ಮೀನುಗಾರರಿಗೆ ಹೊರೆಯಾದ ಇಂಧನ ಬೆಲೆ!

Update: 2018-04-09 06:11 GMT

►ಕರಾವಳಿ ಭಾಗದಲ್ಲಿ ಮತ್ಸ್ಯಕ್ಷಾಮ

►ಗಗನಕ್ಕೇರಿದ ಮೀನಿನ ಬೆಲೆ

ಮಂಗಳೂರು, ಎ.8: ಕರಾವಳಿಯಲ್ಲಿ ಮತ್ತೆ ಮತ್ಸ್ಯಕ್ಷಾಮ ಸಮಸ್ಯೆ ಎದುರಾಗಿದೆ. ಇದಕ್ಕೆ ಸಮುದ್ರದಲ್ಲಿ ಮೀನುಗಳ ಅಭಾವ ಒಂದೆಡೆಯಾದರೆ ಗಗನಕ್ಕೇರಿರುವ ಇಂಧನ ಬೆಲೆ(ಡೀಸೆಲ್) ಪ್ರಮುಖ ಕಾರಣವಾಗಿದೆ.

ಪರ್ಸಿನ್ ಬೋಟ್‌ನಂತಹ ಯಾಂತ್ರಿಕ ದೋಣಿ, ಇಂಜಿನ್ ಚಾಲಿತ ನಾಡದೋಣಿ ಮತ್ತಿತರ ದೋಣಿಗಳಿಂದ ಮೀನುಗಾರಿಕೆ ಮಾಡುತ್ತಿರುವವರಿಗೆ ಇಂಧನದ ಬೆಲೆ ಅಧಿಕ ಹೊರೆಯಾಗಿ ಪರಿಣಮಿಸಿದೆ. ದೋಣಿ ಮಾಲಕರಿಗೆ ಡೀಸೆಲ್, ಪೆಟ್ರೋಲ್ ಬೆಲೆ ದಿನೇದಿನೇ ಹೊರೆಯಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಮೀನುಗಾರರು ಕನಿಷ್ಠ ಸಂಪಾದನೆ ಇಲ್ಲದೆ ನಷ್ಟವುಂಟಾಗಿ ದೋಣಿಗಳನ್ನು ದಡಕ್ಕೆ ಸೇರಿಸುತ್ತಿದ್ದಾರೆ. ಮೀನುಗಾರ ಮಹಿಳೆಯರು ಯಾವಾಗ ಮೀನು ಮಾರಿ ಲಾಭ ಗಳಿಸುತ್ತೇವೆಯೋ ಎನ್ನುವ ನಿರೀಕ್ಷೆಯಲ್ಲಿ ಕಾದು ಕುಳಿತ್ತಿದ್ದಾರೆ. ನಷ್ಟ ಸಂಭವಿಸಿದರೂ ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಅದೆಷ್ಟೋ ಜನರು ಹಸಿವಿನಿಂದ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಪ್ರಮಾಣದ ಬೋಟ್‌ಗಳಿಗೆ 50-70 ಸಾವಿರ ರೂ.ನ ಡೀಸೆಲ್ ಅಗತ್ಯವಿದೆ. ನಷ್ಟ ನಿರ್ವಹಣೆ ಸಾಧ್ಯವಾಗದೆ ಶೇ.50ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕುತ್ತಿವೆ.

ಕೆಲವು ಬೋಟ್‌ಗಳಿಗೆ 10ರಿಂದ 15 ದಿನಗಳ ಮೀನುಗಾರಿಕೆಗೆ ಸುಮಾರು 7,000ಕ್ಕೂ ಹೆಚ್ಚು ಲೀಟರ್ ಡೀಸೆಲ್ ಅಗತ್ಯವಿದೆ. ಇದಕ್ಕೆ ಲಕ್ಷಾಂತರ ರೂ. ವೆಚ್ಚವಾಗಲಿದೆ. ಬಲೆ, ಇಂಜಿನ್, ಮೀನುಗಾರರಿಗೆ ಸಂಬಳ ಸೇರಿದರೆ ಲಕ್ಷಾಂತರ ರೂ. ವ್ಯಯಿಸಬೇಕಾಗುತ್ತದೆ. ಈ ರೀತಿಯಾಗಿ ಸುಮಾರು 5-6 ಲಕ್ಷ ರೂ.ನ ಮೀನುಗಾರಿಕೆ ಸಾಧ್ಯವಾದರೂ ಅದರಿಂದೇನು ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಮಂಗಳೂರಿನ ಮೀನುಗಾರ ನೌಫಲ್ ಅಳಲನ್ನು ತೋಡಿಕೊಂಡರು.

