ಮಹಿಳೆಯರಲ್ಲಿ ಕೀಳರಿಮೆ ಮೂಡಿಸುವ ಒಡೆದ ಹಿಮ್ಮಡಿಗಳಿಗೆ ಮನೆಮದ್ದು ಇಲ್ಲಿದೆ

Update: 2018-04-02 11:37 GMT

ಪಾದದ ಹಿಮ್ಮಡಿಗಳಲ್ಲಿ ಕಾಣಿಸಿಕೊಳ್ಳುವ ಬಿರುಕುಗಳು ಸೌಂದರ್ಯ ಪ್ರಜ್ಞೆಯಿರುವ ಮಹಿಳೆಯರಲ್ಲಿ ಕಳವಳಕ್ಕೆ ಕಾರಣವಾಗುತ್ತವೆ. ಗಂಭೀರ ಪ್ರಕರಣಗಳಲ್ಲಿ ಈ ಬಿರುಕುಗಳು ಆಳದವರೆಗೂ ಇಳಿಯುತ್ತವೆ ಮತ್ತು ನಿಂತುಕೊಂಡಾಗ ಅಥವಾ ನಡೆದಾಡುವಾಗ ನೋವನ್ನುಂಟು ಮಾಡುತ್ತವೆ.

ಒಣಗಿದ ಮತ್ತು ಒರಟಾದ ಚರ್ಮದೊಂದಿಗೆ ಕೆಂಪಾಗುವಿಕೆ, ತುರಿಕೆ, ಉರಿಯೂತ ಮತ್ತು ಚರ್ಮದ ಸುಲಿತ ಇತ್ಯಾದಿ ಲಕ್ಷಣಗಳೂ ಈ ಸಮಸ್ಯೆಯೊಂದಿಗೆ ಗುರುತಿಸಿಕೊಂಡಿವೆ. ಒಣಹವೆ, ತೇವಾಂಶದ ಕೊರತೆ, ಪಾದದ ಬಗ್ಗೆ ಸರಿಯಾದ ಕಾಳಜಿಯಿಲ್ಲದಿರುವುದು, ಅನಾರೋಗ್ಯಕರ ಆಹಾರ, ವಯಸ್ಸಾಗುವಿಕೆ, ಬಿರುಸಾದ ನೆಲದಲ್ಲಿ ಸುದೀರ್ಘ ಕಾಲ ನಿಲ್ಲುವಿಕೆ ಮತ್ತು ಸೂಕ್ತವಲ್ಲದ ಪಾದರಕ್ಷೆಗಳು ಇತ್ಯಾದಿಗಳು ಹಿಮ್ಮಡಿಗಳು ಬಿರುಕು ಬಿಡಲು ಕಾರಣಗಳಾಗಿವೆ.

ಗಜಕರ್ಣ, ಸೋರಿಯಾಸಿಸ್, ಆಣಿ ಮತ್ತು ಜಡ್ಡು, ಮಧುಮೇಹ ಮತ್ತು ಥೈರಾಯ್ಡ ರೋಗಗಳೂ ಪಾದಗಳ ಹಿಮ್ಮಡಿಗಳಲ್ಲಿ ಬಿರುಕುಗಳಿಗೆ ಕಾರಣವಾಗುತ್ತವೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಈ ಬಿರುಕುಗಳನ್ನು ವಾಸಿಮಾಡುವ ಮನೆಮದ್ದುಗಳಿವೆ. ಇವುಗಳ ಬಗ್ಗೆ ಇಲ್ಲಿದೆ ಅಗತ್ಯ ಮಾಹಿತಿ.....

