ದ.ಕ.: ಶಿಶು, ತಾಯಿ ಮರಣ ಪ್ರಮಾಣದಲ್ಲಿ ಭಾರೀ ಇಳಿಕೆ

Update: 2018-04-04 09:07 GMT

ಮಂಗಳೂರು, ಎ.3: ಕೆಲವು ದಶಕಗಳ ಹಿಂದೆ ಹಳ್ಳಿಗಳಲ್ಲಿ ಮನೆಯಿಂದ ಹೊರಗೆ ಹೆರಿಗೆ ಮಾಡಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.ಪ್ರತಿಯೊಬ್ಬರೂ ಮನೆ ಹೆರಿಗೆಗೆ ತಡೆ ನೀಡಿ ಗರ್ಭಿಣಿಯರನ್ನು ಆಸ್ಪತ್ರೆಗಳಿಗೆ ದಾಖಲಿಸುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಯರು, ಮಕ್ಕಳ ಆರೋಗ್ಯ ಸಹಾಯಕಿಯರ ನಿರಂತರ ಓಡಾಟ, ವೈದ್ಯಾಧಿಕಾರಿಗಳ ನಿರಂತರ ಪರಿಶ್ರಮದಿಂದ ಗರ್ಭಿಣಿಯರಿಗೆ ನೀಡುತ್ತಿರುವ ಮಾಹಿತಿಗಳು ಪ್ರಯೋಜನಕ್ಕೆ ಬರುತ್ತಿವೆ. ಈ ಮಧ್ಯೆ ಶಿಶು ಮತ್ತು ತಾಯಿ ಮರಣ ಪ್ರಮಾಣ ಕಡಿಮೆಯಾಗುತ್ತಿರುವುದು ಸಂತಸದ ವಿಚಾರವಾಗಿದೆ.

ಸಿವಿಲ್ ರಿಜಿಸ್ಟ್ರೇಶನ್ ಸರ್ವೇ ಪ್ರಕಾರ ದೇಶದಲ್ಲಿ 1 ಲಕ್ಷ ಹೆರಿಗೆಯಲ್ಲಿ 167 ತಾಯಂದಿರು ಮರಣ (ಎಂಎಂಆರ್-ಮೆಟರ್ನಲ್ ಮೊರ್ಟಾಲಿಟಿ ರೇಟ್) ಹೊಂದಿದ್ದು, ರಾಜ್ಯದಲ್ಲಿ 133, ದ.ಕ. ಜಿಲ್ಲೆ 37 ತಾಯಂದಿರು ಮೃತಪಟ್ಟಿದ್ದಾರೆ. ಶಿಶು ಮರಣ ಪ್ರಮಾಣ (ಐಎಂಆರ್-ಇನ್‌ಫೆಂಟ್ ಮೊರ್ಟಾಲಿಟಿ ರೇಟ್)ವು ಭಾರತದಲ್ಲಿ 41, ರಾಜ್ಯದಲ್ಲಿ 24, ದ.ಕ. ಜಿಲ್ಲೆಯಲ್ಲಿ 12.6ರಷ್ಟು ಇದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳಡಿ ಗರ್ಭಿಣಿಯರಿಗೆ ನೀಡು ತ್ತಿರುವ ಪೌಷ್ಟಿಕ ಆಹಾರ, ಔಷಧ, ಜನನಿ ಸುರಕ್ಷಾ ಯೋಜನೆ, ನಗು- ಮಗು ಸಹಿತ ಹಲವು ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಹಲವು ಗರ್ಭಿಣಿಯರ ಹಾಗೂ ಶಿಶುಗಳ ಜೀವ ಉಳಿದಿದೆ. ಸರಕಾರದ ಅನೇಕ ಯೋಜನೆಗಳು ಗರ್ಭಿಣಿಯರನ್ನು ಆಸ್ಪತ್ರೆಯ ಕಡೆಗೆ ಆಕರ್ಷಿಸುತ್ತಿವೆ.

ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ ಸುಮಾರು 31 ಸಾವಿರ ಹೆರಿಗೆಗಳಾಗಿದ್ದು, ಈ ಪೈಕಿ ಶೇ.99ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಾಗಿವೆ.ಹೆಚ್ಚಿನ ಹೆರಿಗೆಗಳು ಆಸ್ಪತ್ರೆಯಲ್ಲಿ ಆಗುತ್ತಿ ರುವುದರಿಂದ ತಾಯಂದಿರ ಹಾಗೂ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆ ಕಾಣಲು ಮುಖ್ಯ ಕಾರಣವಾಗಿದೆ. ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ದೊರೆಯುತ್ತಿರುವುದು ಕೂಡ ಮರಣ ಪ್ರಮಾಣ ಇಳಿಕೆಗೆ ಸಹಾಯಕವಾಗಿದೆ.

ಜಿಲ್ಲೆಯಲ್ಲಿ 2017ರ ಮಾರ್ಚ್‌ನಿಂದ ಇಲ್ಲಿಯವರೆಗೆ 31 ಸಾವಿರ ಹೆರಿಗೆಯಲ್ಲಿ (ಜನನದಿಂದ 1 ವರ್ಷದೊಳಗಿನ) 340 ಶಿಶುಗಳು ಮರಣ ಹೊಂದಿವೆ. ಎರಡೂ ವರೆ ಕೆ.ಜಿ.ಗಿಂತ ಕಡಿಮೆ ತೂಕವುಳ್ಳ 14 ಶಿಶುಗಳು ಮೃತಪಟ್ಟಿವೆ. ಪ್ರಸವಪೂರ್ವ ಹೆರಿಗೆ (280 ದಿನಗಳ ಮೊದಲೇ ಆಗುವ ಹೆರಿಗೆ)ಯಲ್ಲಿ 42 ಶಿಶುಗಳು ಮೃತ ಪಟ್ಟಿವೆ. ಹುಟ್ಟುವಾಗಲೇ ಉಸಿರಾಟದ ತೊಂದರೆಯಿಂದ 16 ಶಿಶು ಗಳು, ಶ್ವಾಸಕೋಶದ ತೊಂದರೆಯಿಂದ 23 ಶಿಶುಗಳು, ಹುಟ್ಟಿದ ಏಳು ದಿನಗಳೊ ಳಗೆ 8 ಶಿಶುಗಳು, ಹೃದಯ ಸಂಬಂಧಿ ತೊಂದರೆ ಗಳಿಂದ 48 ಶಿಶುಗಳು ಸಾವನ್ನಪ್ಪಿವೆ. 189 ಮಕ್ಕಳು ವಿವಿಧ ರೀತಿಯ ಕಾರಣಗಳಿಂದ ಮೃತಪಟ್ಟಿವೆ. ಯಾವುದೇ ಸ್ಕ್ಯಾನ್ ಮೂಲಕ ಈ ತೊಂದರೆಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎನ್ನುತ್ತಾರೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ (ಆರ್‌ಸಿಎಚ್‌ಒ) ಡಾ.ಅಶೋಕ್.

ಶೇ.70ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ನಡೆಯುತ್ತವೆ. ಶಿಶು ಮರಣ ಪ್ರಮಾಣದಲ್ಲಿ ಇಳಿಕೆ ಮಾಡಲು ಹಾಗೂ ಉತ್ತಮ ಚಿಕಿತ್ಸೆ ನೀಡಲು ಇರುವ ಸಾಧ್ಯತೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಪ್ರತಿ ತಿಂಗಳು ಸಭೆಯನ್ನು ಕರೆಯಲಾಗುತ್ತದೆ. ಜಿಲ್ಲೆಯ ಎಲ್ಲ ತಾಲೂಕಿನ ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಕರೆದು ತಾಯಿ ಮತು ಶಿಶುಗಳ ಆರೋಗ್ಯದ ಬಗ್ಗೆ ಚರ್ಚಿಸಲಾಗುತ್ತಿದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಯತ್ನವಾಗಿದೆ.

