ಮೂತ್ರದಲ್ಲಿ ರಕ್ತ ಕಂಡುಬರುವುದೇಕೆ?, ಇದು ಅಪಾಯಕಾರಿಯೇ?: ಇಲ್ಲಿದೆ ಮಾಹಿತಿ

Update: 2018-04-03 10:52 GMT

ರಕ್ತ ಕಾಣಿಸಿಕೊಳ್ಳುವುದು ಬಿಡಿ, ಮೂತ್ರ ಗಾಢವರ್ಣಕ್ಕೆ ತಿರುಗಿದರೇ ಕಳವಳಗೊಳ್ಳಲು ಸಾಕಷ್ಟು ಕಾರಣಗಳಿವೆ. ಅಂತಹುದರಲ್ಲಿ ವ್ಯಕ್ತಿಯ ಮೂತ್ರದಲ್ಲಿ ರಕ್ತ ಕಂಡು ಬಂದರೆ ಅದು ನಿಜಕ್ಕೂ ಆತಂಕಕಾರಿ ಯಾಗಿದೆ. ಹೀಗೆ ಮೂತ್ರದಲ್ಲಿ ರಕ್ತ ಕಂಡುಬರುವ ಸ್ಥಿತಿಗೆ " ಹೆಮಟೋರಿಯಾ"ಅಥವಾ "ರಕ್ತಮೇಹ" ಎಂದು ಕರೆಯಲಾಗುತ್ತದೆ.

ಹೆಚ್ಚಿನ ಪ್ರಕರಣಗಳಲ್ಲಿ ರಕ್ತಮೇಹವು ತೀರ ಅಪಾಯಕಾರಿಯಲ್ಲ ಎಂದು ಪರಿಗಣಿಸಲಾಗಿದೆ. ಆದರೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಅತ್ಯಂತ ಗಂಭೀರ ಪರಿಣಾಮಗಳಿಗೂ ಕಾರಣವಾಗಬಹುದು. ಮೂತ್ರದಲ್ಲಿ ರಕ್ತ ಕಾಣಿಸಿಕೊಂಡಾಗ ಅದನ್ನು ಕಡೆಗಣಿಸಬಾರದು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.

ರಕ್ತಮೇಹ ಉಂಟಾಗುವುದಕ್ಕೆ ನಿರ್ದಿಷ್ಟ ಕಾರಣವಿಲ್ಲ, ಹೀಗಾಗಿ ಅದಕ್ಕೆ ನಿರ್ದಿಷ್ಟ ಚಿಕಿತ್ಸೆಯೂ ಇಲ್ಲ. ಎಳೆಯರಿಂದ ಹಿಡಿದು ವೃದ್ಧರವರೆಗೂ ಯಾರಲ್ಲಿಯೂ ಅದು ಕಾಣಿಸಿಕೊಳ್ಳಬಹುದು. ಅಷ್ಟಕ್ಕೂ ಈ ರಕ್ತಮೇಹ ಏನು? ಅದು ಮೂತ್ರದಲ್ಲಿ ಕೆಂಪು ರಕ್ತಕಣ(ಆರ್‌ಬಿಸಿ)ಗಳಿರುವ ಸ್ಥಿತಿಯಾಗಿದೆ. ಈ ಆರ್‌ಬಿಸಿಗಳು ರಕ್ತನಾಳಗಳಿಗೆ ಸೀಮಿತವಾಗಿವೆ ಯಾದರೂ ಕೆಲವೊಮ್ಮೆ ಕೆಲವು ಅಂಗಾಂಗಗಳು ಇವುಗಳನ್ನು ಮೂತ್ರದಲ್ಲಿ ಸೋರಿಕೆ ಮಾಡುತ್ತವೆ.

ಮೂತ್ರವು ಗುಲಾಬಿ, ಕೆಂಪು, ಕಂದು ಮಿಶ್ರಿತ ಕೆಂಪು ಅಥವಾ ಚಹಾದ ಬಣ್ಣಕ್ಕೆ ತಿರುಗಿದ್ದರೆ ಅದರಲ್ಲಿರುವ ಅರ್‌ಬಿಸಿಗಳು ಕಣ್ಣಿಗೆ ಗೋಚರವಾಗುತ್ತಿವೆ ಎಂದು ಅರ್ಥ. ಹೀಗೆ ಕಣ್ಣಿಗೆ ಗೋಚರವಾಗುವ ಹೆಮಟೂರಿಯಾವನ್ನು "ಗ್ರಾಸ್ ಹೆಮಟೂರಿಯಾ" ಎಂದು ಹೆಸರಿಸಲಾಗಿದೆ. ಇಲ್ಲಿ ಮೂತ್ರದ ಬಣ್ಣಕ್ಕೆ ನಾವು ಸೇವಿಸಿದ ಆಹಾರ ಅಥವಾ ಔಷಧಿಗಳೂ ಕಾರಣವಾಗಿರಬಹುದು.