►ಲಿಂಬೆ

ಲಿಂಬೆಹಣ್ಣಿನಲ್ಲಿರುವ ಆಮ್ಲವು ಚರ್ಮವನ್ನು ಹೆಚ್ಚು ನಯ ಮತ್ತು ಮೃದುವಾಗಿರಿಸುವಲ್ಲಿ ನೆರವಾಗುತ್ತದೆ. ಲಿಂಬೆರಸವನ್ನು ಬೆರೆಸಿದ ಬೆಚ್ಚಗಿನ ನೀರಿನಲ್ಲಿ 10-15 ನಿಮಿಷಗಳ ಕಾಲ ಪಾದಗಳನ್ನು ಮುಳುಗಿಸಿ. ನೆನಪಿಡಿ, ತೀರ ಬಿಸಿಯಾದ ನೀರನ್ನು ಬಳಸಿದರೆ ಅದು ನಿಮ್ಮ ಪಾದಗಳು ಹೆಚ್ಚು ಒಣಗಲು ಕಾರಣವಾಗುತ್ತದೆ. ಬಳಿಕ ಬಿರುಕು ಮೂಡಿದ ಹಿಮ್ಮಡಿಗಳನ್ನು ಒರಟಾದ ಕಲ್ಲಿನಿಂದ ತಿಕ್ಕಿ, ಚೆನ್ನಾಗಿ ತೊಳೆದು ಟವೆಲ್‌ನಿಂದ ಒರೆಸಿಕೊಳ್ಳಿ.

►ಪನ್ನೀರು ಮತ್ತು ಗ್ಲಿಸರಿನ್

ಪನ್ನೀರು ಮತ್ತು ಗ್ಲಿಸರಿನ್‌ನ ಮಿಶ್ರಣವು ಹಿಮ್ಮಡಿಗಳ ಬಿರುಕಿಗೆ ಪರಿಣಾಮಕಾರಿ ಮನೆಮದ್ದುಗಳಲ್ಲೊಂದಾಗಿದೆ. ಸಮಾನ ಪ್ರಮಾಣ ಗಳಲ್ಲಿ ಇವೆರಡನ್ನೂ ಚೆನ್ನಾಗಿ ಮಿಶ್ರ ಮಾಡಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಿಮ್ಮಡಿಗಳಿಗೆ ಲೇಪಿಸಿಕೊಳ್ಳಿ.

►ಪೆಟ್ರೋಲಿಯಂ ಜೆಲ್ಲಿ ಮತ್ತು ಲಿಂಬೆರಸ

ಲಿಂಬೆಯ ಆಮ್ಲೀಯ ಮತ್ತು ಪೆಟ್ರೋಲಿಯಂ ಜೆಲ್ಲಿಯ ತೇವಗೊಳಿಸುವ ಗುಣಗಳು ಹಿಮ್ಮಡಿಯ ಬಿರುಕುಗಳಿಂದ ಮುಕ್ತಿ ನೀಡುತ್ತವೆ. ನಿಮ್ಮ ಪಾದಗಳನ್ನು 15-20 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ತೆಗೆಯಿರಿ. ಅವು ಚೆನ್ನಾಗಿ ಒಣಗಿದ ಬಳಿಕ ಒಂದು ಚಮಚ ಪೆಟ್ರೋಲಿಯಂ ಜೆಲ್ಲಿಗೆ ಕೆಲವು ಹನಿ ಲಿಂಬೆರಸವನ್ನು ಬೆರೆಸಿ ಈ ಮಿಶ್ರಣವನ್ನು ಹಿಮ್ಮಡಿಗಳಿಗೆ ಮತ್ತು ಬಿರುಕುಗಳಿಗೆ ಲೇಪಿಸಿ. ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಪುನರಾವರ್ತಿಸಿ.

►ಜೇನು

 ನಂಜು ನಿರೋಧಕವಾಗಿರುವ ಜೇನು ಬಿರುಕು ಮೂಡಿದ ಹಿಮ್ಮಡಿಗಳ ಚಿಕಿತ್ಸೆಯಲ್ಲಿ ನೆರವಾಗುತ್ತದೆ. ಒಂದು ಬಕೆಟ್ ಬೆಚ್ಚಗಿನ ನೀರಿಗೆ ಅರ್ಧ ಕಪ್ ಜೇನನ್ನು ಸೇರಿಸಿ ಅದರಲ್ಲಿ ಸುಮಾರು 15-20 ನಿಮಿಷಗಳ ಕಾಲ ಪಾದವನ್ನು ಮುಳುಗಿಸಿ ನಂತರ ಮೃದುವಾಗಿ ತಿಕ್ಕಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಹಿಮ್ಮಡಿಯಲ್ಲಿನ ಬಿರುಕುಗಳು ಮಾಯವಾಗುತ್ತವೆ.

