ರಾಜ್ಯಪಾಲರ ಜ್ಞಾನ ಪ್ರಶ್ನಿಸಿದ್ದ ಐಪಿಎಸ್ ಅಧಿಕಾರಿಯ ಕಡ್ಡಾಯ ನಿವೃತ್ತಿಗೊಳಿಸಿದ ರಾಜಸ್ಥಾನ ಸರಕಾರ

Update: 2018-04-05 12:19 GMT

ಜೈಪುರ್,ಎ.5 : ಹಲವಾರು ವಿವಾದಗಳಲ್ಲಿ ಸಿಲುಕಿದ್ದ ರಾಜಸ್ಥಾನದ ಹಿರಿಯ ಐಪಿಎಸ್ ಅಧಿಕಾರಿ ಇಂದು ಕುಮಾರ್ ಭೂಷಣ್ ಅವರನ್ನು ಸರಕಾರ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ. ರಾಜ್ಯಪಾಲರೊಬ್ಬರ ಜ್ಞಾನವನ್ನೂ ಬಹಿರಂಗವಾಗಿ ಪ್ರಶ್ನಿಸಿ ಭೂಷಣ್ ಒಮ್ಮೆ ಸುದ್ದಿಯಾಗಿದ್ದರು.

1989ನೇ ಬ್ಯಾಚಿನ ಐಪಿಎಸ್ ಆಗಿರುವ 52 ವರ್ಷದ ಭೂಷಣ್ ಅವರು ಮೂಲತಃ ಇಂಜಿನಿಯರ್ ಆಗಿದ್ದವರು. ಕಳೆದ ವರ್ಷ ಅವರು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. 2013ರಲ್ಲಿ ಅವರು ತಮ್ಮ ಚಾಲಕ ಮತ್ತು ಗನ್ ಮ್ಯಾನ್ ಇಬ್ಬರನ್ನೂ ನಿಂದಿಸಿ ಹಲ್ಲೆಗೈದಿದ್ದರೆಂಬ ಆರೋಪವನ್ನೂ ಹೊತ್ತಿದ್ದರು.

ಎಡಿಜಿ ರ್ಯಾಂಕಿನ ಐಪಿಎಸ್ ಆಗಿರುವ ಇವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕೆಂದು ರಾಜಸ್ಥಾನ ಸರಕಾರ ಕಳೆದ ನವೆಂಬರ್ ತಿಂಗಳಿನಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಪ್ರಸ್ತಾಪ ಅನುಮೋದನೆಗೊಂಡಿದೆ ಎಂದು ರಾಜಸ್ಥಾನದ  ಸಿಬ್ಬಂದಿ ಇಲಾಖೆಯ ಜಂಟಿ ಕಾರ್ಯದರ್ಶಿ ಅರವಿಂದ್ ಕುಮಾರ್ ಪೊಸ್ವಾಲ್ ತಿಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದ್ದು ಆಲ್ ಇಂಡಿಯಾ ಸರ್ವಿಸಸ್ ನಿಯಮಗಳನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.ಆದರೆ ತಮಗೆ ಈ ಬಗ್ಗೆ ತಿಳಿದಿಲ್ಲ ಎಂದು ಭೂಷನ್ ತಿಳಿಸಿದ್ದಾರೆ.

ಬಿಟೆಕ್ ಪದವೀಧರರಾಗಿರುವ ಭೂಷಣ್ ಬಿಹಾರ ಮೂಲದವರಾಗಿದ್ದು ಇಲ್ಲಿಯ ತನಕ ಸಿಐಡಿ ಎಸ್ಪಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ವಿಭಾಗದ ಎಸ್‍ಪಿ,  ಡಿಐಜಿ (ಸಂಚಾರ), ಐಜಿ(ನಿಯಮ), ಐಜಿ (ಆಡಳಿತ), ಎಡಿಜಿ(ನಿಯಮಗಳು) ಹಾಗೂ ಎಡಿಜಿ (ಬಂದೀಖಾನೆ) ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ತೆಲಂಗಾಣ ರಾಜ್ಯಪಾಲ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಇಎಸ್‍ಎಲ್ ನರಸಿಂಹನ್ ಅವರಿಗಿರುವ ಜ್ಞಾನವನ್ನು ತರಬೇತಿ ಶಿಬಿರವೊಂದರ ವೇಳೆ ಬಹಿರಂಗವಾಗಿ ಪ್ರಶ್ನಿಸಿದ್ದ ಅವರನ್ನು ಸೆಪ್ಟೆಂಬರ್ 2016ರಲ್ಲಿ ಹೈದರಾಬಾದ್ ನ ನ್ಯಾಷನಲ್ ಪೊಲೀಸ್ ಅಕಾಡೆಮಿಯಿಂದ ಜೈಪುರಕ್ಕೆ ವಾಪಸ್ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News