ಎಸ್‌ಸಿ/ಎಸ್‌ಟಿ ಕಾಯ್ದೆ: ಕೇಂದ್ರದಿಂದ ಮರುಪರಿಶೀಲನೆ ಅರ್ಜಿ ಸಲ್ಲಿಕೆ

Update: 2018-04-02 15:39 GMT

ಹೊಸದಿಲ್ಲಿ,ಎ.2: ದೇಶಾದ್ಯಂತ ಭುಗಿಲೆದ್ದಿರುವ ದಲಿತರ ಪ್ರತಿಭಟನೆಗಳ ಕೇಂದ್ರಬಿಂದುವಾಗಿರುವ,ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿದಂತೆ ಮಾ.20ರ ತನ್ನ ಆದೇಶವನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಕೋರಿ ಕೇಂದ್ರ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದೆ.

ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನಾವು ಒಪ್ಪುವುದಿಲ್ಲ. ನಾವು ದಲಿತರನ್ನು ಬೆಂಬಲಿಸುತ್ತೇವೆ. ಹಿರಿಯ ವಕೀಲರು ಈ ಪ್ರಕರಣದಲ್ಲಿ ವಾದಿಸಲಿದ್ದಾರೆ ಮತ್ತು ಅವರಿಗೆ ಎಲ್ಲ ಅಧಿಕಾರಗಳನ್ನು ನೀಡಲಾಗುವದು ಎಂದರು.

ದಲಿತರ ವಿರುದ್ಧ ತಾರತಮ್ಯವು ರಾಜಕೀಯ ವಿಷಯವಾಗುತ್ತಿದೆ ಎಂದ ಅವರು, ದಲಿತರಿಗೆ ಕಾಂಗ್ರೆಸ್ ಬೆಂಬಲವು ಪ್ರತಿಭಟನೆಯನ್ನು ತೀವ್ರಗೊಳಿಸಿದೆ ಎಂದು ಪರೋಕ್ಷವಾಗಿ ಸೂಚಿಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶವು ಕಾಯ್ದೆಯನ್ನು ದುರ್ಬಲಗೊಳಿಸಿದೆ ಎನ್ನುವುದು ದಲಿತರ ವಾದವಾಗಿದೆ. ಕೇಂದ್ರವು ಪರಿಸ್ಥಿತಿಯ ಸರಿಯಾದ ಚಿತ್ರಣವನ್ನು ನ್ಯಾಯಾಲಯಕ್ಕೆ ನೀಡುವಲ್ಲಿ ವಿಫಲಗೊಂಡಿದ್ದು ಈ ಆದೇಶಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದಲಿತರ ಕುರಿತು ಎನ್‌ಡಿಎ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಸಾದ್, ನಮ್ಮ ಸರಕಾರವು ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಯನ್ನಾಗಿಸಿದೆ. ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ಸೇರಿದ ಅತ್ಯಂತ ಹೆಚ್ಚಿನ ಸಂಖ್ಯೆಯ ಸಂಸದರು ಬಿಜೆಪಿಯಲ್ಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News