2ನೇ ಟೆಸ್ಟ್: ಇಂಗ್ಲೆಂಡ್‌ಗೆ ಉತ್ತಮ ಮುನ್ನಡೆ

Update: 2018-04-01 18:29 GMT

ಕ್ರೈಸ್ಟ್‌ಚರ್ಚ್, ಎ.1: ಜೇಮ್ಸ್ ವಿನ್ಸಿ ಹಾಗೂ ಮಾರ್ಕ್ ಸ್ಟೋನ್‌ಮನ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 231 ರನ್ ಮುನ್ನಡೆಯಲ್ಲಿದೆ.

ಟೆಸ್ಟ್‌ನ ಮೂರನೇ ದಿನವಾದ ರವಿವಾರ ಆಟ ಕೊನೆಗೊಂಡಾಗ ಇಂಗ್ಲೆಂಡ್ ತಂಡ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿದೆ. ವಿನ್ಸಿ(76) ಹಾಗೂ ಸ್ಟೋನ್‌ಮನ್(60)ಎರಡನೇ ವಿಕೆಟ್‌ಗೆ 123 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದಾರೆ. ಜೋ ರೂಟ್ ಔಟಾಗದೆ 30 ಹಾಗೂ ಡೇವಿಡ್ ಮಲಾನ್ 19 ರನ್ ಗಳಿಸಿದ್ದಾರೆ.

ಇದಕ್ಕೆ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 192 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಝಿಲೆಂಡ್ 278 ರನ್‌ಗೆ ಆಲೌಟಾಯಿತು. 77 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಾಟ್ಲಿಂಗ್ 85 ರನ್ ಗಳಿಸಿದಾಗ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. ಐಶ್ ಸೋಧಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ವಾಟ್ಲಿಂಗ್ ಅವರೊಂದಿಗೆ 48 ರನ್ ಜೊತೆಯಾಟ ನಡೆಸಿದ ಟಿಮ್ ಸೌಥಿ(50,48 ಎಸೆತ) ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸುವ ಮೊದಲು 4ನೇ ಅರ್ಧಶತಕ ಪೂರೈಸಿದರು. ನೀಲ್ ವಾಗ್ನರ್ ಹಾಗೂ ಬೌಲ್ಟ್ ಕೊನೆಯ ವಿಕೆಟ್‌ನಲ್ಲಿ 39 ರನ್ ಜೊತೆಯಾಟ ನಡೆಸಿದರು. ಬೌಲ್ಟ್ 16 ರನ್‌ಗೆ ವಿಕೆಟ್ ಒಪ್ಪಿಸಿದರು. ವಾಗ್ನರ್ ಔಟಾಗದೆ 24 ರನ್ ಗಳಿಸಿದರು.

ಸ್ಟುವರ್ಟ್ ಬ್ರಾಡ್ 54 ರನ್‌ಗೆ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ತನ್ನ 115ನೇ ಟೆಸ್ಟ್‌ನಲ್ಲಿ 9ನೇ ಶ್ರೇಷ್ಠ ಪ್ರದರ್ಶನ ನೀಡಿದರು. ಆ್ಯಂಡರ್ಸನ್ 76 ರನ್‌ಗೆ 4 ವಿಕೆಟ್ ಕಬಳಿಸಿ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು.

 29 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಹಿರಿಯ ಆರಂಭಿಕ ಆಟಗಾರ ಅಲಿಸ್ಟರ್ ಕುಕ್(14) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. 4 ಇನಿಂಗ್ಸ್‌ಗಳಲ್ಲಿ ಕೇವಲ 23 ರನ್ ಗಳಿಸಿರುವ ಕುಕ್ ಸರಣಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದರು. ನಾಲ್ಕು ಬಾರಿಯೂ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದ ವಿನ್ಸಿ(60,139 ಎಸೆತ, 6 ಬೌಂಡರಿ) ಹಾಗೂ ಸ್ಟೋನ್‌ಮನ್(76,128 ಎಸೆತ, 10 ಬೌಂಡರಿ) ಇಂಗ್ಲೆಂಡ್ ಇನಿಂಗ್ಸ್ ಆಧರಿಸಿದರು. ಮೂರು ತಿಂಗಳ ಹಿಂದೆ ಆಸ್ಟ್ರೇಲಿಯ ವಿರುದ್ಧ 56 ರನ್ ಗಳಿಸಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದ ಸ್ಟೋನ್‌ಮನ್ 35 ರನ್ ಗಳಿಸಿದ್ದಾಗ ಡಿಆರ್‌ಎಸ್ ಪದ್ಧತಿಯ ಮೊರೆ ಹೋಗಿ ಜೀವದಾನ ಪಡೆದಿದ್ದರು.

48 ರನ್ ಗಳಿಸಿದ್ದಾಗ ರಾಸ್ ಟೇಲರ್ ಕ್ಯಾಚ್ ಕೈಚೆಲ್ಲಿದರು. ಟಿಮ್ ಸೌಥಿ ಎಸೆತವನ್ನು ಬೌಂಡರಿಗೆರೆ ದಾಟಿಸುವ ಮೂಲಕ ಅರ್ಧಶತಕ ಪೂರೈಸಿದರು. 60 ರನ್ ಗಳಿಸಿದ್ದಾಗ ಸೌಥಿಗೆ ವಿಕೆಟ್ ಒಪ್ಪಿಸಿದರು. ಸ್ಟೋನ್‌ಮನ್ ಔಟಾದ ಬೆನ್ನಿಗೇ ವಿನ್ಸಿ ಅವರು ಬೌಲ್ಟ್ ಎಸೆತವನ್ನು ಟೇಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಪಂದ್ಯ ಮಂದ ಬೆಳಕಿನಿಂದಾಗಿ ಬೇಗನೆ ಕೊನೆಗೊಳ್ಳುವ ತನಕ ರೂಟ್ ಹಾಗೂ ಮಲಾನ್ ತಂಡವನ್ನು ಮುನ್ನಡೆಸಿದರು. ಈ ಇಬ್ಬರು 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 37 ರನ್ ಸೇರಿಸಿದ್ದಾರೆ. ಬೌಲ್ಟ್(2-38) ಎರಡು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News