ರಾಮನವಮಿಯಿಂದ ರಾಮಮಂದಿರದವರೆಗೆ...

Update: 2018-04-10 07:43 GMT

ಪೂರ್ವಭಾರತದಲ್ಲಿ ಕೋಮುಗಲಭೆಗಳನ್ನು ಬರಲಿರುವ ಚುನಾವಣೆ ಹಾಗೂ ಅದರಾಚೆಗಿನ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಸಲಾಗಿದೆ.

ಭಾರತೀಯ ಜನತಾ ಪಕ್ಷವು 2019ರ ಸಾರ್ವತ್ರಿಕ ಚುನಾವಣೆಯ ತಯಾರಿಯ ಭಾಗವಾಗಿ ತ್ವರಿತ ರಾಜಕೀಯ ಲಾಭವನ್ನು ಗಳಿಸಿಕೊಡುವ ತನ್ನ ಹಳೆಯ ಕೋಮುವಾದಿ ಧ್ರುವೀಕರಣ ತಂತ್ರಕ್ಕೆ ಮರಳಿದಂತೆ ಕಾಣುತ್ತಿದೆ. ಅದಕ್ಕೆ ಇತ್ತೀಚೆಗೆ ಬಿಹಾರ ಮತ್ತು ಪ.ಬಂಗಾಳಗಳಲ್ಲಿ ನಡೆದ ಕೋಮುಗಲಭೆಗಳೇ ಸಾಕ್ಷಿ. ಈ ಎರಡೂ ರಾಜ್ಯಗಳಲ್ಲಿ ರಾಮನವಮಿ ಸಮಾರಂಭದ ಸುತ್ತ ಮುಸ್ಲಿಮರ ವಿರುದ್ಧ ಸರಣಿ ಕೋಮುದಾಳಿಗಳು ನಡೆದಿವೆ. ಸಾಮಾಜಿಕ ಜಾಲತಾಣಗಳನ್ನು ಮತ್ತು ಬಿಜೆಪಿ ಪಕ್ಷದ ಸಂಘಟನಾ ಶಕ್ತಿಗಳನ್ನು ಅತ್ಯಂತ ಜಾಣತನದಿಂದ ಇದಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಈ ವರ್ಷದ ರಾಮನವಮಿ ಆಚರಣೆಗಳಲ್ಲಿ ಯುವಕರ ತಂಡಗಳು ಕತ್ತಿ ಮತ್ತು ಕೇಸರಿ ಬಾವುಟಗಳನ್ನು ಝಳಪಿಸುತ್ತಾ ಮೋಟಾರು ಬೈಕುಗಳಲ್ಲಿ ಆಟಾಟೋಪ ನಡೆಸಿದ್ದರ ಬಗ್ಗೆ ಹಲವಾರು ಕಡೆಗಳಿಂದ ವರದಿಯಾಗಿದೆ. ಈ ಅತ್ಯಂತ ಯೋಜಿತವಾದ ಮೆರವಣಿಗೆಗಳು ಮೊದಲು ಹಿಂದೂ ಬಹುಸಂಖ್ಯಾತ ಪ್ರದೇಶದಿಂದ ಧಾರ್ಮಿಕ ಹಾಡು ಮತ್ತು ಘೋಷಣೆಗಳ ಮೂಲಕ ಪ್ರಾರಂಭಗೊಂಡಿವೆ. ಅಲ್ಲಿಂದ ಅವು ನೇರವಾಗಿ ಮುಸ್ಲಿಂ ಪ್ರದೇಶಗಳತ್ತ ಸಾಗುತ್ತಿದ್ದಂತೆ ಹಾಡುಗಳು ಮತ್ತು ಘೋಷಣೆಗಳು ಅತ್ಯಂತ ಕೋಮು ಪ್ರಚೋದಕವಾಗಿ ಬದಲಾಗಿವೆ. ಇದರ ಗುರಿಯೇನೆಂಬುದು ಸ್ಪಷ್ಟವಾಗಿವೆ. ಅಂಥ ಮೆರವಣಿಗೆಗಳ ನಾಯಕತ್ವವನ್ನು ಹಲವಾರು ಕಡೆಗಳಲ್ಲಿ ಸಂಘಪರಿವಾರದ ನಾಯಕರು ಮತ್ತು ಕಾರ್ಯಕರ್ತರೇ ವಹಿಸಿಕೊಂಡಿದ್ದರು ಮತ್ತು ಅವರೊಡನೆ ನೆರೆಹೊರೆ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಝಾರ್ಖಂಡ್‌ಗಳಿಂದಲೂ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಹಾರದಲ್ಲಿ ಕೋಮು ಗಲಭೆಗಳು 2018ರ ಅರಾರಿಯಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆರ್‌ಜೆಡಿ ಅಭ್ಯರ್ಥಿಯು ಸೋಲಿಸಿದ ನಂತರದಲ್ಲಿ ಪ್ರಾರಂಭಗೊಂಡು ರಾಮನವಮಿಯ ತನಕ ಮುಂದುವರಿಯಿತು. ಇದು 10 ಜಿಲ್ಲೆಗಳಲ್ಲಿ ವ್ಯಾಪಿಸಿ ಒಬ್ಬ ವ್ಯಕ್ತಿ ಕೊಲ್ಲಲ್ಪಟ್ಟು 65 ಜನರು ತೀವ್ರವಾಗಿ ಗಾಯಗೊಂಡರು. ಪ.