- ಡಾ.ಅಶೋಕ್, ಆರ್‌ಸಿಎಚ್‌ಒ (ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ)

ಮರಣದ ಕಾರಣ ವಿಶ್ಲೇಷಣೆ

ಪ್ರತೀ ಶಿಶು ಅಥವಾ ತಾಯಿಯ ಮರಣವನ್ನು ವಿಶ್ಲೇಷಣೆ ಮಾಡಲಾಗುತ್ತದೆ. ತಿಂಗಳಿಗೊಮ್ಮೆ ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರಿಂದ ಅಂಗನವಾಡಿ ಮಟ್ಟದಲ್ಲಿ ಸೆಕ್ಟರ್ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ಆರೋಗ್ಯಾಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಶಿಶು ಮರಣ ಹೊಂದಿದ ಕಾರಣವನ್ನು ಚರ್ಚಿಸಲಾಗುತ್ತದೆ. ಶಿಶು ಸಾಯುವುದನ್ನು ತಪ್ಪಿಸಬಹುದಾದ ಸಾಧ್ಯತೆ ಗಳು ಇವೆಯೇ ಅಥವಾ ಇಲ್ಲವೇ ಎನ್ನುವುದನ್ನು ಚರ್ಚಿಸಲಾಗುತ್ತದೆ. ಬಳಿಕ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಹಿರಿಯ ಮ್ಕಕಳ ತಜ್ಞರು, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ವಿಶ್ಲೇಷಣೆ ನಡೆಯುತ್ತದೆ. ಈ ಕುರಿತು ಲೇಡಿಗೋಶನ್, ವೆನ್ಲಾಕ್ ಆಸ್ಪತ್ರೆಗಳಲ್ಲಿ ಸೌಲಭ್ಯಸಹಿತ ಶಿಶುಗಳ ಮರಣ ವಿಶ್ಲೇಷಣೆಯ ಪ್ರತ್ಯೇಕ ಸಮಿತಿಗಳಿವೆ. ಕೊನೆಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚರ್ಚೆಯಾಗಿ, ರಾಜ್ಯ ಮಟ್ಟಕ್ಕೆ ವರದಿಯನ್ನು ಕಳುಹಿಸಿ ಕೊಡಲಾಗುತ್ತದೆ.

ಯಾವುದೇ ತಾಯಿ-ಶಿಶು ಮರಣವನ್ನು ಕೂಲಂಕ ಷವಾಗಿ ವಿಮರ್ಶೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 79 ಆರೋಗ್ಯ ಸಂಸ್ಥೆಗಳು, 12 ನಗರ ಆರೋಗ್ಯ ಸಂಸ್ಥೆಗಳು, 4 ಸಮುದಾಯ ಆರೋಗ್ಯ ಕೇಂದ್ರಗಳಿವೆ. 4 ತಾಲೂಕು ಆಸ್ಪತೆಗಳು, ಲೇಡಿಗೋಶನ್, ವೆನ್ಲಾಕ್ ಆಸ್ಪತ್ರೆಗಳೆಲ್ಲ ಈ ಸಮಿತಿಯಲ್ಲಿ ಕೈಗೊಂಡ ತೀರ್ಮಾನವನ್ನು ಸ್ವೀಕರಿಸುತ್ತವೆ. ಜಿಲ್ಲೆಯಲ್ಲಿ ಶೇ.99.8ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ಆಗುತ್ತವೆ. ಶಿಶುಗಳು ಸಾವಿನ ಪ್ರಮಾಣದಲ್ಲಿ ಶೇ.90ರಿಂದ 95ರಷ್ಟು ಶಿಶುಗಳು ಆಸ್ಪತ್ರೆಗೆ ದಾಖಲಾಗಿ, ಎಲ್ಲ ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಂಡ ಬಳಿಕವೂ ಸಾವನ್ನಪ್ಪಿರುವ ಪ್ರಕರಣಗಳೂ ನಡೆದಿವೆ.

Writer - -ಬಂದೇನವಾಝ್ ಮ್ಯಾಗೇರಿ

contributor

Editor - -ಬಂದೇನವಾಝ್ ಮ್ಯಾಗೇರಿ

contributor

Similar News