ಅಸ್ತಮಾ ಗರ್ಭಾವಸ್ಥೆಯ ಮೇಲೆ ಪರಿಣಾಮ ಬೀರುತ್ತದೆಯೇ?: ಇಲ್ಲಿದೆ ಮಾಹಿತಿ

Update: 2018-04-02 09:51 GMT

ಅಸ್ತಮಾ ಪೀಡಿತರಾಗಿರುವ ಮಹಿಳೆಯರು ಕೆಲವು ವಿಷಯಗಳ ಬಗ್ಗೆ ಆತಂಕಿತರಾಗಿರುತ್ತಾರೆ. ಅಸ್ತಮಾ ಕಾಯಿಲೆ ತನ್ನ ಗರ್ಭಾವಸ್ಥೆಯ ಮೇಲೆ ಅಥವಾ ಮಗುವಿನ ಮೇಲೆ ದುಷ್ಪರಿಣಾಮವನ್ನುಂಟು ಮಾಡುವುದೇ, ತನ್ನ ಗರ್ಭಾವಸ್ಥೆಯು ಅಸ್ತಮಾವನ್ನು ಇನ್ನಷ್ಟು ಹದಗೆಡಿಸುವುದೇ, ಗರ್ಭಿಣಿಯಾಗಿರುವಾಗ ಅಸ್ತಮಾಕ್ಕೆ ಔಷಧಿಗಳನ್ನು ಸೇವಿಸಬಹುದೇ ಮತ್ತು ತನ್ನ ಮಗುವಿಗೂ ಅಸ್ತಮಾ ಬರಬಹುದೇ ಎಂಬ ಕಳವಳಗಳು ಸಾಮಾನ್ಯವಾಗಿ ಗರ್ಭಿಣಿಯರನ್ನು ಕಾಡುತ್ತಿರುತ್ತವೆ.

ವಾಸ್ತವದಲ್ಲಿ ಗರ್ಭಿಣಿಯರು ಅನಗತ್ಯವಾಗಿ ಆತಂಕ ಪಟ್ಟುಕೊಳ್ಳ ಬೇಕಾಗಿಲ್ಲ. ಅಸ್ತಮಾ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಅದು ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ಉಂಟು ಮಾಡುವುದಿಲ್ಲ.

► ಗರ್ಭಾವಸ್ಥೆ ಮತ್ತು ಭ್ರೂಣದ ಮೇಲೆ ಅಸ್ತಮಾದ ಪರಿಣಾಮ

ಗರ್ಭಿಣಿಗೆ ಅನಿಯಂತ್ರಿತವಾಗಿ ಅಸ್ತಮಾ ಕಾಡುತ್ತಿದ್ದರೆ ಅದು ಆಕೆಗೆ ಸಾಕಷ್ಟು ಆಮ್ಲಜನಕ ದೊರೆಯುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಇದು ಸಹಜವಾಗಿಯೇ ಆಕೆಯ ಗರ್ಭಾವಸ್ಥೆಯ ಮುಂದುವರಿಕೆಯ ಮೇಲೆ ಮತ್ತು ಆಕೆಯ ಗರ್ಭದಲ್ಲಿರುವ ಭ್ರೂಣದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಅಸ್ತಮಾ ಚೆನ್ನಾಗಿ ನಿಯಂತ್ರಣದಲ್ಲಿದ್ದರೆ ಸಹಜ ಗರ್ಭಾವಸ್ಥೆ, ಸಹಜ ಹೆರಿಗೆಗೆ ಯಾವುದೇ ತೊಂದರೆಯಿರುವು ದಿಲ್ಲ. ಅಲ್ಲದೆ ಹುಟ್ಟುವ ಮಗು ಕೂಡ ಆರೋಗ್ಯಯುತವಾಗಿರುತ್ತದೆ.

► ಅಸ್ತಮಾದ ಮೇಲೆ ಗರ್ಭಾವಸ್ಥೆಯ ಪರಿಣಾಮ

ಮಹಿಳೆ ಗರ್ಭವತಿಯಾದಾಗ ಆಕೆಯ ಅಸ್ತಮಾಕ್ಕೆ ಏನಾಗುತ್ತದೆ? ಈ ಕುರಿತ ದತ್ತಾಂಶಗಳು ಕುತೂಹಲಕಾರಿಯಾಗಿವೆ. ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ಅಸ್ತಮಾ ಕಾಯಿಲೆ ಇನ್ನಷ್ಟು ತೀವ್ರ ಗೊಳ್ಳುತ್ತದೆ. ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ಅದು ತಗ್ಗುತ್ತದೆ ಮತ್ತು ಇನ್ನುಳಿದ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ಅಸ್ತಮಾದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಹಿಂದಿನ ಬಾರಿಯ ಗರ್ಭಾವಸ್ಥೆಯ ಅನುಭವವೇ ಮುಂದಿನ ಮತ್ತು ನಂತರದ ಗರ್ಭಾವಸ್ಥೆಗಳಲ್ಲಿ ಮರುಕಳಿಸುವ ಸಾಧ್ಯತೆಗಳಿರುತ್ತವೆ.