ಬಂಗಾಳದಲ್ಲಿ ರಾಮನವಮಿಯ ಸುತ್ತ ಕೇಂದ್ರೀಕರಿಸಲ್ಪಟ್ಟಿದ್ದ ಕೋಮು ಗಲಭೆಗಳಿಂದಾಗಿ ಅಸನ್ಸೋಲ್‌ನಲ್ಲಿ ನಾಲ್ವರು ಕೊಲ್ಲಲ್ಪಟ್ಟರು. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಆಯ್ದ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಕೇವಲ ಹಿಂದೂ ಪ್ರದೇಶಗಳಿಗೆ ಮಾತ್ರ ಭೇಟಿ ನೀಡಿದರು ಮತ್ತು ಬಿಹಾರದಲ್ಲಿ ಕೇಂದ್ರ ಮಂತ್ರಿಯೊಬ್ಬರ ಮಗನನ್ನು ಗಲಭೆಯ ಆರೋಪದಲ್ಲಿ ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ರಾಜಕೀಯ ನಾಯಕರಿಂದ ನಿರೀಕ್ಷಿಸಬಹುದಾದ ಪ್ರಬುದ್ಧತೆ ಮತ್ತು ಮುಂದಾಲೋಚನೆಗಳನ್ನು ಯಾವ ರಾಜಕೀಯ ಪಕ್ಷವೂ ಪ್ರದರ್ಶಿಸದಿದ್ದರೂ ಕೊಲ್ಲಲ್ಲಟ್ಟ ವ್ಯಕ್ತಿಯ ತಂದೆ ಧರ್ಮಗುರು ಇಮ್ದಾದುಲ್ಲ ರಾಶಿದಿಯವರು ಮಾತ್ರ ಅಂಥ ಅಪರೂಪದ ಪ್ರಬುದ್ಧತೆಯನ್ನು ಪ್ರದರ್ಶಿಸಿದರು. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ರಾಶಿದಿಯವರು ತನ್ನ ಚಿಕ್ಕ ವಯಸ್ಸಿನ ಮಗನ ಕೊಲೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರೂ ತನ್ನ ಸಮುದಾಯದವರು ಮಾತ್ರ ಯಾವ ಕಾರಣಕ್ಕೂ ಪ್ರತೀಕಾರದ ಕ್ರಮಗಳಿಗೆ ಮುಂದಾಗದೆ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿದರು. ಐತಿಹಾಸಿಕವಾಗಿ ಬಿಹಾರ ಮತ್ತು ಪ.ಬಂಗಾಳ ಪ್ರಾಂತಗಳು ಅನುಕ್ರಮವಾಗಿ ಲೋಹಿಯಾ ಮತ್ತು ಕಮ್ಯುನಿಸ್ಟ್ ರಾಜಕೀಯದ ನೆಲೆವೀಡಾಗಿದ್ದವು. ಹಿಂದೂ ಬಲಪಂಥೀಯ ಮತ್ತು ಮೇಲ್ಜಾತಿ ಕೇಂದ್ರಿತ ಬಿಜೆಪಿ ಪಕ್ಷವು ಅವೆರಡೂ ರಾಜ್ಯಗಳಲ್ಲಿ ನೆಲೆಯೂರಲಾಗಿರಲಿಲ್ಲ. ಆದರೆ ಬಿಹಾರದಲ್ಲಿ ಜೆಡಿ (ಯು)ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಹಾರದಲ್ಲಿ ಆರ್‌ಜೆಡಿ ಮತ್ತು ಪ. ಬಂಗಾಳದಲ್ಲಿ ಕಮ್ಯುನಿಸ್ಟರು ದೀರ್ಘಕಾಲ ಆಳ್ವಿಕೆ ನಡೆಸಿದ್ದರಿಂದ ಎರಡೂ ರಾಜ್ಯಗಳು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಗೆ ಬಲವಾದ ಸಾಮಾಜಿಕ-ರಾಜಕೀಯ ಪ್ರತಿರೋಧವನ್ನೇ ಒಡ್ಡಿದ್ದವು. ಆದರೆ ಬಿಜೆಪಿಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನ ಆಕ್ರಮಣಕಾರಿ ರಾಜಕೀಯ ಸಾಧನಗಳ ಮೂಲಕ ಹಿಂದೆ ಆಳ್ವಿಕೆಯಲ್ಲಿದ್ದ ಆ ಎರಡು ಪಕ್ಷಗಳನ್ನು ಮತ್ತು ಈಗ ಅಧಿಕಾರದಲ್ಲಿರುವ ಜೆಡಿ(ಯು) ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳನ್ನು ಮಣಿಸಲು ಪ್ರಯತ್ನಿಸುತ್ತಿದೆ. ಈ ಎರಡೂ ಪೂರ್ವ ರಾಜ್ಯಗಳಿಗೆ ಸುದೀರ್ಘವಾದ ಬಹುತ್ವ ಧಾರ್ಮಿಕ ಪರಂಪರೆಯಿದ್ದು ಕಳೆದ ಹಲವಾರು ದಶಕಗಳಿಂದ ಯಾವುದೇ ದೊಡ್ಡ ಕೋಮು ಗಲಭೆಗಳನ್ನು ಕಂಡಿರಲಿಲ್ಲ. ಆ ರಾಜ್ಯಗಳಲ್ಲಿ ರಾಮನವಮಿಯು ಅಂತಹ ದೊಡ್ಡ ಆಚರಣೆಯೇನೂ ಆಗಿರಲಿಲ್ಲ. ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಶೀಘ್ರವಾಗಿ ಬದಲಾಗುತ್ತಿದ್ದು ಆಕ್ರಮಣಕಾರಿ ಬೀದಿ ಮೆರವಣಿಗೆಗಳು ನಡೆಯುತ್ತಿವೆ ಮತ್ತು ಅದನ್ನು ಬಿಜೆಪಿಯು ತನ್ನ ಶಕ್ತಿ ಪ್ರದರ್ಶನದ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಈ ವಿದ್ಯಮಾನವು ಇತರ ರಾಜ್ಯಗಳಲ್ಲೂ ಸಂಭವಿಸುತ್ತಿದೆ. ತನ್ನ ಹಿಂದೂ ರಾಷ್ಟ್ರದ ಗುರಿಯ ಈಡೇರಿಕೆಗೆ ಪೂರಕವಾಗಿ ವಿವಿಧ ಹಿನ್ನೆಲೆಯ ಹಿಂದೂಗಳನ್ನು ರಾಜಕೀಯವಾಗಿ ಸಂಘಟಿಸಲು ರಾಮ ಬಲವಾದ ಮತ್ತು ಸಶಕ್ತವಾದ ಪ್ರತಿಮೆ ಎಂಬುದು ಬಿಜೆಪಿಗೆ ಅರ್ಥವಾಗಿದೆ. ಇದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಬೇಕೆಂಬ ಕೇಸರಿ ರಾಜಕಾರಣದ ಕೇಂದ್ರ ವಿಷಯಕ್ಕೂ ಪೂರಕವಾಗಿಯೇ ಇದೆ. ಅದಕ್ಕೆ ತಕ್ಕಹಾಗೆ ಬಿಹಾರ ಮತ್ತು ಬಂಗಾಳಗಳಲ್ಲಿ ರಾಮಭಕ್ತಿಯನ್ನು ಪ್ರಚುರ ಪಡಿಸಲು ಬಿಜೆಪಿಯು ‘ಲವ್ ಜಿಹಾದ್’ಗೆ ವಿರುದ್ಧವಾಗಿ ‘‘ಬೇಟಿ ಬಚಾವ್, ಬಹೂ ಲಾವೋ (ಮಗಳನ್ನು ಉಳಿಸಿ, ಸೊಸೆಯನ್ನು ಕರೆತನ್ನಿ) ಎಂಬ ಪ್ರಚಾರವನ್ನು ಕೈಗೊಂಡಿದ್ದು’’ ಮುಸ್ಲಿಮ್ ತರುಣರನ್ನು ಆಧುನಿಕ ರಾವಣರನ್ನಾಗಿ ಚಿತ್ರಿಸುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಿಹಾರದಲ್ಲಿ ಶೇ. 