ಭಾರತ, ಪಾಕ್ ನಡುವಿನ ದ್ವೇಷ ನಿಂತರೆ ಭಾರೀ ಆರ್ಥಿಕ ಅಭಿವೃದ್ಧಿ: ಭಾರತೀಯ ರಾಯಭಾರಿ

Update: 2018-03-31 17:33 GMT

ಲಾಹೋರ್, ಮಾ. 31: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವ್ಯಾಪಾರವನ್ನು ಈಗಿನ 5 ಬಿಲಿಯ ಡಾಲರ್ (ಸುಮಾರು 32,540 ಕೋಟಿ ರೂಪಾಯಿ)ನಿಂದ 30 ಬಿಲಿಯ ಡಾಲರ್ (ಸುಮಾರು 2 ಲಕ್ಷ ಕೋಟಿ ರೂಪಾಯಿ)ಗೆ ಏರಿಸಬಹುದಾಗಿದೆ, ಆದರೆ ಅದನ್ನು ಸಾಧಿಸಲು ಉಭಯ ದೇಶಗಳು ತಮ್ಮ ನಡುವಿನ ಶತ್ರುತ್ವವನ್ನು ತೊರೆಯಬೇಕು ಎಂದು ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯ ಶುಕ್ರವಾರ ಹೇಳಿದ್ದಾರೆ.

ಪರಸ್ಪರ ಪ್ರಯೋಜನಕಾರಿಯಾಗಿರುವ ಆರ್ಥಿಕ ಬಾಂಧವ್ಯಕ್ಕಿಂತ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಪಡಿಸುವ ಇನ್ನೊಂದು ಉತ್ತಮ ವಿಧಾನವಿಲ್ಲ ಎಂದು ಇಲ್ಲಿ ಲಾಹೋರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

ಉಭಯ ದೇಶಗಳ ನಡುವಿನ ಸಂಬಂಧಗಳು ವ್ಯಾಪಾರ ಮತ್ತು ಆರ್ಥಿಕತೆ ಆಧಾರಿತವಾಗಿರಬೇಕೇ ಹೊರತು, ಹಿಂಸೆ ಮತ್ತು ಯದ್ಧದಿಂದಲ್ಲ ಎಂದರು.

ತಮ್ಮ ರಾಜತಾಂತ್ರಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಉಭಯ ದೇಶಗಳ ಆರೋಪಗಳ ಬಳಿಕ, ಉಭಯ ದೇಶಗಳ ಸಂಬಂಧಗಳು ತಳಕ್ಕೆ ಇಳಿದಿರುವ ಸಮಯದಲ್ಲಿ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News