ಸಾಮಾನ್ಯವಾಗಿ ಮೊದಲ ರೀತಿಯ ಪ್ರಕರಣಗಳಲ್ಲಿ ಗರ್ಭಾವಸ್ಥೆಯ 28ರಿಂದ 36ನೇ ವಾರದ ನಡುವೆ ಅಸ್ತಮಾ ತೀವ್ರಗೊಳ್ಳುತ್ತದೆ. ಗರ್ಭಾವಸ್ಥೆಯ ಕೊನೆಯ ನಾಲ್ಕು ವಾರಗಳಲ್ಲಿ ಅಸ್ತಮಾದಲ್ಲಿ ಕೊಂಚ ಸುಧಾರಣೆ ಕಂಡು ಬರುವುದು ಸಾಮಾನ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಅಸ್ತಮಾವನ್ನು ಚೆನ್ನಾಗಿ ನಿಯಂತ್ರಿಸಿದ್ದರೆ ಹೆರಿಗೆಯ ಸಂದರ್ಭದಲ್ಲಿ ಅಥವಾ ನಂತರದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ತೀರ ಅಪರೂಪ ವಾಗಿರುತ್ತದೆ.

► ಗರ್ಭಾವಸ್ಥೆಯಲ್ಲಿ ಔಷಧಿಗಳ ಸುರಕ್ಷತೆ

ಗರ್ಭಿಯರು ಔಷಧಿಗಳನ್ನು ಸೇವಿಸುವುದನ್ನು ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ಹೇಳುವುದಾದರೆ ಇದು ಉತ್ತಮ ನೀತಿಯಾಗಿದೆ. ಆದರೆ ಅನಿಯಂತ್ರಿತ ಅಸ್ತಮಾ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಆಮ್ಲಜನಕದ ಕೊರತೆಯು ಗರ್ಭಿಣಿಯ ಮೇಲೆ ಮತ್ತು ಆಕೆಯ ಗರ್ಭದಲ್ಲಿರುವ ಭ್ರೂಣದ ಮೇಲೆ ಹೆಚ್ಚು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನುವುದು ನೆನಪಿರಲಿ.

 ಸುದೈವವವಶಾತ್ ಹೆಚ್ಚಿನ ಅಸ್ತಮಾ ಔಷಧಿಗಳು ಗರ್ಭಾವಸ್ಥೆಯಲ್ಲಿ ಸೇವಿಸಲು ಸುರಕ್ಷಿತವಾಗಿವೆ. ಗರ್ಭಾವಸ್ಥೆಯಲ್ಲಿ ಅಸ್ತಮಾದ ಮೇಲೆ ನಿಯಂತ್ರಣ ಸಾಧಿಸುವುದು ತುಂಬ ಮುಖ್ಯವಾಗಿದೆ ಮತ್ತು ಅದಕ್ಕಾಗಿ ಅಗತ್ಯವಾದರೆ ಔಷಧಿಗಳನ್ನು ಸೇವಿಸಲೇಬೇಕಾಗುತ್ತದೆ.

► ಮಗುವಿಗೂ ಅಸ್ತಮಾ ಬರುತ್ತದೆಯೇ?

ಅಸ್ತಮಾ ವಂಶವಾಹಿ ರೋಗವಾಗಿದ್ದು, ತಲೆಮಾರುಗಳನ್ನೂ ಕಾಡುತ್ತಿ ರುತ್ತದೆ. ಹೀಗಾಗಿ ತಾಯಿಗೆ ಅಸ್ತಮಾ ಇದ್ದರೆ ಮಗುವಿಗೂ( ಬದುಕಿನ ಮುಂದಿನ ಘಟ್ಟಗಳಲ್ಲಿ) ಅಸ್ತಮಾ ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಸಾಧ್ಯತೆ ಶೇ.20ರಿಂದ 30ರಷ್ಟಿರುತ್ತದೆ. ಆದರೆ ತಂದೆಗೂ ಅಸ್ತಮಾ ಅಥವಾ ಬೇರೆ ಅಲರ್ಜಿಯಿದ್ದರೆ ಈ ಸಾಧ್ಯತೆ ಶೇ.50-60ರಷ್ಟಾಗಿರುತ್ತದೆ.

► ಕೊನೆಯ ಮಾತು

ಅಸ್ತಮಾ ಕಾಯಿಲೆ ನಿಯಂತ್ರಣದಲ್ಲಿದ್ದರೆ ಅದರಿಂದ ತಾಯಿ ಹಾಗೂ ನವಜಾತ ಶಿಶುವಿನ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ.

ಗರ್ಭಾವಸ್ಥೆಯಲ್ಲಿ ಅಸ್ತಮಾ ಔಷಧಿಗಳ ಸೇವನೆ ಸುರಕ್ಷಿತವಾಗಿದೆ. ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ವಿವರವಾದ ಮಾಹಿತಿ ಪಡೆದುಕೊಳ್ಳು ವುದು ಒಳ್ಳೆಯದು.

ಗರ್ಭಾವಸ್ಥೆಯಲ್ಲಿ ಸೂಕ್ತ ಆಹಾರ, ವಿಶ್ರಾಂತಿ, ವಿಟಾಮಿನ್‌ಗಳ ಸೇವನೆ ಇತ್ಯಾದಿಗಳ ಬಗ್ಗೆ ಕಾಳಜಿ ವಹಿಸುವುದಾದರೆ ಗರ್ಭಿಣಿ ಮತ್ತು ಆಕೆಯ ಹೊಟ್ಟೆಯಲ್ಲಿರುವ ಮಗುವಿಗೆ ಸಾಕಷ್ಟು ಆಮ್ಲಜನಕ ದೊರೆಯಬೇಕು ಎಂಬ ಬಗ್ಗೆ ಏಕೆ ಕಾಳಜಿ ವಹಿಸಬಾರದು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News