ಫೇಸ್ ಬುಕ್ ಡಾಟಾ ಸೋರಿಕೆಯಿಂದ 5 ಲಕ್ಷಕ್ಕೂ ಅಧಿಕ ಭಾರತೀಯರು ಬಾಧಿತ

Update: 2018-04-05 11:07 GMT

ಹೊಸದಿಲ್ಲಿ, ಎ.5: ಫೇಸ್ ಬುಕ್ ಬಳಕೆದಾರರ ಡಾಟಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಾಲಿಟಿಕಾಗೆ ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್  ಜಾರಿಗೊಳಿಸಿದ ಒಂದು ವಾರದಲ್ಲೇ ಫೇಸ್ ಬುಕ್ ನಿಂದ ವಿಸ್ತೃತ ಮಾಹಿತಿ ಇರುವ ಉತ್ತರ ಬಂದಿದೆ.

ಈ ಮಾಹಿತಿಯ ಪ್ರಕಾರ  ಭಾರತದಲ್ಲಿ ಒಟ್ಟು 335 ಮಂದಿ ಎಲೆಕ್ಸಾಂಡರ್ ಕೋಗನ್ ಮತ್ತವರ ಕಂಪೆನಿ ಗ್ಲೋಬಲ್ ಸಾಯನ್ಸ್ ರಿಸರ್ಚ್ ಅಭಿವೃದ್ಧಿಪಡಿಸಿದ್ದ ಆ್ಯಪ್ ಅಳವಡಿಸಿದ್ದಾರೆ. ಈ ಸಂಖ್ಯೆ ವಿಶ್ವದಾದ್ಯಂತ ಈ ಆ್ಯಪ್ ಇನ್ ಸ್ಟಾಲ್ ಮಾಡಿದವರ ಪೈಕಿ ಶೇ 0.1ರಷ್ಟಾಗಿದೆ. ಫೇಸ್ ಬುಕ್ ಮುಖಾಂತರ ಈ ಆ್ಯಪ್ ಅನ್ನು 2013ರಿಂದ ಡಿಸೆಂಬರ್ 17, 2015ರ ತನಕ ಇನ್‍ಸ್ಟಾಲ್ ಮಾಡಿದವರ ಬಗ್ಗೆ ಮಾತ್ರ ಮಾಹಿತಿ ತನ್ನ ಬಳಿ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಡಾಟಾ ಸೋರಿಕೆಯಿಂದ ಆ್ಯಪ್  ಅಳವಡಿಸಿದ 335 ಮಂದಿಯ ಹೊರತಾಗಿ ಅವರ ಫೇಸ್ ಬುಕ್ ಸ್ನೇಹಿತರು ಕೂಡ ಬಾಧಿತರಾಗಿರುವ ಸಾಧ್ಯತೆಯಿದ್ದು ಅವರ ಒಟ್ಟು ಸಂಖ್ಯೆ 5,62,120 ಆಗಿದೆ. ಅಂದರೆ ಭಾರತದಲ್ಲಿ ಒಟ್ಟು 5,62,455 ಮಂದಿ ಬಾಧಿತರಾಗಿರುವ ಸಾಧ್ಯತೆಯಿದ್ದು, ಇದು ವಿಶ್ವಾದ್ಯಂತ ಬಾಧಿತರಾದವರ ಪೈಕಿ ಶೇ 0.6ರಷ್ಟಿದೆ ಎಂದು ಫೇಸ್ ಬುಕ್ ತಿಳಿಸಿದೆ.

ಭಾರತದಲ್ಲಿ ಒಟ್ಟು 2.5 ಕೋಟಿ ಫೇಸ್ ಬುಕ್ ಬಳಕೆದಾರರಿದ್ದು, ಅವರಲ್ಲಿ ಶೇ 0.22ರಷ್ಟು ಮಂದಿ ಈ ಮಾಹಿತಿ ಸೋರಿಕೆಯಿಂದ ಬಾಧಿತರಾಗಿದ್ದಾರೆ. ಫೇಸ್ ಬುಕ್ ತನ್ನ ಉತ್ತರದಲ್ಲಿ ಅಲೆಕ್ಸಾಂಡರ್  ಕೋಗನ್ ಅವರ ಕಂಪೆನಿ ಅಭಿವೃದ್ಧಿ ಪಡಿಸಿದ್ದ `ದಿಸ್‍ ಇಸ್‍ ಯುವರ್ ಡಿಜಿಟಲ್‍ ಲೈಫ್' ಆ್ಯಪ್  ತಮ್ಮ ಅನುಮತಿಯಿಲ್ಲದೆ ಮಾಹಿತಿ ಪಡೆದಿತ್ತು ಹಾಗೂ ಇದು ತಮ್ಮ ಸಂಸ್ಥೆಯ ನೀತಿಗಳಿಗೆ ವಿರುದ್ಧವಾಗಿದೆ ಎಂದಿದೆ. ಭಾರತೀಯ ಯೂಸರ್ ಡಾಟಾ  ಬಗ್ಗೆ ತನಿಖೆ ನಡೆಸಿ ಫೇಸ್ ಬುಕ್ ತನ್ನ ಉತ್ತರ ನೀಡಿತ್ತು.

ಅಗತ್ಯ ಬಿದ್ದರೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಅವರನ್ನು ಭಾರತಕ್ಕೆ ಕರೆಸಲಾಗುವುದೆಂದೂ ಈ ಹಿಂದೆ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News