ಪಿಎನ್‌ಬಿ ವಂಚನೆಯ ಹೊಣೆಗಾರಿಕೆಯಲ್ಲಿ ಆರ್‌ಬಿಐ ಪಾಲೂ ಇದೆ: ಕೇಂದ್ರ ಜಾಗೃತ ಆಯುಕ್ತ ಚೌಧರಿ

Update: 2018-04-03 15:47 GMT

ಹೊಸದಿಲ್ಲಿ,ಎ.3: ವಜ್ರವ್ಯಾಪಾರಿ ನೀರವ್ ಮೋದಿ ಮತ್ತು ಆತನ ಸಂಬಂಧಿ ಹಾಗೂ ಗೀತಾಂಜಲಿ ಜೆಮ್ಸ್‌ನ ಪ್ರವರ್ತಕ ಮೆಹುಲ್ ಚೋಕ್ಸಿ ಅವರು ಪ್ರಮುಖ ಆರೋಪಿಗಳಾಗಿರುವ ಪಿಎನ್‌ಬಿ ಬ್ಯಾಂಕ್ ವಂಚನೆಯ ಹೊಣೆಗಾರಿಕೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಪಾಲು ಕೂಡ ಇದೆ ಎಂದು ಮಂಗಳವಾರ ಇಲ್ಲಿ ಹೇಳಿದ ಕೇಂದ್ರ ಜಾಗೃತ ಆಯುಕ್ತ ಕೆ.ವಿ.ಚೌಧರಿ ಅವರು, ಹಗರಣದ ಅವಧಿಯಲ್ಲಿ ಆರ್‌ಬಿಐ ಲೆಕ್ಕ ಪರಿಶೋಧನೆಯನ್ನು ನಡೆಸಿರಲಿಲ್ಲ ಎಂದು ಬೆಟ್ಟು ಮಾಡಿದರು.

ಸದೃಢವಾದ ಆಡಿಟಿಂಗ್ ವ್ಯವಸ್ಥೆಯು ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಕೇಂದ್ರ ಜಾಗೃತ ಆಯೋಗವು 13,000 ಕೋ.ರೂ.ಗಳ ಪಿಎನ್‌ಬಿ ವಂಚನೆಯ ಕುರಿತು ಸಿಬಿಐ ತನಿಖೆಯ ನಿಗಾ ವಹಿಸಿದೆ.

       ಆರ್‌ಬಿಐ ಬ್ಯಾಂಕಿಂಗ್ ಕ್ಷೇತ್ರವನ್ನು ನಿಯಂತ್ರಿಸುವ ಹೊಣೆಗಾರಿಕೆಯನ್ನು ಹೊಂದಿದೆ, ಆದರೆ ಋಜುತ್ವದಲ್ಲಿ ಯಾವುದೇ ಲೋಪ ಕಂಡು ಬಂದರೆ ಸಿವಿಸಿಯು ಅದನ್ನು ಪರಿಶೀಲಿಸಲಿದೆ ಎಂದು ಹೇಳಿದ ಚೌಧರಿ, ತಾನು ನಿಯತಕಾಲಿಕ ಆಡಿಟಿಂಗ್‌ನ್ನು ಕೈಬಿಟ್ಟು ಹಣಕಾಸು ಅಪಾಯವು ಒಳಗೊಂಡಿದ್ದಾಗ ನಡೆಸುವ “ರಿಸ್ಕ್ ಬೇಸ್ಡ್“ ಆಡಿಟಿಂಗ್‌ನ್ನು ಅಳವಡಿಸಿಕೊಂಡಿದ್ದೇನೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಅಪಾಯಗಳನ್ನು ನಿರ್ಧರಿಸಲು ಅದು ಕೆಲವು ಮಾನದಂಡಗಳನ್ನು ಹೊಂದಿರಲೇಬೇಕು. ಅವುಗಳನ್ನು ಆಧರಿಸಿ ಅದು ಆಡಿಟಿಂಗ್ ನಡೆಸುತ್ತದೆ. ಆದರೆ ಪಿಎನ್‌ಬಿ ವಂಚನೆಯ ಅವಧಿಯಲ್ಲಿ ಅದು ಆಡಿಟಿಂಗ್ ನಡೆಸಿರುವುದು ಕಂಡು ಬರುತ್ತಿಲ್ಲ ಎಂದರು.

ನಿಯಂತ್ರಕ ಸಂಸ್ಥೆಯಾಗಿ ಆರ್‌ಬಿಐ ಸಾಮಾನ್ಯ ಮಾರ್ಗಸೂಚಿ ಗಳನ್ನು ಹೊರಡಿಸುತ್ತದೆ. ಶಾಖೆಯಿಂದ ಶಾಖೆಗೆ ಮತ್ತು ಬ್ಯಾಂಕಿನಿಂದ ಬ್ಯಾಂಕಿಗೆ ಹೋಗಿ ಪರಿಶೀಲನೆ ನಡೆಸುವುದು ಅದರ ಕರ್ತವ್ಯವಾಗಿದೆ. ಆದರೆ ಆ ಕೆಲಸವನ್ನು ಆರ್‌ಬಿಐ ಮಾಡುತ್ತಿಲ್ಲ ಎಂದ ಅವರು, ತಮ್ಮ ವ್ಯವಹಾರಗಳನ್ನು ಸೂಕ್ತರೀತಿಯಲ್ಲಿ ಮತ್ತು ನೈತಿಕತೆಯಿಂದ ನಡೆಸುವುದು ಬ್ಯಾಂಕುಗಳ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಏನಾದರೂ ತಪ್ಪು ಸಂಭವಿಸಿದರೆ ಪ್ರತಿಯೊಬ್ಬರನ್ನೂ ದೂರಲು ಸಾಧ್ಯವಿಲ್ಲ ಎಂದರು.

ಪಿಎನ್‌ಬಿಯಲ್ಲಿ ಮಾತ್ರ ವಂಚನೆ ನಡೆದಿದೆ ಮತ್ತು ಇತರ ಬ್ಯಾಂಕುಗಳು ಶೇ.100ರಷ್ಟು ಸರಿಯಾಗಿವೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ ಚೌಧರಿ, ಇತರ ಬ್ಯಾಂಕುಗಳು ಉತ್ತಮ ವ್ಯವಸ್ಥೆಯನ್ನು ಹೊಂದಿವೆ ಮತ್ತು ಅವು ಅದನ್ನು ಅನುಸರಿಸುತ್ತಿವೆ ಎಂದಷ್ಟೇ ನಾವು ಆಶಿಸಬೇಕಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಿಎನ್‌ಬಿ ವಂಚನೆ ಕುರಿತು ಸಿವಿಸಿ ತನಿಖೆ ಪ್ರಗತಿಯಲ್ಲಿರುವುದರಿಂದ ವಿವರಗಳನ್ನು ಸದ್ಯಕ್ಕೆ ಬಹಿರಂಗಗೊಳಿಸುವಂತಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News