ಎಸ್‌ಸಿ/ಎಸ್‌ಟಿ ಕಾಯ್ದೆ: ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾದ ರಾಜಸ್ಥಾನ
ಜೈಪುರ,ಎ.2: ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸೋಮವಾರ ಪ್ರತಿಭಟನೆಗಿಳಿದ ದಲಿತ ಗುಂಪುಗಳು ರಾಜಸ್ಥಾನದ ವಿವಿಧೆಡೆ ಗಳಲ್ಲಿ ರಸ್ತೆ ಮತ್ತು ರೈಲು ಸಂಚಾರಕ್ಕೆ ತಡೆಯೊಡ್ಡಿ, ಒಂದು ರೈಲು ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಿದವು. ಇದರಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಸುಮಾರು 30 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಧಾನಿ ಜೈಪುರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಕಾ ರರು ಗುಂಪು ಸೇರಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಕಲ್ಲುತೂರಾಟ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಿದ ಪ್ರಕರಣಗಳೂ ವರದಿಯಾಗಿವೆ.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ದಲಿತ ಗುಂಪುಗಳು ಕರೆ ನೀಡಿದ್ದ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.
ಖೈರ್ಥಾಲ್ ನಿಲ್ದಾಣದಲ್ಲಿ ಹೊಸದಿಲ್ಲಿ-ಅಜ್ಮೀರ್ ಶತಾಬ್ದಿ ಎಕ್ಸ್ ಪ್ರೆಸ್ ಮತ್ತು ಭಿವಾನಿ-ಆಲ್ವಾರ್ ಪ್ಯಾಸೆಂಜರ್ ರೈಲುಗಳನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು ಶತಾಬ್ದಿ ಎಕ್ಸ್‌ಪ್ರೆಸ್‌ನ ಗಾಜುಗಳಿಗೆ ಹಾನಿಯುಂಟು ಮಾಡಿದ್ದಾರೆ.
ಪ್ರತಿಭಟನೆಯಿಂದಾಗಿ ವಾಯುವ್ಯ ರೈಲ್ವೆ ವಲಯದಲ್ಲಿ ಏಳು ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದರು.
ರಾಜಸ್ಥಾನ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಬೆಳಿಗ್ಗೆ 11 ಗಂಟೆಯವರೆಗೆ ಸಂಚಾರ ನಡೆಸುತ್ತಿದ್ದವು. ಆದರೆ ಪ್ರತಿಭಟನೆಗಳು ತೀವ್ರಗೊಂಡ ಬಳಿಕ ಅವುಗಳನ್ನು ಸ್ಥಗಿತಗೊಳಿಸಲಾಗಿತ್ತು.