ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣ: ಗುಪ್ತಚರ ಅಧಿಕಾರಿಗಳ ಸಮನ್ಸ್ ರದ್ದು
ಅಹ್ಮದಾಬಾದ್, ಮಾ.31: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಪ್ತಚರ ವಿಭಾಗದ ಇಬ್ಬರು ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಅನ್ನು ವಿಶೇಷ ಸಿಬಿಐ ಕೋರ್ಟ್ ತಳ್ಳಿಹಾಕಿದೆ. 2004ರಲ್ಲಿ ನಡೆದ ನಕಲಿ ಎನ್‌ಕೌಂಟರ್ ಘಟನೆಯ ಸಂದರ್ಭ ಕೇಂದ್ರ ಗುಪ್ತಚರ ಸಹಾಯಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್ ವಾಂಖೆಡೆ ಮತ್ತು ಟಿ.ಎಸ್.ಮಿತ್ತಲ್ ವಿರುದ್ಧ ಜಾರಿಗೊಳಿಸಲಾಗಿದ್ದ ಸಮನ್ಸ್ ಅನ್ನು ವಿಶೇಷ ಸಿಬಿಐ ನ್ಯಾಯಾಧೀಶ ಜೆ.ಬಿ. ಪಾಂಡ್ಯ ರದ್ದುಗೊಳಿಸಿದ್ದಾರೆ.
ತಮ್ಮ ವಿರುದ್ಧ ಜಾರಿಗೊಳಿಸಲಾಗಿದ್ದ ಸಮನ್ಸ್ ವಿರುದ್ಧ ಈ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದರು. ಕೆಳನ್ಯಾಯಾಲಯವು ಇನ್ನಿಬ್ಬರು ಗುಪ್ತಚರ ಅಧಿಕಾರಿಗಳಾದ ವಿಶೇಷ ನಿರ್ದೇಶಕ ರಾಜಿಂದರ್ ಕುಮಾರ್ ಹಾಗೂ ಅಧಿಕಾರಿ ಎಂ.ಎಸ್.ಸಿನ್ಹಾರಿಗೂ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಈ ಅಧಿಕಾರಿಗಳು ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿಲ್ಲ. ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಎಲ್ಲಾ ನಾಲ್ವರು ಅಧಿಕಾರಿಗಳಿಗೂ ಅನ್ವಯಿಸುತ್ತದೆಯೇ ಎಂಬುದು ಆದೇಶದ ಪ್ರತಿ ದೊರೆತ ಬಳಿಕ ಸ್ಪಷ್ಟವಾಗಲಿದೆ ಎಂದು ಸಿಬಿಐ ವಕೀಲ ಆರ್.ಸಿ.ಕೋಡೆಕರ್ ತಿಳಿಸಿದ್ದಾರೆ. ಈ ನಾಲ್ವರು ಅಧಿಕಾರಿಗಳ ವಿರುದ್ಧ ಕೊಲೆ, ಕ್ರಿಮಿನಲ್ ಒಳಸಂಚು, ಅಕ್ರಮ ಬಂಧನ ಹಾಗೂ ಅಪಹರಣ ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ.
ಅಹ್ಮದಾಬಾದ್ ಪೊಲೀಸರು 2014ರ ಜೂನ್‌ನಲ್ಲಿ ನಗರದ ಹೊರಭಾಗದಲ್ಲಿ ನಕಲಿ ಎನ್‌ಕೌಂಟರ್ ನಡೆಸಿ ಇಶ್ರತ್ ಜಹಾನ್, ಆಕೆಯ ಸ್ನೇಹಿತ ಜಾವೆದ್ ಶೇಖ್ ಅಲಿಯಾಸ್ ಪ್ರಾಣೇಶ್, ಅಮ್ಝದ್ ಅಲಿ ರಾಣಾ ಹಾಗೂ ಝೀಷನ್ ರೊಹರ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ನಾಲ್ಕು ಮಂದಿ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬ ಗುಂಪಿನ ಕಾರ್ಯಕರ್ತರು ಎಂದು ಪೊಲೀಸರು ಆರೋಪಿಸಿದ್ದರು.