ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಯಾವಾಗ?

Update: 2018-04-05 04:31 GMT

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜನಸಾಮಾನ್ಯರ ಬದುಕು ಸಂಕಷ್ಟದ ಸುಳಿಗೆ ಸಿಲುಕಿದೆ. ಲಂಗುಲಗಾಮಿಲ್ಲದ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಕೋಮು ಹಿಂಸಾಚಾರ ಮುಂತಾದವುಗಳಿಂದ ಜನ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ನೀಡಿದ್ದ ಭರವಸೆ ಈಡೇರಲಿಲ್ಲ. ಇದರೊಂದಿಗೆ ನೋಟು ಅಮಾನ್ಯೀಕರಣದ ಪರಿಣಾಮವಾಗಿ ಜನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು. ಒಂದು ವರ್ಷದಲ್ಲಿ ಎಲ್ಲಾ ಸರಿಹೋಗುತ್ತದೆ ಎಂಬ ಪ್ರಧಾನಮಂತ್ರಿಯವರ ಭರವಸೆ ಹುಸಿಯಾಗಿದೆ. ಜನರ ಬದುಕು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈಗಂತೂ ಬ್ಯಾಂಕ್‌ಗಳಲ್ಲಿ ಜನ ತಮ್ಮ ಖಾತೆಗಳಲ್ಲಿ ಇಟ್ಟಿರುವ ಹಣವನ್ನು ವಾಪಸ್ ಪಡೆಯಲು ಪರದಾಡಬೇಕಾಗಿ ಬಂದಿದೆ. ಬ್ಯಾಂಕ್‌ಗಳು ಎಟಿಎಂಗಳಿಗೆ ಹಣ ಹಾಕುತ್ತಿಲ್ಲ.

ಬ್ಯಾಂಕ್‌ಗೆ ಹೋದರೂ ಹಣ ಸಿಗುತ್ತಿಲ್ಲ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ನಿತ್ಯವೂ ಏರುತ್ತಿರುವುದು ಆತಂಕಕಾರಿಯಾಗಿದೆ. ನಾಗಾಲೋಟದ ಈ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲದಂತಾಗಿದೆ. ಆದರೆ, ಈ ಹಿಂದೆ ನಡೆಯುತ್ತಿದ್ದ ಪ್ರತಿಭಟನೆಗಳು ಈಗ ಕಾಣುತ್ತಿಲ್ಲ. ಜನಸಾಮಾನ್ಯರು ಇದನ್ನು ಅನಿವಾರ್ಯ ಕರ್ಮ ಎಂದು ಒಪ್ಪಿಕೊಂಡಿದ್ದಾರೆ. 2014ರಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 122 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ಲೀ.80 ರೂ. ಡೀಸೆಲ್‌ಗೆ 60 ರೂ. ಇತ್ತು. ಆದರೆ, ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರೆಲ್ 65 ಡಾಲರ್ ಇದೆ. ಆದರೆ, ಪೆಟ್ರೋಲ್ ದರ ಮಾತ್ರ ಈಗಲೂ ಕೆಲ ಮಹಾನಗರಗಳಲ್ಲಿ 80 ರೂ., ಕೆಲವು ಕಡೆ 75 ರೂ. ಹಾಗೂ ಡೀಸೆಲ್ ಬೆಲೆ 70 ರೂ. ಮತ್ತು ಕೆಲ ಮಹಾನಗರಗಳಲ್ಲಿ 75 ರೂ.ಇದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಇಂಧನದ ಮೇಲಿನ ಬೆಲೆಯನ್ನು ಒಂಬತ್ತು ಬಾರಿ ಹೆಚ್ಚಿಸಲಾಗಿದೆ. ಕೇಂದ್ರ ಸರಕಾರ ಅನಗತ್ಯವಾಗಿ ಈ ಹೆಚ್ಚಳ ಮಾಡಿ ಜನರನ್ನು ತೊಂದರೆಗೆ ಗುರಿಪಡಿಸಿದೆ. ನೋಟು ಅಮಾನ್ಯೀಕರಣದಿಂದ ಈಗಾಗಲೇ ತತ್ತರಿಸಿ ಹೋಗಿರುವ ಜನರಿಗೆ ಇಂಧನ ಬೆಲೆ ಏರಿಕೆ ಅಸಹನೀಯವಾದ ಯಾತನೆಯನ್ನು ಉಂಟುಮಾಡಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗೂ ಹಾಗೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೂ ಹೊಂದಾಣಿಕೆ ಇಲ್ಲದಂತಾಗಿದೆ. ಈಗಂತೂ ಬೆಲೆ ಹೆಚ್ಚಿಸಿದ್ದು ಗೊತ್ತಾಗುವುದೇ ಇಲ್ಲ. ಈಗ ಪ್ರತೀ ದಿನ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ. ಯಾರಿಗೂ ಗೊತ್ತಾಗದಂತೆ ಅವರ ಜೇಬಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಅಡುಗೆ ಅನಿಲದ ಬೆಲೆಯೂ ಹೆಚ್ಚಾಗುತ್ತಿದೆ. 2014ರಲ್ಲಿ 430 ರೂ. ಇದ್ದ ಸಿಲಿಂಡರ್ ಬೆಲೆ ಈಗ 860 ರೂ. ಆಗಿದೆ. ಇದು ಬರೀ ಬಳಕೆದಾರರ ಕಿಸೆಗೆ ಭಾರವಾಗುವ ಪ್ರಶ್ನೆ ಮಾತ್ರ ಅಲ್ಲ. ದೇಶದ ಆರ್ಥಿಕತೆಯ ಮೇಲೂ ಇದು ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಡೀಸೆಲ್ ಬೆಲೆ ಹೆಚ್ಚಳದಿಂದ ಸರಕು ಸಾಗಣೆ ವೆಚ್ಚವೂ ಹೆಚ್ಚಾಗುತ್ತಿದೆ. ಇದರಿಂದಾಗಿ ಎಲ್ಲ ಜೀವನಾವಶ್ಯಕ ಪದಾರ್ಥಗಳ ಬೆಲೆಯೂ ಹೆಚ್ಚುತ್ತಿದೆ. ಹಣ ದುಬ್ಬರ ತೀವ್ರಗೊಳ್ಳುತ್ತಿದೆ. ಒಟ್ಟಾರೆ ಗ್ರಾಹಕರ ಪರಿಸ್ಥಿತಿ ಹದಗೆಡುತ್ತಿದೆ. ಸರಕಾರಿ ಒಡೆತನದ ತೈಲ ಮಾರಾಟ ಸಂಸ್ಥೆಗಳು 2017ರ ಜೂನ್ ತಿಂಗಳಿನಿಂದ ಇಂಧನಗಳ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲು ಆರಂಭಿಸಿವೆ.

