ರಸ್ತೆಯಿಂದ ಜಿಗಿದು ಎರಡನೆ ಕಟ್ಟಡದ ಎರಡನೆ ಅಂತಸ್ತಿಗೆ ಅಪ್ಪಳಿಸಿದ ಕಾರು!

Update: 2018-04-03 18:49 GMT

 ಭಾರೀ ವೇಗವಾಗಿ ಧಾವಿಸಿ ಬಂದ ಕಾರೊಂದು, ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು ಎತ್ತರಕ್ಕೆ ಚಿಮ್ಮಿತಲ್ಲದೆ, ನೇರವಾಗಿ ಕಟ್ಟಡವೊಂದರ ಎರಡನೆ ಅಂತಸ್ತಿನಲ್ಲಿರುವ ದಂತವೈದ್ಯರ ಕ್ಲಿನಿಕ್‌ನೊಳಗೆ ಅಪ್ಪಳಿಸಿದೆ. ಇದೇನು ಯಾವುದೋ ಸಿನೆಮಾದ ಸ್ಟಂಟ್ ದೃಶ್ಯದ ಚಿತ್ರೀಕರಣವಿರಬಹುದೆಂದು ಕೆಲವರು ಭಾವಿಸಿದ್ದರು ಕೂಡಾ. ಆದರೆ ಇದು ರೀಲ್‌ಗಾಗಿ ನಡೆದ ಸಾಹಸವಲ್ಲ, ರಿಯಲ್ ಆಗಿ ನಡೆದ ಅವಘಡವೆಂದು ಗೊತ್ತಾದಾಗ ಅಚ್ಚರಿಗೊಂಡಿದ್ದರು.

 ಅಂದ ಹಾಗೆ ಈ ಘಟನೆ ನಡೆದಿದ್ದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸಾಂತಾ ಅನಾ ನಗರದಲ್ಲಿ. ಅವಘಡ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಟ್ಟಡದ ಎರಡನೆ ಅಂತಸ್ತಿನಲ್ಲಿ ನೇತಾಡುತ್ತಿದ್ದ ಕಾರಿಗೆ ನಿಧಾನವಾಗಿ ಹತ್ತಿಕೊಳ್ಳುತ್ತಿದ್ದ ಬೆಂಕಿಯನ್ನು ಆರಿಸಿದರಲ್ಲದೆ, ಕಾರಿನಲ್ಲಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ. ಇವರಿಬ್ಬರಿಗೂ ಸಣ್ಣಪುಟ್ಟಗಾಯಗಳಾಗಿದ್ದವು.

ಆನಂತರ ಅಗ್ನಿಶಾಮಕದಳದ ಸಿಬ್ಬಂದಿ ಬೃಹತ್ ಗಾತ್ರದ ಬುಲ್‌ಡೋಝರ್ ಬಳಸಿ ಕಾರನ್ನು ಕೆಳಗಿಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದಾತನು ಮಾದಕದ್ರವ್ಯ ಸೇವಿಸಿರುವುದು ವಿಚಾರಣೆಯಿಂದ ತಿಳಿದುಬಂದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ವಿಭಜಕದಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣಿನ ದಿಬ್ಬವಿದ್ದುದು ಕಾರು ಅಷ್ಟೊಂದು ಎತ್ತರಕ್ಕೆ ಜಿಗಿಯಲು ಕಾರಣವಾಗಿರಬಹುದೆಂದು ಪೊಲೀಸರು ಹೇಳಿಕೊಂಡಿದ್ದಾರೆ.

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News