×
Ad

ಆಸ್ಪತ್ರೆಗಳ ಕಾಯ್ದೆಯನ್ನು ರೂಪಿಸಲು ರಾಜ್ಯಗಳಿಗೆ ಕೇಂದ್ರದ ಆಗ್ರಹ

Update: 2018-04-08 20:18 IST

ಹೊಸದಿಲ್ಲಿ,ಎ.8: ಭಾರತದಲ್ಲಿ ಆರೋಗ್ಯ ಸೇವೆಗಳನ್ನು ಕ್ರಮಬದ್ಧಗೊಳಿಸಲು ಉದ್ದೇಶಿಸಿರುವ ಆಸ್ಪತ್ರೆಗಳ ಕಾಯ್ದೆಯನ್ನು ರೂಪಿಸುವಂತೆ ರಾಜ್ಯಗಳನ್ನು ಆಗ್ರಹಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, 10 ಕೋಟಿ ಬಡಜನರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುವ ಉಚಿತ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸುವಲ್ಲಿ ರಾಜ್ಯಗಳು ಅತ್ಯಂತ ಮುಖ್ಯ ಸಹಭಾಗಿಗಳಾಗಿವೆ ಎಂದು ಹೇಳಿದೆ.

ಜುಲೈ ನಂತರ ಯಾವುದೇ ಸಮಯದಲ್ಲಿ ಜಾರಿಗೊಳ್ಳುವ ನಿರೀಕ್ಷೆಯಿರುವ ಆಯುಷ್ಮಾನ್ ಭಾರತ-ರಾಷ್ಟ್ರೀಯ ಆರೋಗ್ಯ ರಕ್ಷಣೆ ಅಭಿಯಾನ (ಎಬಿ-ಎನ್‌ಎಚ್‌ಪಿಎಂ)ವು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ 10 ಕೋಟಿ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆಯನ್ನು ಒದಗಿಸಲಿದೆ.

ಸೂಕ್ತ ವ್ಯವಸ್ಥೆಗಳು ಪೂರ್ಣಗೊಳ್ಳುವಂತೆ ಮತ್ತು ಫಲಾನುಭವಿಗಳಿಗೆ ಗರಿಷ್ಠ ಲಾಭಗಳು ದೊರೆಯುವಂತೆ ನೋಡಿಕೊಳ್ಳಲು ಎಬಿ-ಎನ್‌ಎಚ್‌ಪಿಎಂ ಆರಂಭಗೊಳ್ಳುವ ಮುನ್ನ ರಾಜ್ಯಗಳು ಈ ಕಾಯ್ದೆಯನ್ನು ಹೊಂದಿರಬೇಕೆಂದು ಆರೋಗ್ಯ ಸಚಿವಾಲಯವು ಬಯಸಿರುವ ಹಿನ್ನೆಲೆಯಲ್ಲಿ ಅದು ಈ ನೆನಪಿನೋಲೆ ಯನ್ನು ಎಲ್ಲ ರಾಜ್ಯಗಳಿಗೆ ಕಳುಹಿಸಿದೆ.

ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿಯ ಎಲ್ಲ ವಿಧಗಳ ಆಸ್ಪತ್ರೆಗಳಿಗೆ ಅನ್ವಯವಾಗುವ ಈ ಕಾಯ್ದೆಯನ್ನು ರಾಜ್ಯಗಳು ಹೊಂದಿರಲೇಬೇಕು ಎಂದು ಆರೋಗ್ಯ ಕಾರ್ಯದರ್ಶಿಗಳು ಪತ್ರದಲ್ಲಿ ತಿಳಿಸಿದ್ದಾರೆ.

 ರಾಜ್ಯಗಳು ಯೋಜನೆಯ ವೆಚ್ಚದಲ್ಲಿ ಶೇ.40ರಷ್ಟು ಮೊತ್ತವನ್ನು ಭರಿಸಿಕೊಂಡು ಅದನ್ನು ಜಾರಿಗೊಳಿಸಲಿವೆ, ಹೀಗಾಗಿ ರಾಜ್ಯ ಸರಕಾರಗಳು ಈ ಯೋಜನೆಯ ಅತ್ಯಂತ ಮುಖ್ಯ ಪಾಲುದಾರರಾಗಿವೆ. ಆದ್ದರಿಂದ ಸೂಕ್ತ ಉಸ್ತುವಾರಿ ಮತ್ತು ನಿಗಾ ವ್ಯವಸ್ಥೆಯು ಅಸ್ತಿತ್ವದಲ್ಲಿರುವುದೂ ಅಗತ್ಯವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಅರುಣಾಚಲ ಪ್ರದೇಶ, ರಾಜಸ್ಥಾನ, ಅಸ್ಸಾಂ, ಜಾರ್ಖಂಡ್ ಸೇರಿದಂತೆ ಐದು ರಾಜ್ಯಗಳು ಮತ್ತು ದಿಲ್ಲಿ ಎನ್‌ಸಿಟಿಯನ್ನು ಹೊರತುಪಡಿಸಿ ಇತರ ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಕಾಯ್ದೆಯನ್ನು ಅಂಗೀಕರಿಸಿವೆ ಮತ್ತ್ತು ಜಾರಿಗೊಳಿಸಿವೆ. ಸಿಕ್ಕಿಂ, ಬಿಹಾರ, ಮಿರೆರಾಂ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳು ಕಾಯ್ದೆಯನ್ನು ಅಂಗೀಕರಿಸಿವೆ, ಆದರೆ ಇನ್ನೂ ಅದನ್ನು ಜಾರಿಗೊಳಿಸಿಲ್ಲ. ಕೆಲವು ರಾಜ್ಯಗಳು ಮಾಡಿರುವಂತೆ ರಾಜ್ಯ ಸರಕಾರಗಳು ಆಯಾ ರಾಜ್ಯಕ್ಕೆ ನಿರ್ದಿಷ್ಟವಾದ ಶಾಸನಗಳನ್ನು ತರುವುದನ್ನು ಪರಿಗಣಿಸಬಹುದಾಗಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News