ಕೇಂದ್ರದ ಮಾಧ್ಯಮ ಕಣ್ಗಾವಲು ಸಮಿತಿ ಸದಸ್ಯರಾಗಿ ಪ್ರತಾಪ್ ಸಿಂಹ

Update: 2018-04-03 18:04 GMT

ಹೊಸದಿಲ್ಲಿ, ಎ.3: ಸುಳ್ಳು ಸುದ್ದಿಗಳನ್ನು ಹರಡುವ ಪತ್ರಕರ್ತರ ಮತ್ತು ಮಾಧ್ಯಮಗಳ ಮೇಲೆ ನಿಗಾಯಿಡಲು ಕೇಂದ್ರ ಸರಕಾರವು ಮಾಧ್ಯಮ ಮಂಡಳಿಯನ್ನು ಪುನರ್‌ರಚಿಸಿದೆ. ಆದರೆ, ಸುಳ್ಳು ಸುದ್ದಿ ಹಾಕಿದ ಕಾರಣಕ್ಕೆ ಬಂಧನಕ್ಕೊಳಗಾಗಿರುವ ಸುದ್ದಿ ಜಾಲತಾಣದ ಸಂಪಾದಕನ ಪರ ನಿಂತ ಬಿಜೆಪಿ ಸಂಸದನೇ ಈ ಕಣ್ಗಾವಲು ಸಮಿತಿಯ ಭಾಗವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸರಕಾರವು ಮಾರ್ಚ್ 16ರಂದು ಮಾಧ್ಯಮ ಮಂಡಳಿಯನ್ನು ಪುನರ್‌ರಚಿಸಿತ್ತು. ಆಮೂಲಕ ಸುಳ್ಳು ಸುದ್ದಿಗಳ ಮೇಲೆ ನಿಗಾಯಿಡುವ ಸಲುವಾಗಿ ಪತ್ರಕರ್ತರು ಮತ್ತು ಸಂಸದರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಈ ಸಮಿತಿಗೆ ಲೋಕಸಭಾ ಸ್ಪೀಕರ್ ಆಯ್ಕೆ ಮಾಡಿರುವ ಸದಸ್ಯರ ಪೈಕಿ ಸುಳ್ಳು ಸುದ್ದಿ ಹರಡಿದ ಕಾರಣಕ್ಕೆ ಬಂಧನಕ್ಕೊಳಗಾಗಿರುವ ಜಾಲತಾಣದ ಸಂಪಾದಕರಾದ ಮಹೇಶ್ ಹೆಗ್ಡೆಯ ಪರ ವಾದಿಸಿದ್ದ ಪ್ರತಾಪ್ ಸಿಂಹ ಅವರೂ ಸೇರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೋಸ್ಟ್ ಕಾರ್ಡ್‌ ನ್ಯೂಸ್ ಎಂಬ ಸುದ್ದಿ ಜಾಲತಾಣದ ಸ್ಥಾಪಕ ಸಂಪಾದಕರಾಗಿರುವ ಮಹೇಶ್ ಹೆಗ್ಡೆಯನ್ನು ಜೈನ ಮುನಿ ಮೇಲೆ ಮುಸ್ಲಿಂ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂಬ ಸುಳ್ಳು ಸುದ್ದಿ ಹರಡಿದ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ವಾಸ್ತವದಲ್ಲಿ ಜೈನ ಮುನಿ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು.

ಮಹೇಶ್ ಹೆಗ್ಡೆಯನ್ನು ಬೆಂಬಲಿಸಿದವರಲ್ಲಿ ಪ್ರತಾಪ್ ಸಿಂಹ ಮೊದಲಿಗರಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಸುಳ್ಳು ಸುದ್ದಿ ಹರಡುವ ಪತ್ರಕರ್ತರನ್ನು ಶಿಕ್ಷಿಸುವ ತಮ್ಮ ಆದೇಶವನ್ನು ಸರಕಾರ ಹಿಂಪಡೆದಿದ್ದರೂ ಮಾಧ್ಯಮ ಮಂಡಳಿಗೆ ಸರಕಾರ ನಡೆಸಿರುವ ಸದಸ್ಯರ ಆಯ್ಕೆಯಿಂದ ತೀವ್ರವಾಗಿ ಆಘಾತವಾಗಿದೆ ಎಂದು ಎಡಿಟರ್ಸ್ ಗಿಲ್ಡ್ ತಿಳಿಸಿದೆ. ಈ ಆಯ್ಕೆಯನ್ನು ಗಮನಿಸಿದಾಗ ಇಂಥ ವಿಷಯಗಳಲ್ಲಿ ಮಂಡಳಿಯು ನ್ಯಾಯವನ್ನು ಒದಗಿಸುತ್ತದೆ ಎಂದು ನಂಬಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ. ಮಂಡಳಿಗೆ ಗಿಲ್ಡ್ ಆಯ್ಕೆ ಮಾಡಿದ ಸದಸ್ಯರನ್ನು ತಾಂತ್ರಿಕ ನೆಲೆಯಲ್ಲಿ ನಿರಾಕರಿಸಲಾಗಿದೆ ಎಂದು ಗಿಲ್ಡ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News