ಶಿವಸೇನೆ ನಾಯಕರ ಹತ್ಯೆ : ಎನ್‌ಸಿಪಿ ಶಾಸಕ ಸಹಿತ ನಾಲ್ವರ ಬಂಧನ

Update: 2018-04-08 14:45 GMT

ಪುಣೆ, ಎ. 8: ಶನಿವಾರ ಸಂಜೆ ಶಿವಸೇನೆಯ ಇಬ್ಬರು ಸ್ಥಳೀಯ ನಾಯಕರ ಹತ್ಯೆ ಬಳಿಕ ರವಿವಾರ ಬೆಳಗ್ಗೆ ಪೊಲೀಸರು ಎನ್‌ಸಿಪಿ ಶಾಸಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ ಹಾಗೂ 31 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂದೀಪ್ ಗುಂಜಾಲ್, ಬಾಲಾಸಾಹೇಬ್ ಕೋಟ್ಕರ್ ಹಾಗೂ ಭಾನುದಾಸ್ ಕೋಟ್ಕರ್‌ರೊಂದಿಗೆ ಎನ್‌ಸಿಪಿ ಶಾಸಕ ಸಂಗ್ರಾಮ್ ಜಗತಾಪ್‌ರನ್ನು ಬಂಧಿಸಲಾಗಿದೆ.

ಗುಂಜಾಲ್ ಪ್ರಮುಖ ಪ್ರಕರಣದ ಆರೋಪಿ. ಜಗತಾಪ್ ಅವರ ಬಂಧನದಿಂದ ಆಕ್ರೋಶಿತರಾದ ಎನ್‌ಸಿಪಿ ಕಾರ್ಯಕರ್ತರು ಪೊಲೀಸ್ ಅಧೀಕ್ಷಕರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು. ಅನಂತರ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರೀ ಪೊಲೀಸರನ್ನು ನಿಯೋಜಿಸಲಾಯಿತು. ಆದರೆ, ನಗರ ಉದ್ವಿಗ್ನವಾಗಿದೆ. ‘‘ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಆತಂಕದಲ್ಲಿದೆ. ಹಲವು ವಿವರಗಳನ್ನು ನಾನು ನಿಮಗೆ ಬಹಿರಂಗಪಡಿಸಲು ಸಾಧ್ಯವಿಲ್ಲ’’ ಎಂದು ಇಬ್ಬರ ಕೊಲೆಯ ತನಿಖೆ ನಡೆಸುತ್ತಿರುವ ಕೊಟ್ವಾಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ಪರ್ಮಾರ್ ಹೇಳಿದ್ದಾರೆ. ರವಿವಾರ ಸಂಜೆ ಗುಂಡು ಹಾರಿಸಿ ಹಾಗೂ ಹರಿತವಾದ ಆಯುಧದಿಂದ ದಾಳಿ ನಡೆಸಿ ಶಿವಸೇನೆಯ ಕೇಡ್ಗಾಂವ್‌ನ ಉಪ ಮುಖ್ಯಸ್ಥ ಸಂಜಯ್ ಕೋಟ್ಕರ್ ಹಾಗೂ ಇನ್ನೋರ್ವ ನಾಯಕ ವಸಂತ್ ತುಬೆ ಅವರನ್ನು ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News