ಆಕಸ್ಮಿಕ ಲಾಭವನ್ನೇ ಬಂಡವಾಳ ಮಾಡಿಕೊಂಡ ಸರಳವಾಸ್ತು!

Update: 2018-04-07 15:57 GMT

► ಸರಳ ವಾಸ್ತು ಮಾಡಿಸಿದ ಮೇಲೆ ಸುಮಾರು 6 ಲಕ್ಷ ರೂ. ನಷ್ಟ

► ರಸ್ತೆ ಅಪಘಾತದಲ್ಲಿ ಮನೆಯ ಮಾಲಕ ಮೃತ್ಯು

► ಮನೆಯ ಬಾಗಿಲು ಬದಲಾಯಿಸಿದರೂ ಬಗೆಹರಿಯದ ಸಮಸ್ಯೆಗಳು

ಮಂಗಳೂರು: ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ತಮಗೆ ತೋಚಿದ ರೀತಿಯಲ್ಲಿ ವಾಸ್ತು ಹೇಳುತ್ತಾ ಬಡವರ ಜೀವನದಲ್ಲಿ ಆಟ ಆಡುತ್ತಿರುವ ಕೆಲವು ಸಂಸ್ಥೆಗಳಲ್ಲಿ ಸರಳ ವಾಸ್ತು ಒಂದಾಗಿದೆ...!

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ಶ್ರೀನಿವಾಸರಡ್ಡಿ ತಿಗರಿ ಕುಟುಂಬವೊಂದು ಟಿವಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಸರಳ ವಾಸ್ತು ವಿನ ಜಾಹೀರಾತು ನೋಡಿ ಅದರಲ್ಲಿ ಕೆಲವರು ಸರಳವಾಸ್ತು ಮಾಡಿಸಿದ ಮೇಲೆ ನಮಗೆ ಒಳ್ಳೆಯದಾಗಿದೆ ಎಂಬುದನ್ನು ಕೇಳಿದ ಬಳಿಕ ತಕ್ಷಣ ಸರಳ ವಾಸ್ತು ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಅದರಂತೆ ಸರಳ ವಾಸ್ತು ತಜ್ಞರು ಅವರ ಮನೆಗೆ ಬಂದು ಮನೆಯ ಮಾಲಕನ ಜನ್ಮದಿನಾಂಕಕ್ಕೆ ತಕ್ಕಂತೆ ನಾಲ್ಕು ಒಳ್ಳೆಯ ದಿಕ್ಕುಗಳು, ನಾಲ್ಕು ಕೆಟ್ಟದಿಕ್ಕುಗಳನ್ನು ಸೂಚಿಸಿ ಪ್ರತಿನಿತ್ಯ ಯಾರು ಎಲ್ಲಿ ಮಲಗಬೇಕು, ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು, ಯಾವದಿಕ್ಕಿನಲ್ಲಿ ಕುಳಿತು ವ್ಯವಹರಿಸಬೇಕು ಎನ್ನುವುದನ್ನೆಲ್ಲ ತಿಳಿಸಿದರು. 12 ಸಾವಿರ ರೂ. ಮೌಲ್ಯದ ಸಾಮಗ್ರಿಗಳಾದ ಓಂ ಘಂಟೆ, ಪಿರಾಮಿಡ್, ಪಕ್ವಾ ಮೀರರ್, ದೊಡ್ಡ ಸ್ಫಟಿಕ, ಜೋಡಿ ಸ್ಫಟಿಕ, ಚಿಕ್ಕ ಸ್ಫಟಿಕ, ಸಂಪತ್ತಿನ ಬಟ್ಟಲು ಎಂದು ಕರೆಯುವ ಗಾಜಿನ ಬಟ್ಟಲು, ಒಂದು ಸಿಡಿ ಅದರಲ್ಲಿ ವಾಸ್ತುಗೆ ಸಂಬಂಧಿಸಿದ ಪೋಟೊ, ಆಮೆ ತಟ್ಟೆ, ಒಂದು ಗ್ಯಾರೆಂಟಿ ಖಾತರಿ ಪತ್ರ ನೀಡಿ ಅವರು ನೀಡಿದ ಸಾಮಗ್ರಿಗಳನ್ನು ದಿಕ್ಕಿಗನುಗುಣವಾಗಿ ಎಲ್ಲೆಲ್ಲಿ ಬಳಸಬೇಕು ಎಂಬುದನ್ನು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಏನೂ ವ್ಯತ್ಯಾಸವಾಗದಿದ್ದರೆ 8 ತಿಂಗಳಲ್ಲಿ ನಿಮ್ಮ ಹಣ ಹಿಂದಿರುಗಿಸುತ್ತೇವೆ ಎಂದು ವಾಸ್ತು ತಜ್ಞರು ಭರವಸೆ ನೀಡಿದ್ದಾರೆ.

