ಸ್ಮಿತ್ ಕ್ರಿಕೆಟ್ ಕಿಟ್ ಬ್ಯಾಗ್ ಗ್ಯಾರೇಜ್‌ಗೆ ಎಸೆದ ತಂದೆ ಪೀಟರ್

Update: 2018-04-01 18:08 GMT

ಮೆಲ್ಬೋರ್ನ್,ಎ.1: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್‌ನಿಂದ 12 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಅವರ ಕ್ರಿಕೆಟ್ ಕಿಟ್‌ಗಳಿರುವ ಬ್ಯಾಗ್‌ನ್ನು ಅವರ ತಂದೆ ಪೀಟರ್ ಅವರು ಗ್ಯಾರೇಜ್‌ಗೆ ಎಸೆದಿರುವ ಘಟನೆ ನಡೆದಿದೆ.

 ಚೆಂಡು ವಿರೂಪ ಪ್ರಕರಣದಲ್ಲಿ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ತಪ್ಪಿತಸ್ಥರಾಗಿದ್ದು, ಘಟನೆಯ ಬಳಿಕ ಈ ಮೂವರು ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರ ಕುಟುಂಬ ಸದಸ್ಯರು ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಪೀಟರ್ ಅವರ ವರ್ತನೆಯೇ ಸಾಕ್ಷಿ. ದಕ್ಷಿಣ ಆಫ್ರಿಕದಿಂದ ವಾಪಸಾದ ಬಳಿಕ ಸ್ಮಿತ್ ಸಿಡ್ನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ ಸ್ಮಿತ್ ಬಳಿ ಅವರ ತಂದೆ ಪೀಟರ್ ನಿಂತುಕೊಂಡು ಎಲ್ಲವನ್ನು ಆಲಿಸಿದ್ದರು.

ಪೀಟರ್ ಅವರು ಪುತ್ರ ಸ್ಮಿತ್ ಕಾರಿನಿಂದ ಕ್ರಿಕೆಟ್ ಕಿಟ್‌ಗಳಿರುವ ಬ್ಯಾಗನ್ನು ಹೊರ ತೆಗೆದು ಗ್ಯಾರೇಜ್‌ನಲ್ಲಿ ಸುರಿಯುತ್ತಿರುವ ದೃಶ್ಯವನ್ನು ಸೆವೆನ್ ನ್ಯೂಸ್ ಚಾನಲ್ ಸೆರೆ ಹಿಡಿದು ಪ್ರಸಾರ ಮಾಡಿದೆ. ‘‘ನನ್ನ ಮಗ ಚೆನ್ನಾಗಿದ್ದಾನೆ. ಅವನು ಉಳಿಯುತ್ತಾನೆ ಎಂದು ಪೀಟರ್ ಪ್ರತಿಕ್ರಿಯಿಸಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ದಕ್ಷಿಣ ಆಫ್ರಿಕ ಟೆಸ್ಟ್ ಸರಣಿಯಿಂದ ಅಮಾನತು ಗೊಂಡು ಸ್ವದೇಶಕ್ಕೆ ವಾಪಸಾಗಿದ್ದ ಸ್ಮಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ,‘‘ನನ್ನ ವರ್ತನೆಯ ಬಗ್ಗೆ ಎಲ್ಲರಲ್ಲೂ ಕ್ಷಮೆ ಕೇಳುವೆ. ನಾನು ಯಾರನ್ನೂ ದೂಷಿಸಿಕೊಳ್ಳದೇ ನನ್ನನ್ನೇ ನಾನು ದೂಷಿಸಿಕೊಳ್ಳುವೆ. ನಾನು ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕನಾಗಿದ್ದೆ. ಕಳೆದ ಶನಿವಾರ ನಡೆದ ಘಟನೆಯ ಸಂಪೂರ್ಣ ಜವಾಬ್ದಾರಿವಹಿಸಿಕೊಳ್ಳುವೆ’’ ಎಂದಿದ್ದರು.

ಘಟನೆಯಿಂದ ಸ್ಮಿತ್ ತಂದೆ ಮಾತ್ರವಲ್ಲ ವಾರ್ನರ್ ಪತ್ನಿ ಕೂಡ ಚಿಂತಿತರಾಗಿದ್ದಾರೆ. ಚೆಂಡು ವಿರೂಪ ಪ್ರಕರಣಕ್ಕೆ ತನ್ನ ಪಾತ್ರವಿದೆ ಎಂದು ತಮ್ಮನ್ನು ತಾವು ದೂಷಿಸಿಕೊಂಡಿದ್ದಾರೆ.

 ‘‘ಇದರಲ್ಲಿ ನನ್ನ ತಪ್ಪು ಕೂಡ ಇದೆ ಎಂದು ನನಗನಿಸುತ್ತಿದೆ. ಇಂತಹ ಯೋಚನೆ ನನ್ನನ್ನು ಸಾಯಿಸುತ್ತಿದೆ’’ ಎಂದು ಸಿಡ್ನಿ ಸಂಡೇ ಟೆಲಿಗ್ರಾಫ್‌ಗೆ ವಾರ್ನರ್ ಪತ್ನಿ ಕಾಂಡೈಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News