ರಾಹುಲ್‌ರ ಕೋಮು ಸಾಮರಸ್ಯ ಕಾರ್ಯಕ್ರಮ: ಸಿಖ್ ದಂಗೆಯ ಆರೋಪಿ ಟೈಟ್ಲರ್‌ಗೆ ವೇದಿಕೆ ತ್ಯಜಿಸುವಂತೆ ಮನವಿ

Update: 2018-04-09 17:58 GMT
ANI Photo

ಹೊಸದಿಲ್ಲಿ, ಎ. 9: ರಾಜಘಡಲ್ಲಿ ಸೋಮವಾರ ನಡೆದ ಒಂದು ದಿನದ ‘ಕೋಮು ಸೌಹಾರ್ದ ಉತ್ತೇಜನಕ್ಕೆ ಉಪವಾಸ ಸತ್ಯಾಗ್ರಹ’ ಕಾರ್ಯಕ್ರಮಕ್ಕೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ವೇದಿಕೆಯಲ್ಲಿದ್ದ ಮಾಜಿ ಕೇಂದ್ರ ಸಚಿವ ಜಗದೀಶ್ ಟೈಟ್ಲರ್ ಅವರನ್ನು ತೆರಳಲು ಹೇಳುವ ಮೂಲಕ ಕಾಂಗ್ರೆಸ್ ಆಗಲಿದ್ದ ಮುಜುಗರವನ್ನು ತಪ್ಪಿಸಿಕೊಂಡಿದೆ.

ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರಿದ್ದ ವೇದಿಕೆಯಲ್ಲಿ ಜಗದೀಶ್ ಟೈಟ್ಲರ್ ಕೂಡ ಇದ್ದರು. ಇದನ್ನು ಗಮನಿಸಿದ ದಿಲ್ಲಿ ಕಾಂಗ್ರೆಸ್ ವರಿಷ್ಠ ಅಜಯ್ ಮಕೇನ್ ಟೈಟ್ಲರ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಮಾತುಕತೆ ಬಳಿಕ ಟೈಟ್ಲರ್ ವೇದಿಕೆಯಿಂದ ಇಳಿದು ಹೋಗಿದ್ದಾರೆ. ಈ ವರ್ಷದ ಆರಂಭದಲ್ಲಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೈಟ್ಲರ್, 1994ರ ನವೆಂಬರ್‌ನಲ್ಲಿ ನಡೆದ ಸಿಖ್ ದಂಗೆಯ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ರಾಹುಲ್ ಗಾಂಧಿ ಅವರೊಂದಿಗೆ ಉತ್ತರ ದಿಲ್ಲಿಯಲ್ಲಿ ಪ್ರಯಾಣ ನಡೆಸಿದ್ದೆ ಎಂದು ಹೇಳಿದ್ದರು. ದಶಕಗಳ ಹಿಂದೆ ಸಲ್ಲಿಸಲಾದ ನಾನಾವತಿ ಆಯೋಗದ ವರದಿಯಲ್ಲಿ ಸಿಖ್ ದಂಗೆಯ ಆಯೋಜಕರಲ್ಲಿ ಟೈಟ್ಲರ್ ಕೂಡ ಒಬ್ಬರು ಎಂದು ಹೇಳಲಾಗಿದೆ. ದಂಗೆಯ ಸಂದರ್ಭ ಉತ್ತರ ದಿಲ್ಲಿಯ ಗುರುದ್ವಾರ ಪುಲ್ಬಂಗಾಶ್‌ನ ಹೊರಗಡೆ ಮೂವರು ಸಿಕ್ಖರನ್ನು ಹತ್ಯೆಗೈದ ಆರೋಪವನ್ನು ಕೂಡ ಟೈಟ್ಲರ್ ಎದುರಿಸುತ್ತಿದ್ದಾರೆ. ಆದರೆ, ಇದುವರೆಗೆ ಸಿಬಿಐ ಟೈಟ್ಲರ್ ವಿರುದ್ಧ ಯಾವುದೇ ಆರೋಪ ಪಟ್ಟಿ ರೂಪಿಸಲು ಸಮರ್ಥವಾಗಿಲ್ಲ. ಸಿಖ್ ದಂಗೆಯಲ್ಲಿ ಟೈಟ್ಲರ್ ಅವರ ಪಾತ್ರದ ಬಗ್ಗೆ ದಿಲ್ಲಿಯ ಹಲವು ನ್ಯಾಯಾಲಯಗಳು ಕಾಲಕಾಲಕ್ಕೆ ತನಿಖಾ ಸಂಸ್ಥೆಗೆ ನಿರ್ದೇಶಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News