ಸರಳವಾಸ್ತು ತಜ್ಞರು ಜನ್ಮ ದಿನಾಂಕಕ್ಕೆ ತಕ್ಕಂತೆ ಲಕ್ಕಿ ನಂಬರ್ ನೀಡಿ ಅದರಂತೆ ದಿಕ್ಕುಗಳ ಸೂಚನೆ ನೀಡಿರುವುದು

ಸರಳ ವಾಸ್ತು ತಜ್ಞರು ಹೇಳಿದ ಪ್ರಕಾರ ಪ್ರತಿನಿತ್ಯ ಸುಮಾರು 4-5 ತಿಂಗಳು ಕೆಲಸ ಕಾರ್ಯಗಳನ್ನು ಮಾಡಿದರೂ ಯಾವುದೇ ಪ್ರಯೋಜನ ಕಾಣದೆ ಇದ್ದಾಗ, ಹುಬ್ಬಳ್ಳಿಯಲ್ಲಿರುವ ಸರಳ ವಾಸ್ತು ಕಚೇರಿಗೆ ಭೇಟಿ ನೀಡಿ ಮನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗುತ್ತಿಲ್ಲ ಎಂದರು. ಆಗ ಸರಳತಜ್ಞರ ಮತ್ತೊಂದು ಉಪಾಯ ಹೇಳಿದರು. ಪಶ್ಚಿಮ ದಿಕ್ಕಿಗೆ ಇರುವ ಮನೆಯ ಬಾಗಿಲನ್ನು ಪೂರ್ವದಿಕ್ಕಿಗೆ ಬದಲಾಯಿಸಲು ತಿಳಿಸಿದರು. ಅದಕ್ಕಾಗಿ ಸುಮಾರು 1.50 ಲಕ್ಷ ರೂ. ಖರ್ಚು ಮಾಡಿ ಮನೆಯ ಬಾಗಿಲನ್ನು ಬದಲಾಯಿಸಿ ಆ ಬಾಗಿಲಿಂದ ಓಡಾಡಲು ಪ್ರಾರಂಭಿಸುವುದಾಗಿ ಮನೆ ಮಾಲಕನ ಮಗ ತಿಗರಿ ಹೇಳಿದ್ದಾರೆ.

ಈ ರೀತಿಯ ಬದಲಾವಣೆಯಿಂದಲೂ ಯಾವುದೇ ಪ್ರಯೋಜನೆಯಾಗದೆ ಸರಳವಾಸ್ತು ಮಾಡಿಸಿ 7 ತಿಂಗಳಿನಲ್ಲಿ ರಸ್ತೆ ಅಪಘಾತ ಗಂಭೀರ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ 4 ಲಕ್ಷ ರೂ. ಖರ್ಚು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ನಮ್ಮ ತಂದೆ ಮೃತಪಟ್ಟರು.

ಇಷ್ಟೆಲ್ಲ ಆದ ಬಳಿಕ ಸರಳ ವಾಸ್ತು ಸಂಸ್ಥೆಗೆ ಹೋಗಿ ಕೇಳಿದರೆ ಮತ್ತೆ ‘ನೀವು ನಾವು ಹೇಳಿದಂತೆ ಪೂಜೆ ಮಾಡಿಲ್ಲ, ನಿಯಮ ಪಾಲಿಸಿಲ್ಲ’ ಎಂದು ಹಾರಿಕೆ ಉತ್ತರ. ಸರಳ ವಾಸ್ತು ಮಾಡಿಸಿದ ಮೇಲೆ ನಾನು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದಾಗ ನಿಮ್ಮ ತಂದೆಯ ಆಯುಷ್ಯ ಮುಗಿದಿತ್ತು, ಅವರು ಸತ್ತರೆ ನಾವೇನು ಮಾಡಬೇಕು ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಹನುಮರಡ್ಡಿ ತಿಗರಿ ಆರೋಪಿಸಿದರು.