ಕೆಲವೊಮ್ಮೆ ಮೂತ್ರದಲ್ಲಿರುವ ಆರ್‌ಬಿಸಿಗಳು ಬರಿಗಣ್ಣಿಗೆ ಗೋಚರ ವಾಗುವುದಿಲ್ಲ. ಮೂತ್ರದ ಬಣ್ಣವು ಎಂದಿನಂತೆ ಕಂಡು ಬರಬಹುದು. ಇದನ್ನು "ಮೈಕ್ರೋಸ್ಕೋಪಿಕ್ ಹೆಮಟೂರಿಯಾ" ಎನ್ನುತ್ತಾರೆ. ಇದನ್ನು ಡಿಪ್‌ಸ್ಟಿಕ್ ಬಳಸಿ ಪತ್ತೆ ಹಚ್ಚಬಹುದು ಮತ್ತು ಮಾದರಿಯನ್ನು ಸೂಕ್ಷ್ಮದರ್ಶಕದಡಿ ಪರೀಕ್ಷಿಸಿ ದೃಢಪಡಿಸಿಕೊಳ್ಳ ಬಹುದು.

ರಕ್ತಮೇಹವುಂಟಾದಾಗ ಶರೀರವಿಡಿ ನೋಯಬಹುದು, ಆದರೆ ಹೊಟ್ಟೆಯ ಭಾಗದಲ್ಲಿ ನೋವು ತೀವ್ರವಾಗಿರುತ್ತದೆ. ರಕ್ತಮೇಹವು ಕೆಲವೊಮ್ಮೆ ಮೂತ್ರನಾಳ ಅಥವಾ ಮೂತ್ರಪಿಂಡ ಕಲ್ಲುಗಳೊಂದಿಗೆ ಗುರುತಿಸಿಕೊಂಡಿರುವುದು ಇದಕ್ಕೆ ಕಾರಣ. ರಕ್ತಮೇಹವುಂಟಾದಾಗ ಜನನಾಂಗದಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆಯ ಆರಂಭದಲ್ಲಿ ರಕ್ತ ಕಾಣಿಸಿಕೊಂಡರೆ ಅದಕ್ಕೆ ಮೂಲ ಮೂತ್ರನಾಳವಾಗಿರುತ್ತದೆ. ಅಂತ್ಯದಲ್ಲಿ ಕಾಣಿಸಿಕೊಂಡರೆ ರಕ್ತವು ಮೂತ್ರಕೋಶ ಅಥವಾ ಪ್ರಾಸ್ಟೇಟ್(ಪುರುಷರಲ್ಲಿ) ಮೂಲಕ ಬಂದಿದೆ ಎಂದು ಅರ್ಥ. ಮೂತ್ರವಿಸರ್ಜನೆಯುದ್ದಕ್ಕೂ ರಕ್ತ ಕಾಣಿಸಿಕೊಳ್ಳು ತ್ತಿದ್ದರೆ ಅದು ಮೂತ್ರಕೋಶ, ಗರ್ಭಾಶಯ ಅಥವಾ ಮೂತ್ರಪಿಂಡ ಗಳೊಂದಿಗೆ ಗುರುತಿಸಿಕೊಂಡಿರುತ್ತದೆ.

ಮೂತ್ರಪಿಂಡ ಅಥವಾ ಮೂತ್ರನಾಳ ಕಲ್ಲುಗಳು, ಮೂತ್ರನಾಳ ಸೋಂಕುಗಳು, ಮೂತ್ರಪಿಂಡಗಳಲ್ಲಿ ಸೋಂಕು, ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆ, ಮೂತ್ರಕೋಶ ಕ್ಯಾನ್ಸರ್, ಸಾಮಾನ್ಯಕ್ಕಿಂತ ದೊಡ್ಡದಾದ ಪ್ರಾಸ್ಟೇಟ್, ಕಠಿಣ ವ್ಯಾಯಾಮ, ಸಿಕಲ್ ಸೆಲ್ ಅನಿಮಿಯಾದಂತಹ ಮೂತ್ರಪಿಂಡಗಳಿಗೆ ಆಗಿರುವ ಹಾನಿ, ಸೈಕ್ಲೋಸ್ಫಾಮೈಡ್, ಪೆನ್ಸಿಲಿನ್ ಮತ್ತು ಆಸ್ಪಿರಿನ್‌ನಂತಹ ಔಷಧಿಗಳ ಸೇವನೆ ಮುಂತಾದವು ರಕ್ತಮೇಹಕ್ಕೆ ಕಾರಣವಾಗುತ್ತವೆ.

ಆಲ್ಪೋರ್ಟ್ ಸಿಂಡ್ರೋಮ್

ಆನುವಂಶಿಕ ಕಾಯಿಲೆಯಾಗಿರುವ ಇದು ಹೆಮಟೂರಿಯಾದೊಂದಿಗೆ ಗುರುತಿಸಿಕೊಂಡಿದೆ. ಇದು ಕೆಲವೊಮ್ಮೆ ಶ್ರವಣ ಶಕ್ತಿ ಮತ್ತು ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಇದು ಮೂತ್ರದಲ್ಲಿ ಪ್ರೋಟಿನ್‌ಗಳ ಸೋರಿಕೆಯನ್ನುಂಟು ಮಾಡುವ ಪ್ರೋಟಿನೂರಿಯಾವನ್ನೂ ಉಂಟು ಮಾಡುತ್ತದೆ.

