ರೊಹಿಂಗ್ಯ ಮುಸ್ಲಿಮರ ವಾಪಸಾತಿಗೆ ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ

Update: 2018-04-08 17:19 GMT

ಯಾಂಗೊನ್,ಎ.8: ಭೀಕರ ಹಿಂಸಾಚಾರಕ್ಕೆ ಬೆದರಿಕೆ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸಾವಿರಾರು ರೋಹಿಂಗ್ಯಗಳನ್ನು ರಖೈನ್ ಪ್ರಾಂತಕ್ಕೆ ವಾಪಸ್ ಕರೆತರಲು ಅಲ್ಲಿನ ಪರಿಸ್ಥಿತಿ ಅನುಕೂಲಕರವಾಗಿಲ್ಲವೆಂದು ವಿಶ್ವಸಂಸ್ಥೆ ತಿಳಿಸಿದೆ.

ವಿಶ್ವಸಂಸ್ಥೆಯ ಈ ಅನಿಸಿಕೆಯು, ತಾನು ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳಲು ಸಿದ್ಧನಿರುವೆನೆಂಬ ಮ್ಯಾನ್ಮಾರ್ ಆಡಳಿತದ ಹೇಳಿಕೆಯನ್ನು ಪ್ರಶ್ನಾರ್ಹಗೊಳಿಸಿದೆ.

  2017ರ ಆಗಸ್ಟ್‌ನಲ್ಲಿ ರಖೈನ್ ಪ್ರಾಂತದಲ್ಲಿ ಮ್ಯಾನ್ಮಾರ್ ಸೇನಾಪಡೆಗಳು, ಬೌದ್ಧ ತೀವ್ರವಾದಿಗಳ ಬೆಂಬಲದೊಂದಿಗೆ ನೂರಾರು ರೋಹಿಂಗ್ಯ ಮುಸ್ಲಿಮರ ಮಾರಣಹೋಮ ನಡೆಸಿದ್ದಲ್ಲದೆ, ಅವರ ಹಳ್ಳಿಗಳಿಗೆ ಬೆಂಕಿ ಹಚ್ಚಿ ನಾಶಗೊಳಿಸಿದ್ದರು. ಮ್ಯಾನ್ಮಾರ್ ಸೈನಿಕರು ಹಾಗೂ ಬೌದ್ಧ ತೀವ್ರವಾದಿಗಳ ದಾಳಿಗೆ ಬೆದರಿ 7 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ನೆರೆಯ ಬಾಂಗ್ಲಾ ದೇಶಕ್ಕೆ ಪಲಾಯನಗೈದಿದ್ದರು.

ಕಳೆದ ನವೆಂಬರ್‌ನಲ್ಲಿ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳು ವಲಸಿಗರ ವಾಪಸಾತಿಗೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಸಹಿಹಾಕಿದ್ದವು. ಆದರೆ ಈ ತನಕ ಒಬ್ಬನೇ ಒಬ್ಬ ರೋಹಿಂಗ್ಯ ಮ್ಯಾನ್ಮಾರ್‌ಗೆ ಹಿಂತಿರುಗಿಲ್ಲ.

 ‘‘ಸದ್ಯಕ್ಕೆ, ರೊಹಿಂಗ್ಯಗಳ ಸ್ವಯಂಪ್ರೇರಿತ, ಘನತೆಯ ಹಾಗೂ ಸುಸ್ಥಿರವಾದ ವಾಪಾಸಾತಿಗೆ ರಖೈನ್‌ನಲ್ಲಿ ಪೂರಕ ಪರಿಸ್ಥಿತಿಯಿಲ್ಲ’’ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಾರ್ಯಾಲಯದ ಸಹಾಯಕ ಪ್ರಧಾನ ಕಾರ್ಯದರ್ಶಿ ಉರ್ಸುಲಾ ಮುಯೆಲ್ಲರ್ ತಿಳಿಸಿದ್ದಾರೆ.

 ರಖೈನ್ ಪ್ರಾಂತ ಸೇರಿದಂತೆ ತನ್ನ ಆರು ದಿನಗಳ ಮ್ಯಾನ್ಮಾರ್ ಪ್ರವಾಸವನ್ನು  ಕೊನೆಗೊಳಿಸಿದ ಬಳಿಕ ಮುಯೆಲ್ಲರ್ ಅವರು ರವಿವಾ ಯಾಂಗೊನ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಮ್ಯಾನ್ಮಾರ್ ಆಡಳಿತವು ರಖೈನ್ ಪ್ರಾಂತದಲ್ಲಿ ತಲೆದೋರಿರುವ ನಾಗರಿಕರ ಚಲನವಲನ ಸ್ವಾತಂತ್ರಕ್ಕೆ ನಿರ್ಬಂಧ, ಸಾಮಾಜಿಕ ಬೆದರಿಕೆ, ಜೀವನೋಪಾಯಕ್ಕೆ ತೊಂದರೆ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆಯೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News