ಹಿರಿಯ ಅಧಿಕಾರಿಯಿಂದ ಲೈಂಗಿಕ ಹಲ್ಲೆ: ವಿಶ್ವಸಂಸ್ಥೆ ಉದ್ಯೋಗಿ ದೂರು

Update: 2018-03-31 17:27 GMT

ನ್ಯೂಯಾರ್ಕ್, ಮಾ. 31: ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ, ಆದರೆ ತನ್ನ ದೂರನ್ನು ವಿಶ್ವಸಂಸ್ಥೆಯು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದಾಗಿ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.

2015ರಲ್ಲಿ ನಡೆದ ಸಮ್ಮೇಳನವೊಂದರ ವೇಳೆ, ವಿಶ್ವಸಂಸ್ಥೆಯ ಸಹಾಯಕ ಮಹಾಕಾರ್ಯದರ್ಶಿ ಲೂಯಿಸ್ ಲಾರಸ್ ಹೊಟೇಲ್ ಲಿಫ್ಟ್‌ನಲ್ಲಿ ತನ್ನ ಕೈಹಿಡಿದೆಳೆದರು, ಬಲವಂತವಾಗಿ ಚುಂಬಿಸಿದರು ಹಾಗೂ ತನ್ನ ಕೋಣೆಗೆ ಎಳೆಯಲು ಪ್ರಯತ್ನಿಸಿದರು ಎಂಬುದಾಗಿ ಸಿಎನ್‌ಎನ್‌ಗೆ ಶುಕ್ರವಾರ ನೀಡಿದ ಸಂದರ್ಶನವೊಂದರಲ್ಲಿ ಮಾರ್ಟಿನಾ ಬ್ರೋಸ್ಟ್ರಾಮ್ ಆರೋಪಿಸಿದ್ದಾರೆ.

‘‘ನಾನು ಅವರಲ್ಲಿ ಗೋಗರೆಯುತ್ತಿದ್ದೆ, ನನಗೆ ಲಿಫ್ಟ್‌ನಿಂದ ಹೊರ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ, ಅದನ್ನು ಎದುರಿಸುತ್ತಿದ್ದೆ’’ ಎಂದು ವಿಶ್ವಸಂಸ್ಥೆಯ ಜಾಗತಿಕ ಏಡ್ಸ್ ಕಾರ್ಯಕ್ರಮ ‘ಯುಎನ್‌ಏಡ್ಸ್’ನಲ್ಲಿ ನೀತಿ ಸಲಹಾಕಾರ್ತಿಯಾಗಿರುವ ಮಾರ್ಟಿನಾ ಹೇಳಿದ್ದಾರೆ.

ಈ ಆರೋಪಗಳ ಬಗ್ಗೆ 14 ತಿಂಗಳು ತನಿಖೆ ನಡೆಯಿತು. ಅಂತಿಮವಾಗಿ, ಮಾರ್ಟಿನಾರ ಆರೋಪಗಳು ಸಾಬೀತಾಗಿಲ್ಲ ಎಂಬುದಾಗಿ ತನಿಖಾ ಸಮಿತಿ ವರದಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News