ನವ ವಿವಾಹಿತ ಯೋಧರ ಒಂಟಿತನ ನೀಗಿಸಲು ಬಿಎಸ್‌ಎಫ್ ಹೊಸ ತಂತ್ರ

Update: 2018-04-08 14:57 GMT

ಹೊಸದಿಲ್ಲಿ,ಎ.8: ಬಿಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ತಮ್ಮ 30 ವರ್ಷಗಳ ಸೇವಾವಧಿಯಲ್ಲಿ ಸರಾಸರಿ ಐದು ವರ್ಷಗಳಷ್ಟು ಕಾಲ ಮಾತ್ರ ಕುಟುಂಬದೊಂದಿಗೆ ಕಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ನವ ವಿವಾಹಿತ ದಂಪತಿಗಳಿಗಾಗಿ ದೇಶಾದ್ಯಂತ 190ಕ್ಕೂ ಅಧಿಕ ‘ಜವಾನ್ ಗೆಸ್ಟ್ ಹೌಸ್’ಗಳನ್ನು ಸ್ಥಾಪಿಸಲು ಬಿಎಸ್‌ಎಫ್ ನಿರ್ಧರಿಸಿದೆ.

ದೇಶದ ಪಶ್ಚಿಮ ಮತ್ತು ಪೂರ್ವ ಗಡಿಗಳಲ್ಲಿಯ ಎಂಟು ಮುಂಚೂಣಿ ನೆಲೆಗಳಲ್ಲಿ ಹೊಸದಾಗಿ ಅಥವಾ ಈಗಿರುವ ವಸತಿ ಸೌಲಭ್ಯಗಳನ್ನೇ ಬಳಸಿಕೊಂಡು 2,800ಕ್ಕೂ ಅಧಿಕ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು. ಪಡೆಯ 186 ತಾಣಗಳಲ್ಲಿ ಮತ್ತು ಇತರ ಕೆಲವು ಕೇಂದ್ರಗಳಲ್ಲಿ ತಲಾ 15 ಸ್ಟುಡಿಯೋ ಅಪಾರ್ಟ್‌ಮೆಂಟ್ ನಂತಹ ಸೌಲಭ್ಯಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚಿಗೆ ಅನುಮತಿಯನ್ನು ನೀಡಿದೆ ಎಂದು ಬಿಎಸ್‌ಎಫ್‌ನ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ಅವರು ತಿಳಿಸಿದರು.

ಯೋಧರು ತಮ್ಮ ಕುಟುಂಬಗಳೊಂದಿಗೆ ಹೆಚ್ಚುಕಾಲವನ್ನು ಕಳೆಯುವಂತಾಗಲು ದೇಶಾದ್ಯಂತ 192 ಕಡೆಗಳಲ್ಲಿ ಇಂತಹ ಸೌಲಭ್ಯಗಳನ್ನು ನಾವು ನಿರ್ಮಿಸುತ್ತಿದ್ದೇವೆ ಎಂದ ಅವರು ಕುಟುಂಬದಿಂದ ದೂರವಾಗಿ ಒಂಟಿಯಾಗಿ ಬದುಕುವುದು ನವವಿವಾಹಿತರ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ. ಆದ್ದರಿಂದ ಈ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದರು.

ಅಧಿಕಾರಿಗಳು ಮತ್ತು ಕಿರಿಯ ಅಧಿಕಾರಿಗಳಿಗೆ ಗೆಸ್ಟ್‌ಹೌಸ್‌ಗಳಿವೆಯಾದರೂ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್ ದರ್ಜೆಯ ಯೋಧರಿಗೆ ಈ ಸೌಲಭ್ಯವಿಲ್ಲ. ಹೀಗಾಗಿ ನೂತನ ಗೆಸ್ಟ್‌ಹೌಸ್‌ಗಳಲ್ಲಿ ತಮ್ಮ ಕುಟುಂಬದೊಂದಿಗೆ ನಿರ್ದಿಷ್ಟ ಅವಧಿಗೆ ವಾಸವಾಗಿರಲು ಅವರಿಗೆ ಅವಕಾಶ ನೀಡಲಾಗುವುದು. ಮಲಗುವ ಕೋಣೆ, ಅಡುಗೆ ಕೋಣೆ,ಟಿವಿ ಸೇರಿದಂತೆ ಎಲ್ಲ ರೀತಿಯಿಂದಲೂ ಇವು ಸುಸಜ್ಜಿತವಾಗಿರುತ್ತವೆ ಎಂದರು.

ಗಡಿಯ ಮುಂಚೂಣಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಹೊರಗೆ ಬಾಡಿಗೆಯ ಮನೆಗಳಲ್ಲಿ ಸಹ ತಮ್ಮ ಕುಟುಂಬಗಳೊಂದಿಗೆ ವಾಸವಿರಲು ಅನುಮತಿ ನೀಡಲಾಗುವುದು. ಆದರೆ ಇದಕ್ಕೂ ಮುನ್ನ ಆ ಪ್ರದೇಶಗಳಲ್ಲಿ ಅವರ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲವೆನ್ನುವುದನ್ನು ಖಚಿತ ಪಡಿಸಿಕೊಳ್ಳಲಾಗುವುದು ಎಂದೂ ಶರ್ಮಾ ತಿಳಿಸಿದರು.

1965ರಲ್ಲಿ ಸ್ಥಾಪನೆಗೊಂಡ ಬಿಎಸ್‌ಎಫ್ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಳೊಂದಿಗಿನ ಗಡಿಗಳ ರಕ್ಷಣೆಯ ಹೊಣೆ ಹೊತ್ತಿದ್ದು, ಸುಮಾರು 2.5 ಲಕ್ಷ ಸಿಬ್ಬಂದಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News