ತೀಸ್ತಾ ಸೆಟಲ್‌ವಾಡ್‌ ಜಾಮೀನು ಅವಧಿ ವಿಸ್ತರಣೆ

Update: 2018-04-09 18:07 GMT

ಹೊಸದಿಲ್ಲಿ, ಎ.9: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಹಾಗೂ ಅವರ ಪತಿಗೆ ಬಾಂಬೆ ಹೈಕೋರ್ಟ್ ನೀಡಿರುವ ಸಂಚಾರಿ ನಿರೀಕ್ಷಣಾ ಜಾಮೀನು(ಟ್ರಾನ್ಸಿಟ್ ಆ್ಯಂಟಿಸಿಪೇಟರಿ ಬೇಲ್) ಅವಧಿಯನ್ನು ಸುಪ್ರೀಂಕೋರ್ಟ್ ಮೇ 2ರಿಂದ ಮೇ 31ರವರೆಗೆ ವಿಸ್ತರಿಸಿದ್ದು, ಅದುವರೆಗೆ ಅವರನ್ನು ಬಂಧಿಸಬಾರದು ಎಂದು ಸೂಚಿಸಿದೆ. ಅಲ್ಲದೆ ಗುಜರಾತ್‌ನ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯುವಂತೆ ತೀಸ್ತಾ ಹಾಗೂ ಅವರ ಪತಿಗೆ ತಿಳಿಸಿದೆ. ನಿಧಿ ದುರುಪಯೋಗ ಪ್ರಕರಣದಲ್ಲಿ ಗುಜರಾತ್ ಪೊಲೀಸರು ತೀಸ್ತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತೀಸ್ತಾ ಹಾಗೂ ಅವರ ಪತಿಗೆ ಸಂಚಾರಿ ನಿರೀಕ್ಷಣಾ ಜಾಮೀನು ನೀಡಬಾರದು . ಬಾಂಬೆ ಹೈಕೋರ್ಟ್ ನೀಡಿರುವ ಜಾಮೀನು ಕಾನೂನುಬಾಹಿರವಾಗಿದೆ ಎಂದು ಗುಜರಾತ್ ಪರ ವಕೀಲರಾದ ಮಹೇಶ್ ಜೇಠ್ಮಲಾನಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಆದರೆ ಈ ಪ್ರಕರಣ ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆಯೊಂದಕ್ಕೆ ಸಂಬಂಧಿಸಿರುವ ಕಾರಣ ಹೈಕೋರ್ಟ್‌ಗೆ ಸಂಚಾರಿ ನಿರೀಕ್ಷಣಾ ಜಾಮೀನು ನೀಡುವ ಅಧಿಕಾರವಿದೆ ಎಂದು ತೀಸ್ತಾ ಪರ ವಕೀಲ ಸಿ.ಯು.ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.

2008ರಿಂದ 2013ರ ಅವಧಿಯಲ್ಲಿ ತೀಸ್ತಾ ಹಾಗೂ ಅವರ ಪತಿ ತಮ್ಮ ಎನ್‌ಜಿಒ ಸಂಸ್ಥೆ ‘ಸಬ್ರಂಗ್ ಟ್ರಸ್ಟ್’ಗೆ ಕೇಂದ್ರ ಸರಕಾರದಿಂದ 1.4 ಕೋಟಿ ರೂ. ಮೊತ್ತದ ನಿಧಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಅಹ್ಮದಾಬಾದ್ ಕ್ರೈಂಬ್ರಾಂಚ್ ಪೊಲೀಸರು ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News