ಡೇವಿಸ್‌ಕಪ್‌ನಿಂದ ದೂರ ಉಳಿಯಲು ಶರಣ್ ನಿರ್ಧಾರ

Update: 2018-04-01 18:25 GMT

ಹೊಸದಿಲ್ಲಿ,ಎ.1:ಭಾರತದ ಡೇವಿಸ್‌ಕಪ್ ತಂಡದ ಮೀಸಲು ಆಟಗಾರ ದಿವಿಜ್ ಶರಣ್ ಚೀನಾ ವಿರುದ್ಧ ಆಡಲು ಚೀನಾಕ್ಕೆ ತೆರಳದೇ ಇರಲು ನಿರ್ಧರಿಸಿದ್ದಾರೆ. 32 ರ ಹರೆಯದ ಶರಣ್ ಡೇವಿಸ್‌ಕಪ್ ಬದಲಿಗೆ ಎ.6-7ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಶರಣ್ ಈ ನಿಲುವಿನಿಂದ ಎಐಟಿಎ ಆಯ್ಕೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. 44ನೇ ರ್ಯಾಂಕಿನ ಶರಣ್ ಭಾರತದ ಎರಡನೇ ಗರಿಷ್ಠ ರ್ಯಾಂಕಿನ ಆಟಗಾರ. ಆದರೆ, 45ನೇ ರ್ಯಾಂಕಿನ ಲಿಯಾಂಡರ್ ಪೇಸ್ ಅವರನ್ನು ಹಿರಿತನದ ಆಧಾರದಲ್ಲಿ ರೋಹನ್ ಬೋಪಣ್ಣ ಅವರ ಡಬಲ್ಸ್ ಜೊತೆಗಾರನಾಗಿ ಡೇವಿಸ್‌ಕಪ್‌ಗೆ ಆಯ್ಕೆ ಮಾಡಲಾಗಿದೆ. ಶರಣ್‌ಗೆ ಡೇವಿಸ್‌ಕಪ್‌ನಲ್ಲಿ ಆಡುವ ಅವಕಾಶವನ್ನು ದೃಢಪಡಿಸಿದ್ದರೂ ಅವರು ಚೀನಾಕ್ಕೆ ತೆರಳುತ್ತಿಲ್ಲ. ಯೂಕಿ ಭಾಂಬ್ರಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದು, ಒಂದು ವೇಳೆ ಪೇಸ್ ಅಥವಾ ಬೋಪಣ್ಣ ಕೊನೆಯ ಕ್ಷಣದಲ್ಲಿ ಗಾಯಗೊಂಡರೆ ಭಾರತ ಸಮಸ್ಯೆ ಎದುರಿಸಬಹುದು.

ಅಖಿಲ ಭಾರತ ಟೆನಿಸ್ ಸಂಸ್ಥೆಯೊಂದಿಗೆ ಮಾತನಾಡಿರುವ ಶರಣ್, ಅನಿವಾರ್ಯ ಪರಿಸ್ಥಿತಿ ಎದುರಾದರೆ ತಾನು ಚೀನಾಕ್ಕೆ ತೆರಳುವೆ ಎಂದಿದ್ದಾರೆ. ಎಐಟಿಎ ಶರಣ್ ಕೋರಿಕೆಯನ್ನು ಮನ್ನಿಸಿದೆ. ಆದರೆ, ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಶರಣ್ ನಿರ್ಧಾರದಿಂದ ಬೇಸರಗೊಂಡಿದೆ.

ತಾನು ಅಮೆರಿಕದಲ್ಲಿ ಉಳಿದುಕೊಂಡು ಪ್ರಾಕ್ಟೀಸ್ ನಡೆಸುವೆ. ಅಗತ್ಯವಿದ್ದರೆ ಚೀನಾಕ್ಕೆ ಪ್ರಯಾಣಿಸುತ್ತೇನೆ ಎಂದು ಶರಣ್ ತಮಗೆ ತಿಳಿಸಿದ್ದಾಗಿ ಎಐಟಿಎ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News