×
Ad

ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ರೆಪೊ ರೇಟ್’ಗೂ ‘ರಿವರ್ಸ್ ರೆಪೊ ರೇಟ್’ಗೂ ಏನು ವ್ಯತ್ಯಾಸ...?

Update: 2018-03-31 19:26 IST

ಪ್ರತಿ ಬಾರಿ ಭಾರತೀಯ ರಿಜರ್ವ್ ಬ್ಯಾಂಕು ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪರಾಮರ್ಶಿಸಿದಾಗ ರೆಪೊ ರೇಟ್ ಮತ್ತು ರಿವರ್ಸ್ ರೆಪೊ ರೇಟ್ ಎಂಬ ಶಬ್ದಗಳು ಹೆಚ್ಚಾಗಿ ಕೇಳಿಬರುತ್ತವೆ. ಇವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಶಬ್ದಗಳಾಗಿವೆ. ವಾಸ್ತವದಲ್ಲಿ ರೆಪೊ ರೇಟ್ ಮತ್ತು ರಿವರ್ಸ್ ರೆಪೊ ರೇಟ್ ಎಂದರೇನು?

ರೆಪೊ ರೇಟ್ ವಾಣಿಜ್ಯ ಬ್ಯಾಂಕುಗಳು ಮಾರಾಟ ಮಾಡುವ ಸೆಕ್ಯೂರಿಟಿಗಳನ್ನು ಖರೀದಿಸುವಾಗ ಆರ್‌ಬಿಐ ವಿಧಿಸುವ ಬಡ್ಡಿದರ ವಾಗಿದ್ದರೆ, ರಿವರ್ಸ್ ರೆಪೊ ರೇಟ್ ಅದು ತಮ್ಮಲ್ಲಿಯ ಹೆಚ್ಚುವರಿ ನಗದನ್ನು ತನ್ನ ಬಳಿ ಠೇವಣಿಯಿಡುವ ಬ್ಯಾಂಕುಗಳಿಗೆ ನೀಡುವ ಬಡ್ಡಿದರವಾಗಿದೆ.

ರೆಪೊ ರೇಟ್

ಬ್ಯಾಂಕುಗಳು ತಮಗೆ ಅಗತ್ಯವಾದಾಗ ತಮ್ಮ ಬಾಂಡ್‌ಗಳು ಮತ್ತು ಸೆಕ್ಯೂರಿಟಿಗಳನ್ನು ಆರ್‌ಬಿಐಗೆ ಮಾರಾಟ ಮಾಡಿ ಸಾಲದ ರೂಪದಲ್ಲಿ ಹಣವನ್ನು ಪಡೆದುಕೊಳ್ಳುತ್ತವೆ. ಇದಕ್ಕೆ ಆರ್‌ಬಿಐ ವಿಧಿಸುವ ಬಡ್ಡಿದರ ರೆಪೊ ರೇಟ್ ಎನ್ನುವುದು ನಿಮಗೆ ಈಗ ಅರ್ಥವಾಗಿರಬಹುದು. ತಮ್ಮ ವೆಚ್ಚಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಅಥವಾ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬ್ಯಾಂಕುಗಳು ಈ ಸಾಲವನ್ನು ಪಡೆದುಕೊಳ್ಳುತ್ತವೆ. ಬ್ಯಾಂಕುಗಳು ಮತ್ತು ಆರ್‌ಬಿಐ ಮರುಖರೀದಿ ಒಪ್ಪಂದವೊಂದಕ್ಕೆ ಸಹಿ ಮಾಡಿರುತ್ತವೆ ಮತ್ತು ನಿಗದಿತ ದಿನಾಂಕದಂದು ಪೂರ್ವ ನಿರ್ಧರಿತ ದರದಲ್ಲಿ ಸೆಕ್ಯೂರಿಟಿಗಳ ಮರುಖರೀದಿಯ ಬಗ್ಗೆ ಈ ಒಪ್ಪಂದದಲ್ಲಿ ಉಲ್ಲೇಖಿಸಲಾಗಿರುತ್ತದೆ.

ರಿವರ್ಸ್ ರೆಪೊ ರೇಟ್

ಇದು ಆರ್‌ಬಿಐ ತನ್ನ ಟ್ರೆಝರಿಯಲ್ಲಿ ಬ್ಯಾಂಕುಗಳು ಠೇವಣಿಯಿಡುವ ಹಣಕ್ಕೆ ನೀಡುವ ಬಡ್ಡಿದರವಾಗಿದೆ. ಇದು ರೆಪೊ ರೇಟ್‌ಗೆ ತದ್ವಿರುದ್ಧವಾಗಿದೆ. ಬ್ಯಾಂಕುಗಳು ತಮ್ಮ ಬಳಿ ಹೆಚ್ಚುವರಿ ನಗದು ಹಣವಿದ್ದಾಗ ಅದನ್ನು ಆರ್‌ಬಿಐ ಬಳಿ ಠೇವಣಿಯಿಡುತ್ತವೆ. ಇದು ಬ್ಯಾಂಕುಗಳು ತಮ್ಮ ಖಾತೆದಾರರಿಗೆ ಅಥವಾ ಇತರ ಸಂಸ್ಥೆಗಳಿಗೆ ಸಾಲ ನೀಡುವುದಕ್ಕಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News