ಘೋಷ್ ಬದಲಿಗೆ ಸನೀಲ್ ಶೆಟ್ಟಿ

Update: 2018-04-01 18:20 GMT

ಚೆನ್ನೈ,ಎ.1: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸೌಮ್ಯಜಿತ್ ಘೋಷ್ ಬದಲಿಗೆ ಭಾರತದ ಕಾಮನ್‌ವೆಲ್ತ್ ಗೇಮ್ಸ್‌ನ ಟೇಬಲ್ ಟೆನಿಸ್ ತಂಡಕ್ಕೆ ಸನೀಲ್ ಶೆಟ್ಟಿ ಸೇರ್ಪಡೆಯಾಗಿದ್ದಾರೆ.

 ಕಾಮನ್‌ವೆಲ್ತ್ ಗೇಮ್ಸ್ ಕೌನ್ಸಿಲ್ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಸನೀಲ್ ಶೆಟ್ಟಿ ಅವರನ್ನು ಘೋಷ್ ಸ್ಥಾನಕ್ಕೆ ಆಯ್ಕೆ ಮಾಡಲು ಅನುಮತಿ ನೀಡಿರುವುದು ಭಾರತದ ಪುರುಷರ ಟೇಬಲ್ ಟೆನಿಸ್ ತಂಡಕ್ಕೆ ಹೊಸ ಹುರುಪು ತಂದಿದೆ.

 ಸನೀಲ್ ಭಾರತದ ಟಿಟಿ ತಂಡಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಹೀಗಾಗಿ ಅವರು ಕಾಮನ್‌ವೆಲ್ತ್ ಗೇಮ್ಸ್ ಮಾನ್ಯತೆ ಪತ್ರ ಹಾಗೂ ವೀಸಾವನ್ನು ಪಡೆದಿದ್ದಾರೆ. ಶನಿವಾರ ಟಿಟಿಎಫ್‌ಐ ಕಾರ್ಯದರ್ಶಿ ಎಂಪಿ ಸಿಂಗ್ ಅವರೊಂದಿಗೆ ಗೋಲ್ಡ್‌ಕೋಸ್ಟ್‌ಗೆ ನಿರ್ಗಮಿಸಿದ್ದಾರೆ. ‘‘ನಾನು ಮಾನಸಿಕವಾಗಿ ಗೇಮ್ಸ್‌ಗೆ ಸಜ್ಜಾಗಿದ್ದೇನೆ. ಕೊನೆಗೂ ಅವಕಾಶ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮದು ಬಲಿಷ್ಠ ತಂಡ. ನಾವು ಹಲವು ಪದಕಗಳನ್ನು ಜಯಸಿದ್ದೇವೆ. ಡಬಲ್ಸ್ ಹಾಗೂ ವೈಯಕ್ತಿಕ ವಿಭಾಗದಲ್ಲಿ ಸಿಂಗಾಪುರ ಹಾಗೂ ಇಂಗ್ಲೆಂಡ್ ವಿರುದ್ಧ ಆಡಿದ್ದೇವೆ. ಕಾಮನ್‌ವೆಲ್ತ್‌ನಲ್ಲಿ ನಮ್ಮ ಹಿಂದಿನ ಸಾಧನೆ ಚೆನ್ನಾಗಿದೆ. ಈ ಬಾರಿ ಹೆಚ್ಚು ಪದಕದೊಂದಿಗೆ ವಾಪಸಾಗುವ ವಿಶ್ವಾಸವಿದೆ’’ ಎಂದು ಆಸ್ಟ್ರೇಲಿಯಕ್ಕೆ ತೆರಳುವ ಮೊದಲು ಮುಂಬೈನ ಸನೀಲ್ ಶೆಟ್ಟಿ ಹೇಳಿದ್ದಾರೆ.

9 ಸದಸ್ಯರನ್ನು ಒಳಗೊಂಡ ಭಾರತದ ಟೇಬಲ್ ಟೆನಿಸ್ ತಂಡ ಶುಕ್ರವಾರ ಆಸ್ಟ್ರೇಲಿಯಕ್ಕೆ ತೆರಳಿದೆ. ಸನೀಲ್ ಶೆಟ್ಟಿ ಸಹ ಆಟಗಾರರಾದ ಶರತ್ ಕುಮಾರ್, ಹರ್ಮೀತ್ ದೇಸಾಯಿ, ಜಿ. ಸತ್ಯನ್, ಅಂಥೋನಿ ಅಮಲ್‌ರಾಜ್‌ರನ್ನು ಸೇರಿಕೊಳ್ಳಲಿದ್ದಾರೆ. ಮಹಿಳಾ ತಂಡದಲ್ಲಿ ಮಾನಿಕಾ ಬಾತ್ರಾ, ವೌಮಾ ದಾಸ್, ಮಧುರಿಕಾ ಪಾಟ್ಕರ್, ಪೂಜಾ ಸಹಸ್ರಬುಧೆ ಹಾಗೂ ಸುತೀರ್ಥ ಮುಖರ್ಜಿ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News