ಸುಳ್ಳು ಸುದ್ದಿಗಳನ್ನು ಹರಡುವ ರಾಜಕಾರಣಿಗಳಿಗೆ ನಿಷೇಧವಾಗಲಿ

Update: 2018-04-04 04:09 GMT

ಸುಳ್ಳು ಸುದ್ದಿಗಳ ತಳಹದಿಯ ಮೇಲೆ ಎದ್ದು ನಿಂತ ಸರಕಾರವೊಂದು ಸುಳ್ಳು ಸುದ್ದಿಗಳನ್ನು ಹರಡುವ ಪತ್ರಕರ್ತರ ಮೇಲೆ ಕ್ರಮ ತೆಗೆದುಕೊಳ್ಳಲು ಹೊರಟು, ಅರ್ಧದಲ್ಲೇ ತನ್ನ ನಿರ್ಧಾರದಿಂದ ವಾಪಸಾಗಿದೆ. ಸುಳ್ಳು ಸುದ್ದಿ ಪ್ರಕಟಿಸಿದರೆ ಅಥವಾ ಹರಡಿದರೆ ಆ ಪತ್ರಕರ್ತನ ಅಧಿಕೃತ ಸದಸ್ಯತ್ವವನ್ನು ನಿಷೇಧಿಸುವ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಆದೇಶವನ್ನು ಕೊನೆಯ ಕ್ಷಣದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಸಲಹೆಯ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂದಕ್ಕೆ ತೆಗೆದುಕೊಂಡಿದೆ. ಇಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಮಧ್ಯಪ್ರವೇಶವಾಗಿದ್ದು, ದೇಶಾದ್ಯಂತ ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಒಂದು ರೀತಿಯಲ್ಲಿ ‘ಗಟ್ಟಿಯಾಗಿದ್ದರೆ ರೊಟ್ಟಿ, ಇಲ್ಲವಾದರೆ ದೋಸೆ’ ಎಂಬ ಗ್ರಾಮೀಣ ಗಾದೆಗೆ ಪೂರಕವಾಗಿ ಕೇಂದ್ರ ಸರಕಾರ ನಡೆದುಕೊಂಡಿದೆ. ಪತ್ರಿಕೆಯ ನ್ಯಾಯಾನ್ಯಾಯಗಳನ್ನು ಪರಿಶೀಲಿಸುವ ಅಧಿಕಾರವನ್ನು ಪ್ರೆಸ್ ಕೌನ್ಸಿಲ್‌ಗೆ ಬಿಟ್ಟುಕೊಟ್ಟಿದೆ.

