×
Ad

ಗಡಿವಿವಾದವನ್ನು ಅತಿರಂಜಿತಗೊಳಿಸದಿರಿ: ಭಾರತಕ್ಕೆ ಚೀನಾ ‘ಕಿವಿಮಾತು’

Update: 2018-04-09 23:23 IST

ಬೀಜಿಂಗ್,ಎ.9: ಉಭಯದೇಶಗಳ ನಡುವಿನ ಗಡಿ ವಿವಾದಕ್ಕೆ ಅತಿರೇಕದ ಪ್ರಚಾರವನ್ನು ನೀಡಕೂಡದು ಹಾಗೂ ಗಡಿಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಲು ಬೀಜಿಂಗ್ ಜೊತೆ ಕೆಲಸ ಮಾಡುವಂತೆ ಚೀನಾ ಸೋಮವಾರ ಭಾರತಕ್ಕೆ ಕರೆ ನೀಡಿದೆ.

 ಅರುಣಾಚಲಪ್ರದೇಶದ ಗಡಿಯಲ್ಲಿ ಭಾರತೀಯ ಪಡೆಗಳು ಗಸ್ತು ತಿರುಗುವುದಕ್ಕೆ ಚೀನಿ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ವರದಿಯಾದ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.

 ‘‘ಚೀನಾ-ಭಾರತದ ಪ್ರಸಕ್ತ ಸನ್ನಿವೇಶದ ಬಗ್ಗೆ ನನಗೆ ಯಾವುದೇ ರೀತಿಯ ವಿಸ್ತೃತವಾದ ಮಾಹಿತಿಯಿಲ್ಲ. ಭಾರತ-ಚೀನಾ ಗಡಿ ವಿವಾದದಲ್ಲಿ ಚೀನಾದ ನಿಲುವು ಸ್ಥಿರವಾಗಿದೆ ಹಾಗೂ ಸ್ಪಷ್ಟವಾಗಿದೆ. ಚೀನಾ ಸರಕಾರವು ತಥಾಕಥಿತ ಅರುಣಾಚಲಪ್ರದೇಶಕ್ಕೆ ಯಾವತ್ತೂ ಮಾನ್ಯತೆ ನೀಡುವುದಿಲ್ಲ’’ ಎಂದು ಜೆಂಗ್ ಹೇಳಿದ್ದಾರೆ.

‘‘ಗಡಿವಿವಾದಗಳನ್ನು ಬಗೆಹರಿಸಲು ಚೀನಾ ಹಾಗೂ ಭಾರತವು ಸಮಾಲೋಚನೆ ಹಾಗೂ ಮಾತುಕತೆಯಲ್ಲಿ ತೊಡಗಿವೆ. ಇತ್ತಂಡಗಳಿಗೂ ಸಮ್ಮತಾರ್ಹವಾದ ನ್ಯಾಯಯುತವಾದ ಪರಿಹಾರವನ್ನು ಕಂಡುಹಿಡಿಯಲು ಶ್ರಮಿಸಲಾಗುತ್ತಿದೆ’’ ಎಂದವರು ಹೇಳಿದ್ದಾರೆ.

 ‘‘ ಈ ವಿವಾದದ ಬಗ್ಗೆ ನಿರ್ಣಯವನ್ನು ಪ್ರಕಟಿಸುವುದು ಇನ್ನೂ ನೆನೆಗುದಿಯಲ್ಲಿದ್ದು, ಉಭಯ ತಂಡಗಳೂ ಈ ಒಪ್ಪಂದಗಳಿಗೆ ಬದ್ಧವಾಗಿರುವುದಾಗಿ ನಾವು ಆಶಿಸುತ್ತೇವೆ. ಈ ವಿಷಯವನ್ನು ಅತಿರಂಜಿತಗೊಳಿಸುವ ಬದಲು ಭಾರತವು ಈ ಪ್ರದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಚೀನಾದೊಂದಿಗೆ ಶ್ರಮಿಸಬೇಕು’’ ಎಂದವರು ತಿಳಿಸಿದ್ದಾರೆ.

ಕಳೆದ ತಿಂಗಳು ಭಾರತೀಯ ಪಡೆಗಳು ಚೀನಾದ ಪ್ರಾಂತದೊಳಗೆ ಪ್ರವೇಶಿಸಿರುವುದಾಗಿ ಚೀನಾದ ಸೇನೆಯು ಕಳೆದ ತಿಂಗಳು ಆಪಾದಿಸಿದೆ. ಆದರೆ ಭಾರತವು ಈ ಆರೋಪವನ್ನು ತಿರಸ್ಕರಿಸಿತ್ತು.

 ಅರುಣಾಚಲ ಪ್ರದೇಶವನ್ನು ಚೀನಾವು ತನಗೆ ಸೇರಿದ್ದೆಂದು ಹೇಳಿಕೊಳ್ಳುತ್ತಿದೆ ಹಾಗೂ ಅದನ್ನು ದಕ್ಷಿಣ ಟಿಬೆಟ್ ಎಂಬುದಾಗಿ ಕರೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News