►ಆಲಿವ್ ಎಣ್ಣೆ

ಹತ್ತಿಯಿಂದ ಕೊಂಚ ಆಲಿವ್ ಎಣ್ಣೆಯನ್ನು ಪಾದಕ್ಕೆ ಲೇಪಿಸಿ ಬಳಿಕ 10-15 ನಿಮಿಷಗಳ ಕಾಲ ಚಕ್ರಾಕಾರವಾಗಿ ಮೃದುವಾಗಿ ಮಸಾಜ್ ಮಾಡಿ. ದಪ್ಪ ಹತ್ತಿಯ ಕಾಲುಚೀಲ ಧರಿಸಿ, ಒಂದು ಗಂಟೆಯ ನಂತರ ಪಾದವನ್ನು ನೀರಿನಿಂದ ತೊಳೆದುಕೊಳ್ಳಿ. ಶೀಘ್ರ ಮತ್ತು ಉತ್ತಮ ಪರಿಣಾಮಕ್ಕಾಗಿ ಕೆಲವು ದಿನಗಳ ಕಾಲ ಪ್ರತಿನಿತ್ಯ ಈ ಕೆಲಸ ಮಾಡಿ.

►ಅಕ್ಕಿಹುಡಿ

ಮೂರು ಚಮಚ ಅಕ್ಕಿಹುಡಿ, ಒಂದು ಚಮಚ ಜೇನು ಮತ್ತು ಕೆಲವು ಹನಿ ಆ್ಯಪಲ್ ಸಿಡರ್ ವಿನೆಗರ್‌ನ್ನು ಚೆನ್ನಾಗಿ ಮಿಶ್ರಗೊಳಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಪಾದಗಳನ್ನು 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ಮತ್ತು ಈ ಪೇಸ್ಟ್‌ನ್ನು ಮೃದುವಾಗಿ ಉಜ್ಜಿರಿ. ಇದರಿಂದ ಪಾದಗಳಲ್ಲಿಯ ಸತ್ತ ಚರ್ಮ ನಿವಾರಣೆಯಾಗುತ್ತದೆ.

►ತೆಂಗಿನೆಣ್ಣೆ

ತೆಂಗಿನೆಣ್ಣೆಯು ಒಣಚರ್ಮವನ್ನು ತೇವಗೊಳಿಸುತ್ತದೆ ಮತ್ತು ಚರ್ಮದಲ್ಲಿಯ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯನ್ನು ತೆಳುವಾಗಿ ಪಾದಗಳಿಗೆ ಸವರಿ ಕಾಲುಚೀಲಗಳನ್ನು ಧರಿಸಿ. ಬೆಳಿಗ್ಗೆ ಎಂದಿನಂತೆ ಸ್ನಾನ ಮಾಡಿ. ಕೆಲವು ದಿನಗಳ ಕಾಲ ಇದನ್ನು ಮುಂದುವರಿಸಿ.

►ಅಡುಗೆ ಸೋಡಾ

ಮುಕ್ಕಾಲು ಬಕೆಟ್ ಬೆಚ್ಚಗಿನ ನೀರಿಗೆ ಅಡುಗೆ ಸೋಡಾವನ್ನು ಸೇರಿಸಿ ಅದು ನೀರಿನಲ್ಲಿ ಸಂಪೂರ್ಣವಾಗಿ ಕರಗುವಂತೆ ನೋಡಿಕೊಳ್ಳಿ. ಈ ನೀರಿನಲ್ಲಿ 10-15 ನಿಮಿಷಗಳ ಕಾಲ ಪಾದಗಳನ್ನು ಮುಳುಗಿಸಿ. ನಂತರ ಒರಟಾದ ಕಲ್ಲುಗಳಿಂದ ಮೃದುವಾಗಿ ತಿಕ್ಕಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News