ಇಂದು ಮಾಧ್ಯಮಗಳು ವದಂತಿಗಳನ್ನು ಹರಡುವ ಮೂಲಕ ದೇಶದ ವಾತಾವರಣವನ್ನು ಕುಲಗೆಡಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಮಾಧ್ಯಮಗಳಲ್ಲಿ ಪ್ರತಿದಿನ ಪ್ರಸಾರವಾಗುವ ‘ವಾಸ್ತು ಭವಿಷ್ಯ’ದ ವಂಚನೆಗಳಿಗೆ ಪ್ರತಿದಿನ ನೂರಾರು ಅಮಾಯಕರು ಬಲಿಯಾಗುತ್ತಿದ್ದಾರೆ. ವಾಸ್ತುಜ್ಯೋತಿಷಿಯನ್ನು ಕೂರಿಸಿ ಚಾನೆಲ್‌ಗಳು ಮಾಡುತ್ತಿರುವ ವಂಚನೆಗಳನ್ನೇನಾದರೂ ಸುಳ್ಳು ಮಾಹಿತಿಯ ಅಡಿಯಲ್ಲಿ ಗುರುತಿಸಿದರೆ ದೇಶದ ಎಲ್ಲ ಚಾನೆಲ್‌ಗಳನ್ನೂ ಮುಚ್ಚಬೇಕಾಗುತ್ತದೆ. ಇತ್ತೀಚೆಗೆ ಒಂದು ಟಿವಿ ವಾಹಿನಿ ‘‘ಬೆಂಗಳೂರಿನಲ್ಲಿ ಪ್ರಳಯವಾಗುತ್ತದೆ’’ ಎಂಬ ವದಂತಿಯನ್ನು ಹರಿಯಬಿಟ್ಟು ಜನರಲ್ಲಿ ಆತಂಕವನ್ನು ಹುಟ್ಟು ಹಾಕಲು ಯತ್ನಿಸಿತ್ತು. ಅಭಿವ್ಯಕ್ತಿ ಸ್ವಾತಂತ್ರದ ಸಂಪೂರ್ಣ ದುರುಪಯೋಗವಿದು. ದೇಶಾದ್ಯಂತ ನಡೆಯುವ ಕೋಮುಗಲಭೆಗಳ ಹಿಂದೆ ಮಾಧ್ಯಮಗಳ ಸುಳ್ಳು ಸುದ್ದಿಗಳ ಕೊಡುಗೆ ಸಣ್ಣದೇನಲ್ಲ. ಇದಕ್ಕೆ ಉದಾಹರಣೆಗಳನ್ನು ಹುಡುಕುತ್ತಾ ಯಾವುದೋ ಬಂಗಾಳ, ಬಿಹಾರ, ಉತ್ತರ ಪ್ರದೇಶಕ್ಕೆಹೋಗಬೇಕಾಗಿಲ್ಲ. ಇತ್ತೀಚೆಗೆ ಕಾರವಾರದಲ್ಲಿ ನಡೆದ ಕೋಮುಉದ್ವಿಗ್ನ ಘಟನೆಗಳ ಹಿಂದೆ ಮಾಧ್ಯಮಗಳ ಪಾತ್ರವೇನು ಸಣ್ಣದಿದೆಯೇ? ಓರ್ವ ಅಮಾಯಕನ ಹೆಣವೊಂದು ಕೆರೆಯಲ್ಲಿ ಪತ್ತೆಯಾದ ಬೆನ್ನಿಗೇ, ಆ ಸಾವಿನ ಹೊಣೆಯನ್ನು ಸ್ಥಳೀಯ ಮುಸ್ಲಿಮರ ತಲೆಗೆ ಕಟ್ಟಿದರು. ಆತನಿಗೆ ಬರ್ಬರವಾಗಿ ಚಿತ್ರ ಹಿಂಸೆ ನೀಡಲಾಗಿದೆ ಎಂಬಲ್ಲಿಂದ ಹಿಡಿದು, ಆತನನ್ನು ಜೀವಂತ ದಹನ ಮಾಡಲಾಗಿದೆ ಎನ್ನುವವರೆಗೆ ಮಾಧ್ಯಮಗಳಲ್ಲಿ ಕತೆಗಳು ಪುಂಖಾನುಪುಂಖವಾಗಿ ಹರಡಿತು.

ಆದರೆ ಈ ವರದಿಯನ್ನು ಬರೆಯಲು ಅವರಲ್ಲಿದ್ದ ಸಾಕ್ಷಗಳೇನು? ಎನ್ನುವ ಪ್ರಶ್ನೆಗೆ ಈವರೆಗೂ ಉತ್ತರ ದೊರಕಿಲ್ಲ. ಪತ್ರಕರ್ತರು ಒಂದು ಸುದ್ದಿಯನ್ನು ವರದಿ ಮಾಡಬೇಕಾದರೆ ಅದು ಅವರಿಗೆ ದೊರಕಿದ ಮೂಲಗಳನ್ನು ಪ್ರಕಟಪಡಿಸುವ ಹೊಣೆಗಾರಿಕೆಯನ್ನು ಹೊಂದಿಲ್ಲವೇ? ಹೆಚ್ಚಿನ ಸಂದರ್ಭಗಳಲ್ಲಿ ಅವರ ಸುದ್ದಿಗಳ ಹಿಂದಿರುವ ಮೂಲಗಳು ರಾಜಕಾರಣಿಗಳು ಮತ್ತು ಮತೀಯ ಶಕ್ತಿಗಳೇ ಆಗಿರುತ್ತವೆ. ರಾಜಕಾರಣ ಮತ್ತು ಪತ್ರಿಕೋದ್ಯಮದ ನಡುವಿನ ಅನೈತಿಕ ಸಂಬಂಧ ಇಂತಹ ವದಂತಿಗಳ ಹುಟ್ಟಿಗೆ ಕಾರಣವಾಗುತ್ತದೆ. ಉತ್ತರ ಕನ್ನಡದಲ್ಲಿ, ಮುಳ್ಳು ತರಚಿ ಗಾಯಗೊಂಡಿದ್ದ ಬಾಲಕಿಯ ಪ್ರಕರಣಕ್ಕೂ ಕೋಮುಬಣ್ಣವನ್ನು ಹಚ್ಚಲು ಇದೇ ಮಾಧ್ಯಮಗಳು ಹವಣಿಸಿದ್ದವು. ‘‘ಮುಸ್ಲಿಮರಿಂದ ಬಾಲಕಿಯ ಕೊಲೆ ಯತ್ನ’’ ಎಂದೆಲ್ಲ ಬರೆದು ಜನರನ್ನು ಪ್ರಚೋದಿಸಲು ಯತ್ನಿಸಿದವು. ಇಂತಹ ಸುದ್ದಿಗಳ ಹಿಂದೆ ಪತ್ರಕರ್ತರಷ್ಟೇ ಅಲ್ಲ, ರಾಜಕೀಯ ನಾಯಕರೂ ಇದ್ದಾರೆ. ತೀರ್ಥಹಳ್ಳಿಯ ನಂದಿತಾ ಆತ್ಮಹತ್ಯೆಯನ್ನು ಪತ್ರಕರ್ತರು ಯಾವ ರೀತಿಯಲ್ಲಿ ವರದಿ ಮಾಡಿದರು ಮತ್ತು ಅದರಿಂದ ಶಿವಮೊಗ್ಗ ಜಿಲ್ಲೆಯ ಜನರು ಅನುಭವಿಸಿದ ಯಾತನೆ ಏನು ಎನ್ನುವುದನ್ನು ಮುಂದಿಟ್ಟು ‘ಸುಳ್ಳು ಸುದ್ದಿ’ಗಳ ಅಸಲಿಯತ್ತುಗಳನ್ನು ಚರ್ಚೆ ಮಾಡಬಹುದು.

ಬಹುತೇಕ ಪತ್ರಿಕೆಗಳ ತಲೆಬರಹಗಳು ‘ನಂದಿತಾ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆಗೈಯಲಾಗಿದೆ’ ಎಂದು ಹೇಳುತ್ತಿದ್ದವು. ಅಂತಹ ಘಟನೆಯೇ ನಡೆದಿರಲಿಲ್ಲ ಮತ್ತು ನಂದಿತಾ ಶಾಲಾ ಕಲಿಕೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಬಳಿಕ ಬಹಿರಂಗವಾಯಿತು. ಆದರೆ ಈ ವರದಿಗಳ ಹಿಂದೆ ಇರುವವರು ಪತ್ರಕರ್ತರು ಮಾತ್ರವಲ್ಲ, ಸಂಘಪರಿವಾರದ ಒಂದು ದೊಡ್ಡ ಗುಂಪು ಈ ವದಂತಿಯನ್ನು ಸೃಷ್ಟಿಸುವಲ್ಲಿ ತನ್ನ ಕೊಡುಗೆಯನ್ನು ನೀಡಿದೆ. ಒಂದು ಪಕ್ಷದ ರಾಜಕೀಯ ನಾಯಕರು ಈ ವದಂತಿಯನ್ನು ಸತ್ಯವಾಗಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೀಗಿರುವಾಗ, ಬರೇ ಪತ್ರಕರ್ತರನ್ನು ಹೊಣೆ ಮಾಡುವುದರಿಂದ ಸುಳ್ಳು ಸುದ್ದಿಗಳು ಹರಡುವುದು ನಿಲ್ಲುತ್ತದೆಯೇ? ರಾಜಕಾರಣಿಗಳ ಬಾಯಿಗಳೇ ಸುಳ್ಳುಸುದ್ದಿಗಳೆನ್ನುವ ವೈರಸ್‌ಗಳು ಹುಟ್ಟುವ ಚರಂಡಿಗಳು. ಅಲ್ಲಿಂದ ಅವು ನೇರವಾಗಿ ಸುದ್ದಿ ಮನೆಯನ್ನು ಪ್ರವೇಶಿಸುತ್ತವೆ. ರಾಜಕಾರಣಿಗಳು ಸಾರ್ವಜನಿಕವಾಗಿ ಆಡಿದ ಸುಳ್ಳು ಭಾಷಣಗಳನ್ನು, ಹೇಳಿಕೆಗಳನ್ನು ಮಾಧ್ಯಮಗಳು ಪ್ರಕಟಿಸಿದರೂ ಅದು ಸಮಾಜದ ಮೇಲೆ ತನ್ನ ಪರಿಣಾಮಗಳನ್ನು ಬೀರಿಯೇ ಬೀರುತ್ತವೆೆ.