ಹೀಗೆ ಪರಿಷ್ಕರಿಸಲು ಆರಂಭಿಸಿದ ಬಳಿಕ ಪ್ರತೀ ನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದೆ. ಹಿಂದೆಲ್ಲ ಐದಾರು ತಿಂಗಳಿಗೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತಿತ್ತು. ಆಗ ಐದು ತಿಂಗಳಿಗೆ 2ರಿಂದ ಮೂರು ರೂ. ಹೆಚ್ಚಳ ಮಾಡಿದರೆ ಬಳಕೆದಾರರಿಗೆ ಅದರ ಬಿಸಿ ನೇರವಾಗಿಯೇ ತಟ್ಟುತ್ತಿತ್ತು. ದೇಶವ್ಯಾಪಿ ಪ್ರತಿಭಟನೆಗಳೂ ನಡೆಯುತ್ತಿದ್ದವು. ಆದರೆ, ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತೀ ನಿತ್ಯ ಕಡ್ಡಾಯವಾಗಿ ಒಂದು ಪೈಸೆಯಿಂದ ಐದು ಪೈಸೆಯವರೆಗೆ ಹೆಚ್ಚಿಸಲಾಗುತ್ತಿದೆ. ತಕ್ಷಣಕ್ಕೆ ಗ್ರಾಹಕರ ಮೇಲೆ ಇದರ ಬೆಲೆ ತಟ್ಟುವುದಿಲ್ಲ. ಆದರೆ, ಅರ್ಥ ವ್ಯವಸ್ಥೆಯ ಮೇಲೆ ದೀರ್ಘಾವಧಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮವನ್ನು ಉಂಟುಮಾಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವೇ ಇದಕ್ಕೆ ಕಾರಣ ಎಂದು ತೈಲ ಮಾರಾಟ ಸಂಸ್ಥೆಗಳು ಹಾಗೂ ಸರಕಾರ ನೀಡುತ್ತಿರುವ ಕಾರಣ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇಂಧನದ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ತೆರಿಗೆಯೇ ಕಾರಣವಾಗಿದೆ. ನಮ್ಮ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತುಂಬಾ ದುಬಾರಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿದರೂ ಕೂಡಾ ಅದರ ಲಾಭ ಜನಸಾಮಾನ್ಯರಿಗೆ ಸಿಗುವುದಿಲ್ಲ.