ಆಲ್ಪೋರ್ಟ್ ಸಿಂಡ್ರೋಮ್ ಆನುವಂಶಿಕ ವಿಕಾರವಾಗಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಾಗಿದೆ.

ರಕ್ತಮೇಹಕ್ಕೆ ಚಿಕಿತ್ಸೆ ಹೇಗೆ?

ಸರಿಯಾದ ರೋಗನಿರ್ಣಯದೊಂದಿಗೆ ಸರಿಯಾದ ಚಿಕಿತ್ಸೆ ಆರಂಭ ಗೊಳ್ಳುತ್ತದೆ. ರಕ್ತಮೇಹ ಪ್ರಕರಣಗಳಲ್ಲಿ ಕ್ಷ-ಕಿರಣಗಳನ್ನು ಬಳಸಿ ಮೂತ್ರಕೋಶ ಮತ್ತು ಮೂತ್ರಪಿಂಡಗಳ ಸಂಪೂರ್ಣ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ.

ರಕ್ತಮೇಹವನ್ನು ನಿರ್ಧರಿಸಲು ಯುರಿನಾಲಿಸಿಸ್, ಸಿಸ್ಟೋಸ್ಕೋಪಿ, ಸಿಟಿ ಅಥವಾ ಎಂಆರ್‌ಐ ಅಥವಾ ಅಲ್ಟ್ರಾಸೌಂಡ್ ಸ್ಕಾನ್‌ನಂತಹ ವಿಧಾನ ಗಳನ್ನು ಬಳಸಲಾಗುತ್ತದೆ.

ಕೆಲವೊಮ್ಮೆ ರಕ್ತಮೇಹಕ್ಕೆ ಕಾರಣ ಗೊತ್ತಾಗುವುದಿಲ್ಲ. ಅದಕ್ಕೆ ಧೂಮ್ರಪಾನ ಅಥವಾ ಇತರ ಚಟಗಳು ಕಾರಣವಾಗಿರಬಹುದು.ಇಂತಹ ಪ್ರಕರಣಗಳಲ್ಲಿ ವೈದ್ಯರು ಹಂತ ಹಂತವಾಗಿ ಚಿಕಿತ್ಸೆ ನೀಡುತ್ತಾರೆ. ರಕ್ತಮೇಹಕ್ಕೆ ಮೂತ್ರನಾಳದ ಸೋಂಕು ಕಾರಣವಾಗಿದ್ದರೆ ಅದನ್ನು ನಿವಾರಿಸಲು ಮೊದಲು ಆ್ಯಂಟಿಬಯಾಟಿಕ್‌ಗಳನ್ನು ನೀಡಲಾಗುತ್ತದೆ. ಕಲ್ಲುಗಳು ಕಾರಣವಾದ್ದರೆ ಅವುಗಳನ್ನು ಹುಡಿಯಾಗಿಸುವ ಶಾಕ್-ವೇವ್ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಪುರುಷರಲ್ಲಿ ಪ್ರಾಸ್ಟೇಟ್‌ನ ದೊಡ್ಡದಾಗುವಿಕೆಯು ರಕ್ತಮೇಹಕ್ಕೆ ಕಾರಣವಾಗಿದ್ದರೆ ಅದನ್ನು ಕುಗ್ಗಿಸಲು ನಿರ್ದಿಷ್ಟ ಔಷಧಿಗಳನ್ನು ನೀಡಲಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ರಕ್ತಮೇಹಕ್ಕೆ ಚಿಕಿತ್ಸೆಯು ಅಗತ್ಯವಾಗಿರುವುದಿಲ್ಲ ಮತ್ತು ಮನೆಯಲ್ಲಿಯೇ ಪರಿಹಾರ ವನ್ನು ಕಂಡುಕೊಳ್ಳಬಹುದು. ಆದರೆ ರಕ್ತಮೇಹ ಕಾಣಿಸಿಕೊಂಡಾಗ ವೈದ್ಯರನ್ನು ಕಾಣುವುದು ಯಾವಾಗಲೂ ಒಳ್ಳೆಯದು.

ಬೀಟ್‌ರೂಟ್‌ನಂತಹ ಕೆಲವು ಆಹಾರಗಳ ಸೇವನೆ, ವಿರೇಚಕಗಳು ಮೂತ್ರದ ಬಣ್ಣ ಬದಲಾವಣೆಗೆ ಕಾರಣವಾಗುತ್ತವೆ. ಇದು ಕೆಲವು ದಿನಗಳಲ್ಲಿ ತನ್ನಿಂತಾನೇ ನಿವಾರಣೆಯಾಗುತ್ತದೆ. ಹೀಗಾಗಿ ಆರಂಭದಲ್ಲಿ ಸರಿಯಾದ ಸ್ವಯಂ ಪರಿಶೀಲನೆ ಅಗತ್ಯವಾಗುತ್ತದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News