ಇದು ಅಂಬೇಡ್ಕರ್‌ಗೆ ನೀಡುವ ಗೌರವವೇ?

Update: 2018-04-09 18:35 GMT

ಮಾನ್ಯರೇ,

ಅಂಬೇಡ್ಕರ್‌ಗೆ ತಮ್ಮ ಸರಕಾರ ನೀಡಿದ್ದಷ್ಟು ಗೌರವ ಯಾರೂ ನೀಡಿಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಹೇಳಿಕೆ ಕಣ್ಣೊರೆಸುವ ತಂತ್ರವಾಗಿದೆ. ಸರಕಾರ ಅಂಬೇಡ್ಕರ್ ಆದರ್ಶಗಳನ್ನು ತನ್ನ ