುಲಭವಾಗಿ ಮರೆಯಾಗುವುದೂ ಇಲ್ಲ. ಹಲವರು ಸ್ಥಳ/ವಾತಾವರಣ ಬದಲಾವಣೆಯಿಂದ ಈ ರೀತಿಯ ಖಿನ್ನತೆ ಸರಿಯಾಗಬಹುದೆಂದು ತಿಳಿದಿದ್ದರೆ, ಅದು ಅವರ ತಪ್ಪುಕಲ್ಪನೆ. ಈ ತೊಂದರೆಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ, ವ್ಯಕ್ತಿತ್ವದ ಮೇಲೆ ಬಲವಾದ ಪರಿಣಾಮ ಬೀರಬಹುದು. ಆದ್ದರಿಂದ ದೀರ್ಘ ಅವಧಿಯ ಖಿನ್ನತೆಗೆ ಸಕಾಲದಲ್ಲಿ ಅವಶ್ಯಕ ಚಿಕಿತ್ಸೆ ಬೇಕು. ಸಮಾಧಾನದ ವಿಷಯವೆಂದರೆ, ಇನ್ನಿತರ ಮಾನಸಿಕ ರೋಗಗಳಿಗಿಂತ ಖಿನ್ನತೆಯನ್ನು ಹೆಚ್ಚು ಶೀಘ್ರವಾಗಿ ನಿವಾರಿಸಬಹುದು. ಸುಮಾರು ಶೇ. 80 ಜನ ಚಿಕಿತ್ಸೆಗೆ ಬೇಗನೆ ಸ್ಪಂದಿಸುತ್ತಾರೆ.

ಚಿಕಿತ್ಸೆ ಹೇಗೆ?

ಖಿನ್ನತೆಯು ಮನೋಲೋಕದ ಸಾಮಾನ್ಯ ಸಮಸ್ಯೆ ಎಂಬುದನ್ನು ನಂಬುವುದು ಕಷ್ಟವಾಗಬಹುದು. ಮನೋವೈದ್ಯರು ಖಿನ್ನತೆಯ ರೋಗಕ್ಕೆ ಸೂಕ್ತವಾದ ಚಿಕಿತ್ಸೆ ನೀಡಬಲ್ಲರು. ಈ ರೋಗದಿಂದ ಬಳಲುವವರಿಗೆ ಖಿನ್ನತೆ ನಿರೋಧಕ ಔಷಧಗಳನ್ನು ಕೊಡಬೇಕಾಗುವುದು. ಖಿನ್ನತೆಯ ಪ್ರಮಾಣ/ತೀವ್ರತೆ ಹೆಚ್ಚಿದ್ದರೆ, ಅಂತಹವರು ಒಳರೋಗಿಯಾಗಿಯೇ ಚಿಕಿತ್ಸೆ ಪಡೆಯಬೇಕಾಗಬಹುದು ಎಂದು ಹೇಳುವಂತಿಲ್ಲ. ಚಿಕಿತ್ಸೆಯ ಪರಿಣಾಮ ವನ್ನು ಪರೀಕ್ಷಿಸಬೇಕಾದ ಅನಿವಾರ್ಯತೆ ಇರಬಹುದು. ಸರಿಯಾಗಿ ಔಷಧಿಯನ್ನು ಬದಲಿಸಬೇಕಾಗುತ್ತದೆ ಇಂತಹ ಅಂಶಗಳ ನಿರ್ಧಾರಕ್ಕೆ ಒಳರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಗಬಹುದು.

ಚಿಕಿತ್ಸೆಯಿಂದಲೂ ಖಿನ್ನತೆಯನ್ನು ನಿವಾರಿಸಲು ಹಲವಾರು ವಾರಗಳೇ ಬೇಕಾಗಬಹುದು. ಖಿನ್ನತೆಯು ಮತ್ತೆ ಮತ್ತೆ ಆವರಿಸುವ ಅಪಾಯ ವನ್ನು ತಡೆಗಟ್ಟಲು, ಖಿನ್ನತೆಯಿಂದ ಗುಣಮುಖವಾದ ಮೇಲೂ ಸ್ವಲ್ಪಸಮಯದವರೆಗೆ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಮುಂದುವರಿಸಬೇಕಾಗುವುದು. ಆಗಾಗ ಖಿನ್ನತೆ ಕಾಣಿಸಿಕೊಳ್ಳುವವರಿಗೆ, ಬಹಳ ಸಮಯದವರೆಗೂ ಚಿಕಿತ್ಸೆ ನೀಡಬೇಕಾಗುವುದು. ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಿದ್ದರೆ, ಖಿನ್ನತೆಯ ರೋಗಿಗಳನ್ನು ಪದೇ ಪದೇ ಆಸ್ಪತ್ರೆಗೆ ದಾಖಲಿಸುವುದು ತಪ್ಪಿ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಬಹುದು.
 ಕೆಲವು ಔಷಧಿಗಳು ರೋಗಿಯಲ್ಲಿ ತಾತ್ಕಾಲಿಕವಾಗಿ ಪ್ರತಿಕೂಲ ಅಥವಾ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಇವುಗಳ ಬಗ್ಗೆ ವೈದ್ಯರು ರೋಗಿಗೆ ಹಾಗೂ ಅವರ ಸಮೀಪದ ಬಂಧುಗಳಿಗೆ ಮೊದಲೇ ಮಾಹಿತಿ ನೀಡಿರುತ್ತಾರೆ. ಹೆಚ್ಚು ಮಾಹಿತಿಗಾಗಿ ಅಥವಾ ನಿಮಗೆ ಸಂದೇಹಗಳು ಇದ್ದಲ್ಲಿ, ವೈದ್ಯರನ್ನು ಭೇಟಿ ಮಾಡಿ ನಿಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು. ಅಂತೂ ಈಗ, ಆಧುನಿಕ ಔಷಧಿಗಳಿಂದಾಗಿ ಹೆಚ್ಚಿನ ಪ್ರತಿಕೂಲ ಹಾಗೂ ಅಡ್ಡಪರಿಣಾಮಗಳನ್ನು ನಿಯಂತ್ರಿಸುವುದು ಸಾಧ್ಯವಿದೆ. ಈಗ ಖಿನ್ನತೆಯನ್ನು ನಿವಾರಿಸಲು ಅನೇಕ ಔಷಧಿಗಳು ಲಭ್ಯ. ಒಬ್ಬ ರೋಗಿಗೆ ಆಗುವ ಔಷಧಿ ಇನ್ನೊಬ್ಬ ರೋಗಿಗೆ ಸರಿ ಹೊಂದುವ ಸಾಧ್ಯತೆಗಳು ಕಡಿಮೆ. ವೈದ್ಯರು ರೋಗಿಯ ರೋಗ ಲಕ್ಷಣಗಳು, ಅವರ ವಯಸ್ಸು, ಲಿಂಗ ಹಾಗೂ ದೈಹಿಕ ಸ್ಥಿತಿಗತಿಗಳನ್ನು ತುಲನೆ ಮಾಡಿ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ರೋಗಿಯ ಆವಶ್ಯಕತೆಗಳಿಗೆ ಅನುಸಾರವಾಗಿ ವೈದ್ಯರು ಔಷಧಿಗಳನ್ನು ಬಳಸಲು ಸೂಚಿಸುತ್ತಾರೆ.
ಖಿನ್ನತೆಯ ಚಿಕಿತ್ಸೆಗೆ ಔಷಧಿಗಳೊಂದಿಗೆ ಹಾಗೂ ಹಲವು ಸಲ ಔಷಧಿಗಳ ಬದಲಾಗಿ ಮನೋ ಚಿಕಿತ್ಸೆ ಅಂದರೆ ಮಾತಿನ ಮೂಲಕ ಆಪ್ತ ಸಲಹೆ ನೀಡಲಾಗುತ್ತದೆ. ಅದು ಅತ್ಯಂತ ಪರಿಣಾಮಕಾರಿಯಾಗುವುದು. ಸಾಮಾನ್ಯ ಅಥವಾ ತೀವ್ರವಲ್ಲದ ಖಿನ್ನತೆಗೆ ಆಪ್ತ ಸಲಹೆ ಅತ್ಯಂತ ಸೂಕ್ತ. ಆದರೆ ಅದನ್ನು ಹೆಚ್ಚು ಸಮಯ ಮುಂದುವರಿಸಬೇಕಾಗಬಹುದು. ಅನೇಕ ವಿಧದ ಮನೋಚಿಕಿತ್ಸೆಗಳು ರೋಗಿಗೆ ಒತ್ತಡವನ್ನು/ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ಮತ್ತು ಖಿನ್ನತೆಯನ್ನು ನಿವಾರಿಸಿಕೊಂಡು ಉತ್ತಮ ಆರೋಗ್ಯ ಪಡೆಯುವಲ್ಲಿ ಸಹಕರಿಸುತ್ತವೆ. ವ್ಯಕ್ತಿ ಗುಣವಾಗುತ್ತಾ ಹೋದಂತೆಲ್ಲ ಬದುಕಿನ ಮೇಲೆ ನಿಯಂತ್ರಣ ಪಡೆಯುತ್ತಿರುವ ಭಾವನೆ ಗಳಿಸಿಕೊಳ್ಳುತ್ತಾನೆ.
 ತೀವ್ರ ತರಹದ ಖಿನ್ನತೆಯನ್ನು ಪರಿಹರಿಸಲು, ಎಲೆಕ್ಟ್ರೋಕನ್ವಲ್ಸಿವ್ ತೆರಪಿ ಅತ್ಯುತ್ತಮವೆಂದು ಪರಿಗಣಿತವಾಗಿದೆ. ಆದರೆ, ಈ ವಿಧದ ಚಿಕಿತ್ಸೆಯ ಬಗ್ಗೆ ಬಹಳ ತಪ್ಪುಕಲ್ಪನೆ ಜನರಲ್ಲಿ ಹುಟ್ಟಿಕೊಂಡಿದೆ. ಈ ರೀತಿಯ ಚಿಕಿತ್ಸೆ ಅಪಾಯಕಾರಿ ಹಾಗೂ ವ್ಯಕ್ತಿಯನ್ನು ಮಂಕು ಮಾಡುತ್ತದೆ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಇದಕ್ಕೆ ಇಂಬು ಕೊಡುವಂತೆ, ಟಿ.ವಿ., ಸಿನೆಮಾಗಳಲ್ಲಿ ಈ ಚಿಕಿತ್ಸೆಯನ್ನು ಬಹಳ ಕ್ರೂರವಾಗಿ ನಿರೂಪಿಸುತ್ತಾರೆ. ತೀವ್ರ ತರಹದ ಖಿನ್ನತೆಗೆ, ಈ ಚಿಕಿತ್ಸೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ ಹಾಗೂ ರೋಗಿಗೆ ಇದು ಕ್ಷಿಪ್ರವಾದ ಪರಿಹಾರ ಒದಗಿಸಬಲ್ಲುದು. ಎಷ್ಟೋ ಸಲ, ಆತ್ಮಹತ್ಯೆಯ ಯೋಚನೆಗೊಳಗಾದ ರೋಗಿಗಳ ಜೀವವನ್ನೂ ಅದು ಉಳಿಸಬಲ್ಲುದು.
 ♦ ಯಾವ ಚಿಕಿತ್ಸಾ ವಿಧಾನಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆಯೋ, ಯಾವುದನ್ನು ತಜ್ಞರು ಶಿಫಾರಸು ಮಾಡುತ್ತಾರೋ, ಅಂಥ ಚಿಕಿತ್ಸಾ ವಿಧಾನಗಳನ್ನು ಮಾತ್ರ ಬಳಸಿ, ಅವೈಜ್ಞಾನಿಕ ಚಿಕಿತ್ಸಾ ಕ್ರಮಗಳಿಗೆ ಒಳಗಾಗಿ ತೊಂದರೆ ಪಡುವುದನ್ನು ತಪ್ಪಿಸಬಹುದು.

ಖಿನ್ನತೆಯನ್ನು ಗುಣ ಪಡಿಸುವುದರ ಜತೆಗೆ, ಅದು ಮರುಕಳಿಸದಂತೆ ತಡೆಗಟ್ಟುವುದೂ ಆವಶ್ಯಕ. ಸೂಕ್ತವಾದ ಚಿಕಿತ್ಸೆಯಿಂದ ಖಿನ್ನತೆಗೊಳಗಾದ ವ್ಯಕ್ತಿ ಅದರಿಂದ ಮುಕ್ತಿ ಹೊಂದಿ, ಎಲ್ಲರಂತೆ ಬಾಳಿ, ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಸಾಧ್ಯ.

ಖಿನ್ನತೆಯ ಚಿಹ್ನೆಗಳು
♦ದಿನದ ಹೆಚ್ಚು ಸಮಯ ನಿರಂತರ ಬೇಸರ, ದುಃಖ ಮತ್ತು ನಿರ್ಲಕ್ಷ್ಯ ಭಾವ.
♦ಹಿಂದೆ ಖುಷಿ ಕೊಡುತ್ತಿದ್ದ ಚಟುವಟಿಕೆಗಳು ಉದಾ: ಟಿ.ವಿ. ವೀಕ್ಷಣೆ, ಮಕ್ಕಳ ಜೊತೆ ಆಟ-ಪಾಠ, ಸಹಪಾಠಿ-ಹೆಂಡತಿಯೊಡನೆ ಒಡನಾಟ, ದೈನಂದಿನ ಚಟುವಟಿಕೆಗಳಲ್ಲಿ ನಿರುತ್ಸಾಹ.
♦ಅತಿ ಶೀಘ್ರವಾಗಿ ಸುಸ್ತಾಗುವಿಕೆ.
♦ ಹಸಿವು ಕ್ಷೀಣಿಸುವಿಕೆ ಮತ್ತು ತೂಕ ಕಡಿಮೆಯಾಗುವ ಸಾಧ್ಯತೆ.
♦ ಕೆಲವರಲ್ಲಿ ಅತಿ ಹಸಿವೆಯಿಂದ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಿ, ತೂಕದಲ್ಲಿ ಹೆಚ್ಚಳ.
♦ ಸಾಮಾನ್ಯವಾಗಿ ನಿದ್ರಾಹೀನತೆ - ನಿದ್ರೆ ಬೀಳಲು ತೊಂದರೆ ಅಥವಾ ಬೇಗನೆ ಎಚ್ಚರವಾಗುವ ಸಂಭವ. ಕೆಲವರು ಹೆಚ್ಚು ನಿದ್ದೆ (hypersomnia) ಮಾಡುತ್ತಾರೆ, ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ.
♦ ಭವಿಷ್ಯದ ಬಗ್ಗೆ ನಿರಾಶಾಭಾವನೆ- ಭವಿಷ್ಯವೆಲ್ಲ ಕತ್ತಲೆ, ತಾನು ನಿರುಪಯುಕ್ತ, ಅಸಹಾಯಕ, ಇತರರಿಗೆ ಹೊರೆಯೆಂಬ ಭಾವನೆ, ಸತತವಾಗಿ ಪಾಪ ಪ್ರಜ್ಞೆ ಕಾಡುವುದು.
♦ ನೋವುಗಳು-ಶಾರೀರಿಕವಾಗಿ ಕಾಡುವ ನೋವುಗಳು. ಮೈ-ಕೈ ಸೊಂಟ, ತಲೆ, ಹೊಟ್ಟೆ ಹೀಗೆ ಹಲವಾರು ನೋವುಗಳು-ಇದಕ್ಕೆ ದೇಹದಲ್ಲಿ ಯಾವುದೇ ತೊಂದರೆ ಇರಬೇಕಾಗಿಲ್ಲ.
♦ ಕೋಪ, ಸಿಟ್ಟು, ಅತಿಯಾದ ಹೆದರಿಕೆ, ಅಳುಕು.
♦ ಖಿನ್ನತೆಗೊಳಗಾದ ವ್ಯಕ್ತಿ ಅತಿಯಾದ ಉದ್ವಿಗ್ನತೆ, ಚಿಂತೆಗಳಿಂದಾಗಿ ಕಣ್ಣು ತುಂಬಿಕೊಂಡು ಆಗಾಗ ಅಳುವುದು ಸಾಮಾನ್ಯ.
♦ ಅತಿಯಾದ ಹಾಗೂ ಕಾರಣವಿಲ್ಲದ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.
♦ ನಿರ್ಧಾರ ಕೈಗೊಳ್ಳಲು ಕಷ್ಟವಾಗುವುದು, ಏಕಾಗ್ರತೆಯಲ್ಲಿ ಕೊರತೆ, ಮರೆಗುಳಿತನವೂ ಸಾಮಾನ್ಯ.
♦ ಆತ್ಮಹತ್ಯೆಯ ಸತತ ಯೋಚನೆಗಳು, ಆತ್ಮಹತ್ಯೆಗೆ ಯೋಜಿಸುವುದು ಅಥವಾ ಪ್ರಯತ್ನಿಸುವುದು.
♦ ಚಿಕಿತ್ಸೆಗೆ ಒಗ್ಗದ ನಿರಂತರವಾಗಿ ಕಾಡುವ ದೈಹಿಕ ರೋಗ ಚಿಹ್ನೆಗಳು.

Writer - ಡಾ. ಕರುಣಾಕರ ಬಂಗೇರ

contributor

Editor - ಡಾ. ಕರುಣಾಕರ ಬಂಗೇರ

contributor

Similar News

ಜಗದಗಲ
ಜಗ ದಗಲ