ಐಪಿಎಲ್ 2018: ಚೆನ್ನೈಗೆ ‘ಸೂಪರ್’ ಜಯ

Update: 2018-04-07 18:30 GMT

ಮುಂಬೈ, ಎ.7: ಆಲ್‌ರೌಂಡರ್ ಡ್ವೆಯ್ನೆ ಬ್ರಾವೊ ಅರ್ಧಶತಕ(68,30 ಎಸೆತ)ಹಾಗೂ ಕೇದಾರ್ ಜಾಧವ್ ಸಂದಭೋಚಿತ ಬ್ಯಾಟಿಂಗ್ ನೆರವಿನಿಂದ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 1 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 11ನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮಯಾಂಕ್ ಮರ್ಕಂಡೆ(3-23) ಹಾಗೂ ಹಾರ್ದಿಕ್ ಪಾಂಡ್ಯ (3-24) ಚೆನ್ನೈಗೆ ಆರಂಭದಲ್ಲಿ ಕಡಿವಾಣ ಹಾಕಿದರು. ತಂಡ 118 ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ಬ್ರಾವೊ 30 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದ್ದಲ್ಲದೆ, 9ನೇ ವಿಕೆಟ್‌ಗೆ ತಾಹಿರ್‌ರೊಂದಿಗೆ 41 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ, ತಂಡದ ಗೆಲುವಿಗೆ 1 ಓವರ್‌ನಲ್ಲಿ 7 ರನ್ ಅಗತ್ಯವಿದ್ದಾಗ ಬ್ರಾವೊ ವಿಕೆಟ್ ಒಪ್ಪಿಸಿದರು. ಆಗ ಕೊನೆಯ ಓವರ್‌ನಲ್ಲಿ ತಲಾ 1 ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಕೇದಾರ್ ಜಾಧವ್(ಔಟಾಗದೆ 24) ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಚೆನ್ನೈಗೆ ರೋಚಕ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಚೆನ್ನೈ 83 ರನ್‌ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು.

 ಚೆನ್ನೈ ಇನಿಂಗ್ಸ್ ಆರಂಭಿಸಿದ ಶೇನ್ ವ್ಯಾಟ್ಸನ್(16) ಹಾಗೂ ಅಂಬಟಿ ರಾಯುಡು(22)ಉತ್ತಮ ಆರಂಭ ನೀಡಲು ವಿಫಲರಾದರು. ಸುರೇಶ್ ರೈನಾ(4),ನಾಯಕ ಎಂಎಸ್ ಧೋನಿ(5), ರವೀಂದ್ರ ಜಡೇಜ(12) ಹಾಗೂ ಹರ್ಭಜನ್ ಸಿಂಗ್(8) ವಿಫಲರಾದರು.

ಇದಕ್ಕೆ ಮೊದಲು ಟಾಸ್ ಜಯಿಸಿದ ಚೆನ್ನೈ ನಾಯಕ ಎಂ.ಎಸ್. ಧೋನಿ ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. 3ನೇ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಎವಿನ್ ಲೂವಿಸ್(0) ವಿಕೆಟ್ ಕಳೆದುಕೊಂಡ ಮುಂಬೈ ಕಳಪೆ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮ(15) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಆಗ 3ನೇ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿದ ಇಶನ್ ಕಿಶನ್(40) ಹಾಗೂ ಸೂರ್ಯ ಕುಮಾರ್ ಯಾದವ್(43) ತಂಡದ ಸ್ಕೋರನ್ನು 100ರ ಗಡಿ ತಲುಪಿಸಿದರು. ಕಿಶನ್ ಹಾಗೂ ಯಾದವ್ ಔಟಾದ ಬಳಿಕ ಪಾಂಡ್ಯ ಸಹೋದರರಾದ ಹಾರ್ದಿಕ್(ಅಜೇಯ 22) ಹಾಗೂ ಕೃನಾಲ್(ಅಜೇಯ 41) 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 52 ರನ್ ಸೇರಿಸಿ ಚೆನ್ನೈ ಗೆಲುವಿಗೆ ಸ್ಪರ್ಧಾತ್ಮಕ ಮೊತ್ತ ನೀಡಿದರು.

ಚೆನ್ನೈ ಪರ ಆಲ್‌ರೌಂಡರ್ ಶೇನ್ ವ್ಯಾಟ್ಸನ್(2-29) ಯಶಸ್ವಿ ಬೌಲರ್ ಎನಿಸಿಕೊಂಡರು. ಚಹಾರ್(1-14) ಹಾಗೂ ತಾಹಿರ್(1-23) ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News