×
Ad

ಮೇರಿಕೋಮ್‌ಗೆ ಚೊಚ್ಚಲ ಪದಕ ಗೆಲ್ಲಲು ಇನ್ನೊಂದು ಗೆಲುವು ಅಗತ್ಯ

Update: 2018-04-03 23:51 IST

ಗೋಲ್ಡ್‌ಕೋಸ್ಟ್, ಎ.3: ಭಾರತದ ಹಿರಿಯ ಬಾಕ್ಸಿಂಗ್ ತಾರೆ ಮೇರಿ ಕೋಮ್‌ಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿ ಪದಕ ಜಯಿಸಲು ಇನ್ನೊಂದು ಗೆಲುವಿನ ಅಗತ್ಯವಿದೆ. ಮಂಗಳವಾರ ನಡೆದ ಬಾಕ್ಸಿಂಗ್ ಕ್ರೀಡೆಯ ಡ್ರಾ ಪ್ರಕ್ರಿಯೆಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು ವಿಕಾಸ್ ಕ್ರಿಶನ್ ಪುರುಷರ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಬೈ ಪಡೆದಿದ್ದಾರೆ.

ಸಿರಿಂಜ್ ವಿವಾದಕ್ಕೆ ಸಿಲುಕಿದ ಬಾಕ್ಸಿಂಗ್ ವೈದ್ಯರಾದ ಅಮೋಲ್ ಪಾಟೀಲ್ ಛೀಮಾರಿ ಹಾಕಲ್ಪಟ್ಟು ಶಿಕ್ಷೆಯಿಂದ ಪಾರಾಗಿದ್ದಕ್ಕೆ ನಿಟ್ಟುಸಿರು ಬಿಟ್ಟ ಬಾಕ್ಸರ್‌ಗಳು ತಮ್ಮ ಪಂದ್ಯದತ್ತ ಹೆಚ್ಚು ಗಮನ ನೀಡಿದರು.

ಎ.8ರಂದು ನಡೆಯಲಿರುವ ಮಹಿಳೆಯರ 48 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮೇರಿ ಕೋಮ್ ಸ್ಕಾಟ್ಲೆಂಡ್‌ನ ಮೇಗಾನ್ ಗೊರ್ಡನ್‌ರನ್ನು ಎದುರಿಸಲಿದ್ದಾರೆ. 35ರ ಹರೆಯದ ಮೇರಿ ಕೋಮ್ ಮೊದಲ ಹಾಗೂ ಕೊನೆಯ ಬಾರಿ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸ್ಪರ್ಧಿಸುತ್ತಿದ್ದು ಚಿನ್ನದ ಪದಕ ಗೆಲ್ಲುವ ಫೇವರಿಟ್ ಬಾಕ್ಸರ್ ಎನಿಸಿಕೊಂಡಿದ್ದಾರೆ. ಮತ್ತೊಂದೆಡೆ, ವಿಕಾಸ್(75 ಕೆಜಿ) ಅವರು ಚೊಚ್ಚಲ ಪಂದ್ಯ ಆಡಿದ ಮನೀಶ್ ಕೌಶಿಕ್(60 ಕೆಜಿ) ಅವರೊಂದಿಗೆ ಅಂತಿಮ-16ರ ಸುತ್ತಿಗೆ ಲಗ್ಗೆ ಇಟ್ಟರು. ವಿಕಾಸ್ ಬಲ್ಗೇರಿಯದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿ ಗೇಮ್ಸ್‌ಗೆ ಆಗಮಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಪದಕ ವಿಜೇತ ಬಾಕ್ಸರ್ ಸತೀಶ್ ಕುಮಾರ್(+91ಕೆಜಿ) ಕೂಡ ಬೈ ಪಡೆದಿದ್ದಾರೆ. ಕೆಲವೇ ಬಾಕ್ಸರ್‌ಗಳಿದ್ದ ಡ್ರಾ ಸುತ್ತಿನಲ್ಲಿ ಕುಮಾರ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪದಕ ವಿಜೇತ ಪಿಂಕಿ ಜಾಂಗ್ರಾ(51 ಕೆಜಿ) ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು, ಎ.11 ರಂದು ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್‌ನ ಲಿಸಾ ವೈಟ್‌ಸೈಡ್ ಅವರನ್ನು ಎದುರಿಸಲಿದ್ದಾರೆ.

ಇಂಡಿಯಾ ಓಪನ್ ಚಾಂಪಿಯನ್ ಲವ್ಲಿನಾ ಬರ್ಗಹೈನ್(69ಕೆಜಿ) ಮೊದಲ ಸುತ್ತಿನಲ್ಲಿ ಬೈ ಪಡೆದು ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿರುವ ಭಾರತದ ಏಕೈಕ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. ಅಂತಿಮ-8ರ ಸುತ್ತಿನಲ್ಲಿ ಬರ್ಗಹೈನ್ ಇಂಗ್ಲೆಂಡ್‌ನ ಸ್ಯಾಂಡಿ ರಿಯಾನ್‌ರನ್ನು ಎದುರಿಸಲಿದ್ದಾರೆ.

ಪುರುಷರ ತಂಡದ ಕಿರಿಯ ಬಾಕ್ಸರ್ 19ರ ಹರೆಯದ ನಮಾನ್ ತನ್ವರ್(91ಕೆಜಿ)ಎ.6 ರಂದು ನಡೆಯಲಿರುವ ಮೊದಲ ಬಾಕ್ಸಿಂಗ್ ಸ್ಪರ್ಧೆಯಲ್ಲಿ ತಾಂಜಾನಿಯದ ಹರುನಾ ಮಹಾಂಡೊರನ್ನು ಎದುರಿಸುವರು.

 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಬಾಕ್ಸರ್ ಮನೋಜ್ ಕುಮಾರ್(69ಕೆಜಿ) ಎ.5 ರಂದು ತನ್ನ ಮೊದಲ ಪಂದ್ಯದಲ್ಲಿ ನೈಜೀರಿಯದ ಒಸಿಟಾ ಉಮೇಹ್ ಅವರನ್ನು ಎದುರಿಸುವ ಮೂಲಕ ಭಾರತದ ಬಾಕ್ಸಿಂಗ್ ಅಭಿಯಾನ ಆರಂಭಿಸಲಿದ್ದಾರೆ.

ಮಾಜಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಸರಿತಾದೇವಿ(60ಕೆಜಿ)ಹಾಗೂ ಇಂಡಿಯಾ ಓಪನ್ ಚಾಂಪಿಯನ್ ಅಮಿತ್ ಪಾಂಘಾಲ್(49ಕೆಜಿ) ಕ್ರಮವಾಗಿ ಕಿಂಬೆರ್ಲಿ ಗಿಟ್ಟೆನ್ಸ್ ಹಾಗೂ ಘಾನಾದ ಟೆಟ್ಟೆ ಸುಲೇಮನು ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News