29.9 ರಷ್ಟು ಓಟುಗಳನ್ನೂ ಮತ್ತು ಬಂಗಾಳದಲ್ಲಿ ಶೇ.17ರಷ್ಟು ಓಟುಗಳನ್ನು ಪಡೆದಿತ್ತು. ಇದು 2015 ಮತ್ತು 2016ರಲ್ಲಿ ನಡೆದ ಆಯಾ ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲಿ ಶೇ.24.4 ಮತ್ತು ಶೇ.10.2ಕ್ಕೆ ಇಳಿದಿತ್ತು. ಹೆಚ್ಚುತ್ತಲೇ ಇರುವ ಗ್ರಾಮೀಣ ಬಿಕ್ಕಟ್ಟು ಮತ್ತು ಜಾತಿ ಸಂಘರ್ಷಗಳಿಂದಾಗಿ ಹಲವಾರು ರಾಜ್ಯಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈಶಾನ್ಯ ಭಾರತದ ಗೆಲುವಿನಿಂದ ಬೀಗುತ್ತಿರುವ ಬಿಜೆಪಿಯು ಈ ಹೊಸ ಪ್ರದೇಶಗಳಲ್ಲೂ ತನ್ನ ಬಾವುಟವನ್ನು ಹಾರಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿನ ಲೋಕಸಭಾ ಉಪಚುನಾವಣೆಗಳಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯಿಂದ ಉತ್ತರಪ್ರದೇಶದಲ್ಲಿ ಹೀನಾಯವಾದ ಸೋಲನ್ನಪ್ಪಿದ್ದು ಸಹ ಬಿಜೆಪಿಗೆ ತನ್ನ ಹಳೆಯ ಯಶಸ್ವೀ ತಂತ್ರಕ್ಕೆ ಮರಳುವಂತೆ ಪ್ರಚೋದಿಸಿದೆ. ಈ ಎರಡೂ ರಾಜ್ಯಗಳಲ್ಲಿ ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯಿರುವುದೂ ಸಹ (ಬಿಹಾರದಲ್ಲಿ ಶೇ.17 ಮತ್ತು ಪ. ಬಂಗಾಳದಲ್ಲಿ ಶೇ.27) ಮುಸ್ಲಿಂ ವಿರೋಧಿ ಭಾವನೆಗಳನ್ನು ಉದ್ರೇಕಿಸಲು ಅದಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ. ಭಾರತದ ಮೂರು ಮತ್ತು ನಾಲ್ಕನೇ ಅತಿ ಹೆಚ್ಚಿನ ಜನಸಾಂದ್ರತೆ ಇರುವ ರಾಜ್ಯಗಳಾಗಿರುವ ಬಿಹಾರ ಮತ್ತು ಪ. ಬಂಗಾಳಗಳಲ್ಲಿ ಭಾರತದ ಶೇ.16ರಷ್ಟು ಜನ ವಾಸ ಮಾಡುತ್ತಾರೆ. ಇದು ಸಾಪೇಕ್ಷವಾಗಿ ಹಿಂದುಳಿದ ಪ್ರದೇಶಗಳಾಗಿದ್ದು ಕೈಗಾರೀಕರಣದ ಗತಿ ಅತಿ ಕಡಿಮೆ ಇದ್ದರೆ ಬಡತನದ ದರ ಮಾತ್ರ ಅತಿ ಹೆಚ್ಚಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಪ್ರತಿರೋಧದ ಅಲೆ ಹಾಗೂ ಅಭಿವೃದ್ಧಿ ಮತ್ತು ಉದ್ಯೋಗಗಳ ಜನಪ್ರಿಯ ಭರವಸೆಗಳ ಬೆನ್ನೇರಿ 2014ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ತನ್ನ ಆಡಳಿತಾವಧಿಯಲ್ಲಿ ಜನರ ಬದುಕಿನಲ್ಲಿ ಯಾವುದೇ ಬದಲಾವಣೆ ತರುವಲ್ಲಿ ವಿಫಲವಾಗಿರುವ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜಾತಿ ಮೇಲರಿಮೆ ಮತ್ತು ಕೋಮು ಸಂಘರ್ಷಗಳನ್ನು ಹುಟ್ಟುಹಾಕುತ್ತಾ ಜನತೆಯಲ್ಲಿ ದ್ವೇಷ ಭಾವನೆಯನ್ನು ಕೆರಳಿಸಲು ನಿರಂತರವಾಗಿ ಯತ್ನಿಸುತ್ತಿದೆ. ಬಿಹಾರ ಮತ್ತು ಬಂಗಾಳದ ಸಾಮಾನ್ಯ ಜನರು ಈ ಬಗೆಯ ಹಿಂಸಾಚಾರ ಮತ್ತು ಕೋಮುವಾದಿ ಪ್ರಚಾರಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ಹಿಂಸಾಚಾರಗಳನ್ನು ವಿರೋಧಿಸುವ ಬದಲಿಗೆ ತಮ್ಮದೇ ಆದ ಮೃದು ಹಿಂದುತ್ವ ನೀತಿಯ ಮೂಲಕ ಬಿಜೆಪಿಯ ಜೊತೆ ಸ್ಪರ್ಧೆಗಿಳಿದಿವೆ. ಇನ್ನು ತನ್ನ ಒಕ್ಕೂಟದ ಪಾಲುದಾರ ಪಕ್ಷವಾದ ಬಿಜೆಪಿಯ ಮೇಲೆ ಯಾವುದೇ ನಿಯಂತ್ರಣವನ್ನು ಸಾಧಿಸಲು ವಿಫಲವಾಗಿರುವ ಜೆಡಿಯುನಂಥ ಪಕ್ಷಗಳು ತಟಸ್ಥ ಧೋರಣೆಯನ್ನು ಅನುಸರಿಸುತ್ತಿವೆ. ವಿರೋಧ ಪಕ್ಷಗಳು ಈ ಸಂದರ್ಭವನ್ನು ಬಳಸಿಕೊಂಡು ಬಿಜೆಪಿಯ ಕೋಮುವಾದಿ ರಾಜಕೀಯವನ್ನು ಸೋಲಿಸಲು ಬಲವಾದ ರಾಜಕೀಯ ಮತ್ತು ಸೈದ್ಧಾಂತಿಕ ಪರ್ಯಾಯಗಳನ್ನು ಒದಗಿಸದಿದ್ದರೆ ದೇಶಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಕೃಪೆ: Economic and Political Weekly

ಈ ಎರಡೂ ಪೂರ್ವ ರಾಜ್ಯಗಳಿಗೆ ಸುದೀರ್ಘವಾದ ಬಹುತ್ವ ಧಾರ್ಮಿಕ ಪರಂಪರೆಯಿದ್ದು ಕಳೆದ ಹಲವಾರು ದಶಕಗಳಿಂದ ಯಾವುದೇ ದೊಡ್ಡ ಕೋಮು ಗಲಭೆಗಳನ್ನು ಕಂಡಿರಲಿಲ್ಲ. ಆ ರಾಜ್ಯಗಳಲ್ಲಿ ರಾಮನವಮಿಯು ಅಂತಹ ದೊಡ್ಡ ಆಚರಣೆಯೇನೂ ಆಗಿರಲಿಲ್ಲ. ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಶೀಘ್ರವಾಗಿ ಬದಲಾಗುತ್ತಿದ್ದು ಆಕ್ರಮಣಕಾರಿ ಬೀದಿ ಮೆರವಣಿಗೆಗಳು ನಡೆಯುತ್ತಿವೆ ಮತ್ತು ಅದನ್ನು ಬಿಜೆಪಿಯು ತನ್ನ ಶಕ್ತಿ ಪ್ರದರ್ಶನದ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಈ ವಿದ್ಯಮಾನವು ಇತರ ರಾಜ್ಯಗಳಲ್ಲೂ ಸಂಭವಿಸುತ್ತಿದೆ.

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