ನೂರರಲ್ಲಿ ಹತ್ತು ಜನರಿಗೆ ಲಾಭ

ಸರಳವಾಸ್ತು ವ್ಯವಹಾರ ನಂಬಿಕೆಯ ಸಿದ್ಧಾಂತದ ಮೇಲೆ ನಿಂತಿದೆ. ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ಒಳಿತು-ಕೆಡುಕು ಇದ್ದೇ ಇರುತ್ತದೆ. 100 ಜನರಿಗೆ ದೋಷ ನಿವಾರಣೆ ಸಾಮಗ್ರಿಗಳನ್ನು ಮಾರಾಟ ಮಾಡಿದಾಗ ಅವರಲ್ಲಿ ಶೇ.10 ಜನರಿಗೆ ಕಾಕತಾಳೀಯವಾ ಅಲ್ಪ ಸ್ವಲ್ಪಅನುಕೂಲ ಆಗಿರಬಹುದು. ಅದನ್ನು ತಮ್ಮ ಸಾಮಗ್ರಿಗಳ ಕಾರಣ ದಿಂದಾಗಿಯೇ ಅನುಕೂಲ ಆಗಿದೆ ಎಂದು ನಂಬಿಸುತ್ತಾರೆ. ನೀವು ನಮ್ಮ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಆದರೂ ನಮ್ಮ ಸಾಮಗ್ರಿಗಳ ಕಾರಣದಿಂದಾಗಿಯೇ ನಿಮಗೆ ಇನ್ನೂ ಹೆಚ್ಚಿನ ತೊಂದರೆ ಬರುವುದು ತಪ್ಪಿದೆ ಎಂದು ನಂಬಿಸುತ್ತಾರೆ ಎನ್ನುವುದು ಕೆಲ ನಾಗರಿಕರ ಅಭಿಪ್ರಾಯ.

ಸರಳ ವಾಸ್ತು ಮಾಡಿಸಿದರೆ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ಪರಿಹಾರವಾಗುವುದಲ್ಲದೆ ನೀವು ಎಂಟು ತಿಂಗಳಲ್ಲಿ ಆರ್ಥಿಕವಾಗಿ ಸದೃಢರಾಗುತ್ತೀರಿ. ಇಲ್ಲವಾದಲ್ಲಿ ನಿಮ್ಮ ಹಣವನ್ನು ಹಿಂದಿರುಗಿಸುತ್ತೇವೆ ಎಂದು ಹೇಳಿದ್ದರು. ಆದರೆ, ಸರಳ ವಾಸ್ತು ಮಾಡಿಸಿದ ಮೇಲೆ ಯಾವುದೇ ರೀತಿಯ ವ್ಯತ್ಯಾಸ ನಮ್ಮ ಮನೆಯಲ್ಲಿ ಆಗಲಿಲ್ಲ. ತಂದೆಯನ್ನು ಕಳೆದುಕೊಳ್ಳುವುದರ ಜೊತೆಗೆ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದೇವೆ.

ಹನುಮರಡ್ಡಿ ತಿಗರಿ, ಸರಳ ವಾಸ್ತುವಿನಿಂದ ಮೋಸಕ್ಕೊಳಗಾದ ವ್ಯಕ್ತಿ.

 ಮನೆಯಲ್ಲಿ ಎಂಟು ಜನ ಸದಸ್ಯರಿದ್ದು, ಎಲ್ಲ ಸದಸ್ಯರಿಗೂ ಜನ್ಮ ದಿನಕ್ಕೆ ತಕ್ಕಂತೆ ದಿಕ್ಕುಗಳನ್ನು ತೋರಿಸಿ ಪ್ರತಿ ದಿನ ನಾವು ಯಾವ ಯಾವ ದಿಕ್ಕಿಗೆ ಮಲಗಬೇಕು, ವ್ಯವಹರಿಸಬೇಕು, ಅಭ್ಯಸಿಸಬೇಕು ಎಂಬುದನ್ನು ಹೇಳಿದ್ದರು. ಅದರಂತೆ ಮೂರು ನಾಲ್ಕು ತಿಂಗಳು ದಿಕ್ಕಿಗೆ ಒಬ್ಬರು ಮಲಗಿಕೊಳ್ಳುತ್ತಿದ್ದೇವು. ಆದರೂ ಯಾವುದೇ ಸಮಸ್ಯೆಗಳು ಬಗೆಹರಿಯಲಿಲ್ಲ.

ಮಲ್ಲರಡ್ಡಿ ತಿಗರಿ, ಹನುಮರಡ್ಡಿ ಸೋದರ.

Writer - ಕೆ. ಎಮ್. ಪಾಟೀಲ

contributor

Editor - ಕೆ. ಎಮ್. ಪಾಟೀಲ

contributor

Similar News