ದ.ಕ. ಜಿಲ್ಲೆಯಲ್ಲಿ 34,960 ವೃತ್ತಿನಿರತ ಮೀನುಗಾರರ ಸಹಿತ 65,240 ಮೀನುಗಾರರಿದ್ದಾರೆ. ಯಾಂತ್ರಿಕ ದೋಣಿಗಳಾದ ಪರ್ಸಿನ್ 65 ಮತ್ತು ಟ್ರಾಲ್‌ಬೋಟ್ 1,012 ಹಾಗೂ 1,376 ಇಂಜಿನ್‌ಚಾಲಿತ ನಾಡದೋಣಿ ಮತು್ತ 526 ಯಾಂತ್ರಿಕವಲ್ಲದ ದೋಣಿಗಳಿವೆ.

ಮೀನಿಗೆ ಬರ!: ಸಮರ್ಪಕವಾದ ಮೀನುಗಾರಿಕೆ ಇಲ್ಲದೆಯೇ ಮಾರುಕಟ್ಟೆಗಳಲ್ಲಿ ಮೀನು ಕಡಿಮೆಯಾಗಿದೆ. ಹೀಗಾಗಿ ಮೀನಿನ ಮಾರಾಟ ದರವೂ ಕೂಡ ಗಗನಕ್ಕೇರಿದೆ. ಬಗೆಬಗೆಯ ಮೀನು ತಿಂದು ಬಾಯಿ ಚಪ್ಪರಿಸಲು ಹಾತೊರೆಯುತ್ತಿರುವ ಮೀನು ಪ್ರಿಯರಿಗೆ ಮೀನಿಲ್ಲದೆ ದರ ಏರಿಕೆಯ ಬಿಸಿ ತಟ್ಟಿದೆ. ಹಾಗಾಗಿಯೇ ಮಾರುಕಟ್ಟೆಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.

ಕಂಗಾಲಾದ ಮೀನುಗಾರ ಮಹಿಳೆಯರು
ಮೀನು ವ್ಯಾಪಾರವನ್ನು ನಂಬಿಕೊಂಡಿರುವ ಹೆಚ್ಚಿನ ಮೀನುಗಾರ ಮಹಿಳೆಯರು ವ್ಯಾಪಾರವಿಲ್ಲದೆ ಜೀವನೋಪಾಯಕ್ಕೆ ಬೇರೆ ಕಸುಬು ಮಾಡುವಂತಾಗಿದೆ. ಮೀನು ಹೇರಳವಾಗಿ ದೊರೆತ ಸಂದರ್ಭ ಮೀನುಗಾರ ಮಹಿಳೆಯರು ಹೆಚ್ಚಿನ ಲಾಭ ಗಳಿಸಿಕೊಂಡು ಗ್ರಾಹಕರಿಗೆ ವಿಭಿನ್ನ ರೀತಿಯ ತಳಿಯ ಮೀನುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ಮೀನಿನ ಕೊರತೆ ಇರುವುದರಿಂದ ಮೀನುಗಾರರು ಮತ್ತು ಮೀನು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಹೀಗೆಯೇ ಮೀನಿನ ಬರ ಮುಂದು ವರಿದಲ್ಲಿ ಮೀನುಗಾರ ಮಹಿಳೆಯರಿಗೆ ತೀವ್ರ ಆರ್ಥಿಕ ಸಂಕ್ಟ ಎದುರಾಗುವ ಭೀತಿ ನಿರ್ಮಾಣವಾಗಿದೆ.

ಕೆಲ ದಿನಗಳ ಹಿಂದೆ ಬೋಟ್‌ನ ಹಗ್ಗ ತುಂಡಾಗಿ ಸಂಭವಿಸಿದ ಅವಘಡದಲ್ಲಿ ಮೀನುಗಾರರೊಬ್ಬರ ಕಾಲು ಕತ್ತರಿಸಲ್ಪಟ್ಟಿದೆ. ಬೋಟ್ ಕಟ್ಟಲು ಯಾವುದೇ ಕಂಬ ಇಲ್ಲ. ಇಲ್ಲಿ ಉದ್ದನೆಯ ಹಗ್ಗ ಹಾಕಿ ಕಟ್ಟುತ್ತಾರೆ. ಹಗ್ಗ ಬಿಗಿಯಾದರೆ ಕೆಲಸ ಮಾಡುವವರ ಜೀವ ಹಾನಿಯಾಗುವ ಸಾಧ್ಯತೆಗಳಿವೆ. ಸಂಬಂಧಿಸಿದವರು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
ಮುಹಮ್ಮದ್ ಅಲಿ ಉಳ್ಳಾಲ, ಮೀನುಗಾರ

ಬಂದರಿನಲ್ಲಿ ಮೀನುಗಳನ್ನು ಹೆಕ್ಕಿ ದಿನಂಪ್ರತಿ ಇಲ್ಲಿಯೇ ಅವುಗಳನ್ನು ಸ್ವಚ್ಛಗೊಳಿಸಿ ಮಾರುತ್ತೇವೆ. ದಿನಕ್ಕೆ 200ರಿಂದ 300 ರೂ. ದುಡಿಯುತ್ತೇವೆ. ಸ್ವಂತ ಮನೆಯಿಲ್ಲ. ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತೇವೆ. ಸರಕಾರದ ಯಾವುದೆೀ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ.

ಪಚ್ಚಿಯಮ್ಮ, ಮೀನುಗಾರ ಮಹಿಳೆ

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯು ಬಂದರು ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಟ್ಯೂಬ್‌ಲೈಟ್‌ನ ವ್ಯವಸ್ಥೆಯನ್ನು ಗುತ್ತಿಗೆ ಪಡೆದವರೇ ಸರಿಪಡಿಸುತ್ತಾರೆ. ಚರಂಡಿ ದುರಸ್ತಿಯಾದಲ್ಲಿ ಇಲಾಖೆ ವತಿಯಿಂದಲೇ ಸರಿಪಡಿಲಾಗುತ್ತದೆ. ಮತ್ಸಾಶ್ರಯ ಯೋಜನೆಯಡಿ ಮನೆ ರಹಿತ ಮೀನುಗಾರರಿಗೆ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಸ್ವಂತ ಜಾಗವನ್ನು ಹೊಂದಿದವರಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿೆ. ಆದರೆ ಈ ಯೋಜನೆ ಪ್ರಗತಿಯಲ್ಲಿಲ್ಲ.
ಮಂಜುಶ್ರೀ, ಮೀನುಗಾರಿಕಾ ಸಹಾಯಕ ನಿರ್ದೇಶಕಿ, ದ.ಕ.ಜಿಲ್ಲೆ

ಡಿಸೆಂಬರ್ ತಿಂಗಳ ಸಬ್ಸಿಡಿ ದರದ ಸೀಮೆ ಎಣ್ಣೆ ಬಾಕಿಯಾಗಿದೆ. ಫೆಬ್ರವರಿಯಲ್ಲಿ ಬರಬೇಕಿದ್ದ ಸುಮಾರು 1,63,350 ಲೀ. ಸೀಮೆ ಎಣ್ಣೆ ಇನ್ನೂ ಬಂದಿಲ್ಲ. ಕೇಂದ್ರ ಸರಕಾರ ಗೃಹಪಯೋಗಿ ಹೊರತು ಇತರ ಬಳಕೆಗೆ ಸೀಮೆಎಣ್ಣೆ ಪೂರೈಕೆ ಮಾಡದಿರುವುದರಿಂದ ಮೀನುಗಾರರಿಗೆ ಸಮಸ್ಯೆಯಾಗಿದೆ. ರಾಜ್ಯ ಸರಕಾರದ ಮುತುವರ್ಜಿಯಿಂದ ಸೀಮೆಎಣ್ಣೆ ಪೂರೈಕೆಯಾಗುತ್ತಿದ್ದು, ಇದರಿಂದ ನಾವು ಸಂಕಷ್ಟದಿಂದ ಪಾರಾಗುವಂತಾಗಿದೆ.

ಅಲಿ ಹಸನ್, ದ.ಕ. ಜಿಲ್ಲೆ ಗಿಲ್‌ನೆಟ್ ಮೀನುಗಾರ ಸಂಘದ ಅಧ್ಯಕ್ಷ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News