ಸಿಬಿಎಸ್‌ಇ : ದಿಲ್ಲಿ, ಹರ್ಯಾಣದಲ್ಲಿ ಮಾತ್ರ 10ನೇ ತರಗತಿ ಮರುಪರೀಕ್ಷೆ
ಹೊಸದಿಲ್ಲಿ, ಮಾ.31: ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ನಡೆಸಲಾಗುವ ಮರುಪರೀಕ್ಷೆ ದಿಲ್ಲಿ ಮತ್ತು ಹರ್ಯಾಣದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಒಟ್ಟು 16 ಲಕ್ಷ ವಿದ್ಯಾರ್ಥಿಗಳಲ್ಲಿ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯಬೇಕಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಕೆಲವು ಸುದ್ದಿವಾಹಿನಿಗಳಲ್ಲಿ ಮರುಪರೀಕ್ಷೆಯ ಕುರಿತು ಗೊಂದಲ ಮೂಡಿಸುವ ರೀತಿಯಲ್ಲಿ ಹೆಡ್‌ಲೈನ್ ಪ್ರಸಾರವಾಗುತ್ತಿದೆ ಎಂದ ಅವರು, ದಿಲ್ಲಿ ಮತ್ತು ಹರ್ಯಾಣ ಹೊರತುಪಡಿಸಿ ಇತರ ರಾಜ್ಯಗಳ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯಬೇಕಿಲ್ಲ. ಆದರೆ ಈ ವಾರ ಸೋರಿಕೆಯಾಗಿರುವ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಯ ಮರುಪರೀಕ್ಷೆ ದೇಶದಾದ್ಯಂತ ಎಪ್ರಿಲ್ 25ರಂದು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಪೊಲೀಸರ ಪ್ರಕಾರ, 10ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳ ಸುಮಾರು 60ರಷ್ಟು ಮಂದಿ ಸಿಬಿಎಸ್‌ಇ ಪ್ರಶ್ನೆಪತ್ರಿಕೆಯನ್ನು ಹಂಚಿಕೊಂಡಿದ್ದಾರೆ. ಈ ಗುಂಪು ದಿಲ್ಲಿಯ ಹೊರವಲಯದಲ್ಲಿ ಹಾಗೂ ದಿಲ್ಲಿ ಮತ್ತು ಹರ್ಯಾಣದ ಗಡಿಭಾಗದಲ್ಲಿ ಸಕ್ರಿಯವಾಗಿದೆ. ಸಿಬಿಎಸ್‌ಇ ನೀಡಿದ ದೂರಿನಲ್ಲಿ ತಿಳಿಸಲಾಗಿರುವ ನಾಲ್ಕು ವಾಟ್ಸಾಪ್ ನಂಬರ್‌ಗಳನ್ನು 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಪ್ರಸಾರ ಮಾಡಲು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.