ಕ್ಯಾಲಿಫೋರ್ನಿಯ: ಕರಿಯ ಯುವಕನ ಹತ್ಯೆ ಖಂಡಿಸಿ ಭಾರೀ ಪ್ರತಿಭಟನೆ

Update: 2018-03-31 17:21 GMT

ಸ್ಯಾಕ್ರಮೆಂಟೊ (ಅಮೆರಿಕ), ಮಾ. 31: ಇತ್ತೀಚೆಗೆ ನಿರಾಯುಧ ಕರಿಯ ಯುವಕನೋರ್ವನನ್ನು ಪೊಲೀಸರು ಗುಂಡು ಹಾರಿಸಿ ಕೊಂದಿರುವುದನ್ನು ವಿರೋಧಿಸಿ ಕ್ಯಾಲಿಫೋರ್ನಿಯ ರಾಜಧಾನಿ ಸ್ಯಾಕ್ರಮೆಂಟೊದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಆತನ ಬೆನ್ನಿಗೆ ಗುಂಡು ಹಾರಿಸಲಾಗಿದೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

22 ವರ್ಷದ ಸ್ಟೀಫನ್ ಕ್ಲಾರ್ಕ್‌ರನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಹಲವು ದಿನಗಳ ಹಿಂದೆ ಕೊಂದಿದ್ದಾರೆ ಎಂಬುದಾಗಿ ಸಿಟಿ ಹಾಲ್‌ನಲ್ಲಿ ನೆರೆದ ಪ್ರತಿಭಟನಕಾರರು ಆರೋಪಿಸಿದರು. ಯುವಕನ ಸಾವಿನ ಬಗ್ಗೆ ಪೊಲೀಸರು ನೀಡುತ್ತಿರುವ ಹೇಳಿಕೆಗೂ, ಮರಣೋತ್ತರ ಪರೀಕ್ಷೆಯ ವರದಿಗೂ ವ್ಯತ್ಯಾಸವಿರುವ ಹಿನ್ನೆಲೆಯಲ್ಲಿ ಯುವಕನ ನೆರೆಯವರು ಹಾಗೂ ಸ್ನೇಹಿತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಪ್ಪು ಮುಸುಕುಗಳನ್ನು ಧರಿಸಿದ ಪ್ರತಿಭಟನಕಾರರು, ‘ನಮ್ಮನ್ನು ಗುಂಡು ಹಾರಿಸಿ ಕೊಲ್ಲಿ, ನಾವು ನಿಮ್ಮನ್ನು ಬಂದ್ ಮಾಡುತ್ತೇವೆ’ ಎಂಬುದಾಗಿ ಮೆಗಾಫೋನ್‌ನಲ್ಲಿ ಘೋಷಣೆಗಳನ್ನು ಕೂಗಿದರು.

ಮೃತಪಟ್ಟ ಯುವಕನ ಹೆಸರನ್ನು ಏಕಸ್ವರದಲ್ಲಿ ಕೂಗುತ್ತಾ ಪ್ರತಿಭಟನಕಾರರು ಸಿಟಿ ಹಾಲ್‌ನಲ್ಲಿ ನೆರೆದರು ಹಾಗೂ ಬಳಿಕ ಓಲ್ಡ್ ಸ್ಯಾಕ್ರಮೆಂಟೊದತ್ತ ತೆರಳಿದರು.

ನಿರಾಯುಧ ಕಪ್ಪು ವರ್ಣೀಯರನ್ನು ಪೊಲೀಸರು ಹತ್ಯೆ ನಡೆಸುತ್ತಿರುವುದು ಅಮೆರಿಕದಾದ್ಯಂತ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಇದು ಅಮೆರಿಕದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಇರುವ ತಾರತಮ್ಯವನ್ನು ತೋರಿಸುತ್ತದೆ ಎಂಬ ಆರೋಪಗಳು ಎದ್ದಿವೆ.

ಬೆನ್ನಿಗೆ ಗುಂಡು ಹಾರಿಸಿದ ಪೊಲೀಸರು: ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆ

ಇಬ್ಬರು ಮಕ್ಕಳ ತಂದೆಯನ್ನು ಆತನ ಅಜ್ಜಿ ಮನೆಯ ಹಿತ್ತಲಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು. ಆತನ ಬಳಿ ಬಂದೂಕು ಇದೆ ಎಂಬುದಾಗಿ ಭಾವಿಸಿ ಗುಂಡು ಹಾರಿಸಲಾಗಿತ್ತು ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ಆತನ ಬಳಿಕ ಐಫೋನ್ ಮಾತ್ರ ಪತ್ತೆಯಾಗಿದೆ.

ಕ್ಲಾರ್ಕ್ ತಮ್ಮತ್ತ ಆಕ್ರಮಣಕಾರಿ ರೀತಿಯಲ್ಲಿ ಬಂದನು ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ಸಾವಿನ ಬಗ್ಗೆ ಹೆತ್ತವರು ನಡೆಸಿದ ಖಾಸಗಿ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಆತನ ದೇಹದ ಒಳಗಿದ್ದ 8 ಗುಂಡುಗಳ ಪೈಕಿ ಯಾವುದನ್ನೂ ಎದುರಿನಿಂದ ಹಾರಿಸಲಾಗಿಲ್ಲ.

ಕ್ಲಾರ್ಕ್‌ಗೆ 6 ಬಾರಿ ಹಿಂಬದಿಯಿಂದ ಗುಂಡು ಹಾರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಇದು ಪೊಲೀಸರ ಹೇಳಿಕೆಗೆ ವಿರುದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News