ತೈಲ ಸಂಸ್ಕರಣಾ ಘಟಕದಿಂದ ಪೆಟ್ರೋಲ್ ಹೊರಗೆ ಬರುವಾಗ ಅದರ ಬೆಲೆ ಲೀಟರ್‌ಗೆ ಬರೀ 26 ರೂ. ಇರುತ್ತದೆ. ಆದರೆ, ಸಾಗಾಟ ವೆಚ್ಚ ಸೇರಿ ತೈಲ ಕಂಪೆನಿಗಳಿಗೆ ಬರುವಾಗ 50 ರಿಂದ 70 ರೂ. ವರೆಗೆ ಆಗುತ್ತದೆ. ಮಾರುಕಟ್ಟೆಯಲ್ಲಿ ಲೀಟರ್‌ಗೆ 70 ರೂ.ನಿಂದ 80 ರೂ. ಆಗಿರುತ್ತದೆ. ತೆರಿಗೆ ವ್ಯಾಪ್ತಿಗೆ ಬರುವ ಎಲ್ಲಾ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮಾತ್ರ ಅದರಿಂದ ಹೊರಗಿಡಲಾಗಿದೆ. ಈ ಎರಡೂ ಇಂಧನಗಳಿಗೆ ವ್ಯಾಟ್ ಅನ್ವಯವಾಗುತ್ತದೆ. ಪೆಟ್ರೋಲಿಯಂ ವಸ್ತುಗಳ ಮೇಲಿನ ವ್ಯಾಟ್ ತೆರಿಗೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಹೀಗಾಗಿ ಅವು ಒಂದೊಂದು ರಾಜ್ಯದಲ್ಲಿ ಒಂದೊಂದು ದರದಲ್ಲಿ ಮಾರಾಟವಾಗುತ್ತವೆೆ. 2016ರಿಂದೀಚೆಗೆ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಶೇ.56ರಷ್ಟು ಏರಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಬೊಕ್ಕಸಗಳನ್ನು ತುಂಬಿಸಿಕೊಳ್ಳಲು ಇಂಧನಗಳ ಮೇಲೆ ತೆರಿಗೆ ವಿಧಿಸುತ್ತದೆ. ಇದರಿಂದಾಗಿ ಬಳಕೆದಾರರು ಬವಣೆ ಪಡುವಂತಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲಿಯಂ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕಾಗಿದೆ. ಕರ್ನಾಟಕ ಸರಕಾರ ಎರಡು ಬಾರಿ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೂ ಕೇಂದ್ರ ಸರಕಾರ ಕಡಿಮೆ ಮಾಡಿಲ್ಲ ಎಂದು ರಾಜ್ಯದ ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿರುವುದು ಗಮನಾರ್ಹವಾಗಿದೆ. ಈಗಲಾದರೂ ಕೇಂದ್ರ ಸರಕಾರ ಗ್ರಾಹಕರ ಹಿತರಕ್ಷಣೆಯ ಬಗ್ಗೆ ಗಮನ ಹರಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಇವುಗಳ ಬೆಲೆ ಕಡಿಮೆ ಯಾಗಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳುತ್ತಲೇ ಇದ್ದಾರೆ. ಆದರೆ, ಜಿಎಸ್‌ಟಿ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳುತ್ತಿಲ್ಲ. ಪ್ರಸ್ತುತ ಇರುವ ಕಚ್ಚಾತೈಲದ ಬೆಲೆಯ ಆಧಾರದಲ್ಲಿ ಹೇಳುವುದಾದರೆ, ಸರಕು ಸೇವಾ ತೆರಿಗೆಯನ್ನು ಗರಿಷ್ಠ ಶೇ.28ರಷ್ಟು ವಿಧಿಸಿದರೂ ಪೆಟ್ರೋಲ್ ಬೆಲೆ ಲೀಟರ್‌ಗೆ 44 ರೂ. ಆಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಒಂದಿಷ್ಟು ತೆರಿಗೆ ವಿಧಿಸಿ ಲೀಟರ್‌ಗೆ 50 ರೂ.ನಂತೆ ಪೆಟ್ರೋಲ್ ಮಾರಾಟ ಮಾಡಿದರೆ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ನಮ್ಮ ನೆರೆಹೊರೆಯ ದೇಶಗಳು ಇದೇ ರೀತಿ ತೆರಿಗೆಯನ್ನು ಕಡಿತಗೊಳಿಸಿ ನ್ಯಾಯಬೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜನರಿಗೆ ಒದಗಿಸುತ್ತಿವೆೆ. ನಮ್ಮ ಸರಕಾರವು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News