ಐಸಿಸಿ ಟೆಸ್ಟ್ ರ್ಯಾಂಕಿಂಗ್: ದ್ವಿತೀಯ ಸ್ಥಾನ ಉಳಿಸಿಕೊಂಡ ಕೊಹ್ಲಿ

Update: 2018-04-04 18:31 GMT

ಹೊಸದಿಲ್ಲಿ, ಎ.4: ಭಾರತದ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾದ ನೂತನ ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.

 ಕೊಹ್ಲಿ ಒಟ್ಟು 912 ಅಂಕ ಗಳಿಸಿದ್ದು, ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್‌ಗಿಂತ 17 ಅಂಕ ಹಿಂದಿದ್ದಾರೆ. ಸ್ಮಿತ್ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪೆಷಲಿಸ್ಟ್ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ 810 ಅಂಕಗಳೊಂದಿಗೆ ಏಳನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಹಾಗೂ ಲೋಕೇಶ್ ರಾಹುಲ್ ಕ್ರಮವಾಗಿ 18ನೇ ಹಾಗೂ 11ನೇ ರ್ಯಾಂಕಿನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆರ್.ಅಶ್ವಿನ್ 803 ಅಂಕದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ ಆಲ್‌ರೌಂಡರ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ರವೀಂದ್ರ ಜಡೇಜ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕದ ಆರಂಭಿಕ ಆಟಗಾರ ಏಡೆನ್ ಮರ್ಕರಮ್ ಆರು ಸ್ಥಾನ ಭಡ್ತಿ ಪಡೆದು 9ನೇ ಸ್ಥಾನಕ್ಕೇರಿದ್ದಾರೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ 152 ಹಾಗೂ 37 ರನ್ ಗಳಿಸಿದ್ದ ಮರ್ಕರಮ್ ದಕ್ಷಿಣ ಆಫ್ರಿಕ 492 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು. ದಕ್ಷಿಣ ಆಫ್ರಿಕ ಬೌಲರ್‌ಗಳು ರ್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 4ನೇ ಟೆಸ್ಟ್‌ನಲ್ಲಿ 51 ರನ್‌ಗೆ ಒಟ್ಟು 9 ವಿಕೆಟ್ ಕಬಳಿಸಿದ್ದ ವೆರ್ನಾನ್ ಫಿಲ್ಯಾಂಡರ್ ಆರು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನವನ್ನು ಪಡೆದರೆ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಕಾಗಿಸೊ ರಬಾಡ ಇನ್ನೂ 3 ಅಂಕ ಗಳಿಸಿ 902 ಅಂಕದೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News