ಹಾಗಾದರೆ ಸುಳ್ಳು ಸುದ್ದಿಗಳನ್ನು ಹುಟ್ಟಿಸುವ, ಸಾರ್ವಜನಿಕ ಭಾಷಣಗಳಲ್ಲಿ ಉದ್ವಿಗ್ನಕಾರಿ ಸುಳ್ಳುಗಳನ್ನು ಹರಡುವ ರಾಜಕಾರಣಿಗಳಿಗೆ ಯಾಕೆ ಇಂತಹ ನಿಷೇಧಗಳನ್ನು ಹೇರ ಬಾರದು? ಈ ನಿಟ್ಟಿನಲ್ಲಿ ಸರಕಾರ ಯಾಕೆ ಕ್ರಮ ತೆಗೆದುಕೊಳ್ಳಬಾರದು? ‘ಗುಜರಾತ್ ಅಭಿವೃದ್ಧಿ’ ಎನ್ನುವ ಸುಳ್ಳಿನ ಮೂಲಕ ಮೋದಿಯೆನ್ನುವ ನಾಯಕ ಹೊರಹೊಮ್ಮಿದ್ದಾರೆ. ಇಂದಿಗೂ ಮೋದಿ ಸರಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಮಾಧ್ಯಮಗಳು ಬಗೆ ಬಗೆಯ ಸುಳ್ಳು ಸುದ್ದಿಗಳನ್ನು ತೇಲಿ ಬಿಡುತ್ತಿವೆ. ಸುಳ್ಳು ಸುದ್ದಿಗಳನ್ನು ಹರಡುವುದಕ್ಕಾಗಿ ಸ್ವತಃ ರಾಜಕಾರಣಿಗಳೇ ಮಾಧ್ಯಮಗಳನ್ನು ಸರ್ವ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸುದ್ದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಕೇಂದ್ರ ಸರಕಾರಕ್ಕಿದೆಯೇ? ಕೊನೆಯ ಕ್ಷಣದಲ್ಲಿ ಇದು ಮನವರಿಕೆಯಾಗಿ, ತನ್ನ ಆದೇಶವನ್ನು ಕೇಂದ್ರ ಸರಕಾರ ಹಿಂದೆಗೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಒಂದಂತೂ ನಿಜ.

ಒಂದು ವೇಳೆ ಸರಕಾರ ಇಂತಹ ಕಾನೂನನ್ನು ಜಾರಿಗೆ ತಂದರೆ, ಆ ಕಾನೂನು ಪ್ರಯೋಗವಾಗುವುದು ಸರಕಾರದ ವೈಫಲ್ಯಗಳನ್ನು ವರದಿ ಮಾಡುವ ಪತ್ರಿಕೆಗಳ ಮೇಲೆ. ಈಗಾಗಲೇ ಎನ್‌ಡಿಟಿವಿ, ದಿವೈರ್‌ನಂತಹ ಪತ್ರಿಕೆಗಳನ್ನು ಬಗ್ಗು ಬಡಿಯಲು ಹೋಗಿ ಕೇಂದ್ರ ಸರಕಾರ ಮುಖಭಂಗ ಅನುಭವಿಸಿರುವುದರಿಂದ, ತನ್ನ ವಿರುದ್ಧ ಬರೆಯುವ ಮಾಧ್ಯಮಗಳ ಮೇಲೆ ಅಂಕುಶ ಹಾಕಲು ವಾಮಮಾರ್ಗವನ್ನು ಹಿಡಿದಿದೆ. ತನ್ನ ಪರವಾಗಿ ಬರೆದ ಸುದ್ದಿಗಳೆಲ್ಲವೂ ನಿಜ ಮತ್ತು ವಿರುದ್ಧ ಬರೆದ ಸುದ್ದಿಗಳೆಲ್ಲ ಸುಳ್ಳು ಎನ್ನುವ ಮಾನದಂಡದಲ್ಲಿ ಪತ್ರಕರ್ತರಿಗೆ ಈ ಕಾನೂನಿನ ಮೂಲಕ ಶಿಕ್ಷೆ ವಿಧಿಸಲು ಸರಕಾರ ಯೋಜನೆ ಹಾಕಿಕೊಂಡಿತ್ತು. ಆದರೆ ಪ್ರಜ್ಞಾವಂತರ ಮತ್ತು ಹಿರಿಯ ಪತ್ರಕರ್ತರ ತೀವ್ರ ವಿರೋಧದ ಬಳಿಕ ತಕ್ಷಣವೇ ತನ್ನ ಆದೇಶವನ್ನು ಹಿಂದೆಗೆದುಕೊಂಡಿದೆ. ಸರಕಾರ ಈ ಆದೇಶವನ್ನು ಹಿಂದೆಗೆದುಕೊಂಡಿರುವುದು ಅಭಿನಂದನೀಯ. ಆದರೆ ಇದೇ ಸಂದರ್ಭದಲ್ಲಿ, ಸಾರ್ವಜನಿಕವಾಗಿ ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದ ಸ್ವಾಸ್ಥವನ್ನು ಕೆಡಿಸುವ, ಜನರನ್ನು ದಾರಿ ತಪ್ಪಿಸಿರುವ ರಾಜಕಾರಣಿಗಳಿಗೆ ಒಂದು ಕಠಿಣ ಕಾನೂನನ್ನು ಜಾರಿಗೊಳಿಸುವುದು ಮಾತ್ರ ಅತ್ಯಗತ್ಯ. ಅದರಿಂದ ದೇಶಕ್ಕೆ ಲಾಭವಿದೆ. ಕೇಂದ್ರ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News