110 ಯುದ್ಧವಿಮಾನಗಳ ಖರೀದಿಗಾಗಿ ಜಾಗತಿಕ ಟೆಂಡರ್‌ಗಳಿಗೆ ಆಹ್ವಾನ

Update: 2018-04-06 15:34 GMT

ಹೊಸದಿಲ್ಲಿ,ಎ.6: ಕಳೆದ 11 ವರ್ಷಗಳಿಂದಲೂ ವಿದೇಶಿ ಯುದ್ಧವಿಮಾನಗಳಿಗಾಗಿ ಅನ್ವೇಷಿಸುತ್ತಿರುವ ಭಾರತವು ಕೊನೆಗೂ ದೇಶದಲ್ಲಿಯೇ ಯುದ್ಧವಿಮಾನಗಳ ತಯಾರಿಕೆಗಾಗಿ ಜಾಗತಿಕ ಟೆಂಡರ್‌ಗಳನ್ನು ಶುಕ್ರವಾರ ಆಹ್ವಾನಿಸಿದೆ.

ರಕ್ಷಣಾ ಸಚಿವಾಲಯವು ತಮ್ಮ ಪ್ರಾಥಮಿಕ ಪ್ರಸ್ತಾಪಗಳನ್ನು ಕಳುಹಿಸುವಂತೆ ಜಾಗತಿಕ ವಿಮಾನ ತಯಾರಿಕೆ ಕಂಪನಿಗಳನ್ನು ಆಹ್ವಾನಿಸಿದೆ. ಇದು ಮಾಹಿತಿಗಾಗಿ ಕೋರಿಕೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆಯಾಗಿದೆ.

2007ರಲ್ಲಿ 126 ಮಧ್ಯಮ, ಬಹುಕಾರ್ಯ ಯುದ್ಧ ವಿಮಾನ(ಎಂಎಂಆರ್‌ಸಿಎ)ಗಳ ಖರೀದಿಗಾಗಿ ಟೆಂಡರ್‌ಗ ಳನ್ನು ಕರೆಯಲಾಗಿತ್ತು ಮತ್ತು ತೀವ್ರ ಪರಿಶೀಲನೆಯ ಬಳಿಕ 2012ರಲ್ಲಿ ಯುರೋಫೈಟರ್ ಟೈಫೂನ್ ಮತ್ತು ಫ್ರೆಂಚ್ ಕಂಪನಿ ಡಸಾಲ್ಟ್‌ನ ರಾಫೇಲ್ ಯುದ್ಧ ವಿಮಾನಗಳನ್ನು ಆಯ್ಕೆ ಮಾಡಲಾಗಿತ್ತು. ಬೆಲೆಗಳ ಕುರಿತು ಮಾತುಕತೆಗಳು ನಡೆದಿದ್ದವಾದರೂ ಒಪ್ಪಂದವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ 2015ರಲ್ಲಿ ರದ್ದುಗೊಳಿಸಲಾಗಿತ್ತು.

2015,ಎಪ್ರಿಲ್‌ನಲ್ಲಿ ಸರಕಾರವು 36 ಸಿದ್ಧ ರಾಫೇಲ್ ಯುದ್ಧವಿಮಾನಗಳನ್ನು ಖರೀದಿಸುವುದಾಗಿ ಪ್ರಕಟಿಸಿತ್ತು.

ಭದ್ರತೆ ಕುರಿತ ಸಂಪುಟ ಸಮಿತಿಯು ಕಡ್ಡಾಯಗೊಳಿಸಿ ರುವಂತೆ ಭಾರತೀಯ ವಾಯುಪಡೆಯಲ್ಲಿ 42 ಸ್ಕ್ವಾಡ್ರನ್‌ಗಳ ಅಗತ್ಯವಿದೆಯಾದರೂ ಅದು ಕೇವಲ 31 ಸ್ಕ್ವಾಡ್ರನ್‌ಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಸರಕಾರವೀಗ ಜಾಗತಿಕ ಟೆಂಡರ್‌ಗಳನ್ನು ಕರೆಯಲು ಮುಂದಾಗಿದೆ. ಪ್ರತಿ ಸ್ಕ್ವಾಡ್ರನ್‌ನಲ್ಲಿ 16ರಿಂದ 18 ಯುದ್ಧವಿಮಾನಗಳಿರುತ್ತವೆ.

ರಕ್ಷಣಾ ಸಚಿವಾಲಯ ಮತ್ತು ಭಾರತೀಯ ವಾಯುಪಡೆ ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿವೆ. ಮಾಹಿತಿ ಕೋರಿಕೆಯಲ್ಲಿ ಯುದ್ಧವಿಮಾನ ಎಂದಷ್ಟೇ ಉಲ್ಲೇಖಿಸಲಾಗಿದ್ದು, ಸಿಂಗಲ್ ಅಥವಾ ಡಬಲ್ ಇಂಜಿನ್‌ಗಳೇ ಎನ್ನುವುದನ್ನು ನಿರ್ದಿಷ್ಟಪಡಿಸಲಾಗಿಲ್ಲ.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯ ಸಿಂಗಲ್ ಇಂಜಿನ್ ವಿಮಾನಗಳ ಖರೀದಿಗಾಗಿ ಎರಡು ಜಾಗತಿಕ ವಿಮಾನ ತಯಾರಿಕೆ ಕಂಪನಿಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದವು. ಆದರೆ ಈಗ ಸಿಂಗಲ್ ಇಂಜಿನ್ ಅಥವಾ ಡಬಲ್ ಇಂಜಿನ್ ಪ್ರಸ್ತಾಪಗಳನ್ನು ಕೈಬಿಟ್ಟು ಹೆಚ್ಚುವರಿ ಯುದ್ಧವಿಮಾನಗಳನ್ನು ಹೊಂದುವ ವಿಷಯದ ಮೇಲಷ್ಟೇ ಗಮನವನ್ನು ಕೇಂದ್ರೀಕರಿಸಲಾಗಿದೆ.

 ಭಾರತೀಯ ವಾಯುಪಡೆಗಾಗಿ ಸಾರ್ವಜನಿಕ ಕೇತ್ರದ ಉದ್ಯಮ ಎಚ್‌ಎಎಲ್ 123 ತೇಜಸ್ ಯುದ್ಧವಿಮಾನಗಳನ್ನು ತಯಾರಿಸುತ್ತಿದೆಯಾದರೂ, ಅಷ್ಟೂ ಬೇಡಿಕೆಯನ್ನು ಪೂರೈಸಲು ಅದಕ್ಕೆ ಒಂದು ದಶಕಕ್ಕ್ಕೂ ಹೆಚ್ಚಿನ ಸಮಯ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News