ಸಿಂಧುಗೆ ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಳ್ಳುವ ವಿಶ್ವಾಸ

Update: 2018-04-01 18:24 GMT

ಹೊಸದಿಲ್ಲಿ, ಎ.1: ಗಾಯಗೊಂಡಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಕಾಮನ್‌ವೆಲ್ತ್ ಗೇಮ್ಸ್ ವೇಳೆಗೆ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದು ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿರುವ ಸಿಂಧು ಮಂಗಳವಾರ ಹೈದರಾಬಾದ್‌ನಲ್ಲಿ ಗೋಪಿಚಂದ್ ಅಕಾಡಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರ ಬಲ ಪಾದ ಉಳುಕಿತ್ತು.ತಕ್ಷಣವೇ ಎಂಆರ್‌ಐ ಸ್ಕಾನಿಂಗ್‌ಗೆ ಒಳಪಡಿಸಲಾಗಿತ್ತು. ಯಾವುದೇ ಸಮಸ್ಯೆ ಕಾಣಿಸದಿದ್ದರೂ, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು.

ಕಾಮನ್‌ವೆಲ್ತ್ ಗೇಮ್ಸ್‌ಗೆ ತೆರಳಲು ತಯಾರಿ ಚೆನ್ನಾಗಿ ನಡೆಯುತ್ತಿದೆ.ಫಿಟ್‌ನೆಸ್ ಸಮಸ್ಯೆ ಇದ್ದರೂ, ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನ ಎಲ್ಲವೂ ಸರಿಯಾಗಬಹುದು ಎಂದು ಸಿಂಧು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪಿ.ವಿ. ಸಿಂಧು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚು ಜಯಿಸಿದ್ದರು. ಸೈನಾ ನೆಹ್ವಾಲ್ ಅವರು ದಿಲ್ಲಿಯಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಸಿಂಧು ಆಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅವರು ಇದೀಗ ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದಾರೆ. 2014ರಲ್ಲಿ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಂಧು ಆಡುವಾಗ ಅವರಿಗೆ 18 ವರ್ಷ ವಯಸ್ಸಾಗಿತ್ತು. 2013ರಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆಲ್ಲುವ ಮೂಲಕ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. 2014ರಲ್ಲೂ ಅವರು ಕಂಚು ಜಯಿಸಿದರು. 2017ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಜಯಿಸುವ ಮೂಲಕ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 3ನೇ ಪದಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. 2016ರಲ್ಲಿ ರಿಯೋ ಒಲಿಂಪಿಕ್ಸ್‌ನ ಸಿಂಗಲ್ಸ್‌ನಲ್ಲಿ ಸಿಂಧು ಬೆಳ್ಳಿ ಜಯಿಸಿ ಇತಿಹಾಸ ನಿರ್ಮಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News