ಹಿಂದೂಗಳ ವೈಯಕ್ತಿಕ ಪದ್ಧತಿಗಳ ಪರಿಶೀಲನೆಗೆ ಕಾನೂನು ಆಯೋಗ ಸಿದ್ಧತೆ

Update: 2018-04-06 18:00 GMT

ಹೊಸದಿಲ್ಲಿ, ಎ. 6: ಹಿಂದೂಗಳ ಕೆಲವು ವೈಯಕ್ತಿಕ ಪದ್ಧತಿಗಳು ಹಾಗೂ ಅವರ ಮೇಲೆ ಏಕರೂಪದ ನಾಗರಿಕ ಸಂಹಿತೆಯಿಂದ ಆಗುವ ಪರಿಣಾಮಗಳ ಬಗ್ಗೆ ಪರಿಶೀಲಿಸಲು ಕಾನೂನು ಆಯೋಗ ಎಲ್ಲ ಸಿದ್ಧತೆ ನಡೆಸುತ್ತಿದೆ. ಈ ನಿರ್ಧಾರ ಕೆಲವು ಹಿಂದೂ ಗುಂಪುಗಳಲ್ಲಿ ಆತಂಕ ಮೂಡಿಸುವ ಸಾಧ್ಯತೆ ಇದೆ.

ನಿಕಾಹ್ ಹಲಾಲ್ ಹಾಗೂ ಬಹುಪತ್ನಿತ್ವದಂತಹ  ಇಸ್ಲಾಮಿಕ್ ಪದ್ಧತಿಗಳು ನ್ಯಾಯಾಲಯದಲ್ಲಿರುವುದರಿಂದ ಹಾಗೂ ವಿಚಾರಣಾಧೀನವಾಗಿರುವುದರಿಂದ ಅದನ್ನು ತನ್ನ ಕರಡು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿರಿಸಲಾಗುತ್ತದೆ ಎಂದು ಕಾನೂನು ಆಯೋಗ ಇತ್ತೀಚೆಗೆ ಘೋಷಿಸಿದೆ. ಆದಾಗ್ಯೂ, ಕೆಲವು ಹಿಂದೂ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿರುವ ಬಹುಪತ್ನಿತ್ವ ಹಾಗೂ ಬಹುಪತಿತ್ವದಂತಹ ‘ಅಸಮಾನ ಪದ್ಧತಿ’ಗಳನ್ನು ಈ ವರದಿ ಪರಿಶೀಲಿಸಲಿದೆ ಎಂದು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಸೂಚಿಸಿದ್ದಾರೆ.

‘‘ಈ ವರದಿಯ ಮುಖ್ಯ ಉದ್ದೇಶ ಎಲ್ಲ ಧರ್ಮಗಳಲ್ಲಿ ಲಿಂಗ ಸಮಾನತೆ ಖಾತರಿಪಡಿಸುವುದು ಹಾಗೂ ಕುಟುಂಬ ಕಾನೂನಿನಲ್ಲಿ ತಿದ್ದುಪಡಿ ತರುವುದು’’ ಎಂದು ಚೌಹಾಣ್ ಹೇಳಿದ್ದಾರೆ.

ಏಕರೂಪದ ನಾಗರಿಕ ಸಂಹಿತೆ ಕುರಿತು ಚರ್ಚಿಸುವಾಗ ಅಲ್ಪಸಂಖ್ಯಾತರ ಮೇಲೆ ಪರಿಣಾಮ ಬೀರುವುದನ್ನು ಪ್ರತಿಬಿಂಬಿಸಲಾಗುತ್ತಿದೆ. ಆದರೆ, ಈ ವಿಷಯದ ಕುರಿತು ಸಾರ್ವಜನಿಕರ ಪ್ರತಿಕ್ರಿಯೆ ಕೋರಿದಾಗ ಕಾನೂನು ಆಯೋಗ ‘ಮೈತ್ರಿ ಕರಾರ್’ನಂತಹ ಹಿಂದೂ ಪದ್ಧತಿಗಳನ್ನು ಕೂಡ ಪಟ್ಟಿ ಮಾಡಿದೆ ಎಂದು ಚೌಹಾಣ್ ಹೇಳಿದ್ದಾರೆ. ‘ಮೈತ್ರಿ ಕರಾರ್’ ಅನ್ನು ಗುತ್ತಿಗೆ ಗೆಳೆತನ ಎಂದು ಕೂಡ ಹೇಳುತ್ತಾರೆ. ಈ ರೀತಿಯ ಗುತ್ತಿಗೆ ಗೆಳೆತನದ ವ್ಯವಸ್ಥೆ ಗುಜರಾತ್‌ನಲ್ಲಿ ಇದೆ. ಒಬ್ಬರು ಅಥವಾ ಇಬ್ಬರು ವಿವಾಹವಾಗಿದ್ದರೂ ಪುರುಷ ಹಾಗೂ ಮಹಿಳೆ ಪರಸ್ಪರ ನ್ಯಾಯಬದ್ಧ ಸಂಬಂಧ ಇರಿಸುವುದೇ ‘ಮೈತ್ರಿ ಕರಾರ್’.

ಏಕರೂಪದ ನಾಗರಿಕ ಸಂಹಿತ ಹಿಂದೂಗಳ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂದು ಜನರು ಚಿಂತಿಸುವುದಿಲ್ಲ ಎಂದು ಚೌಹಾಣ್ ಹೇಳಿದ್ದಾರೆ. ಏಕರೂಪದ ನಾಗರಿಕ ಸಂಹಿತೆ ತ್ರಿವಳಿ ತಲಾಕ್ ಹಾಗೂ ನಿಕಾಹ್ ಹಲಾಲ್ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಜನರು ಭಾವಿಸುತ್ತಾರೆ ಎಂದು ಆಯೋಗದ ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News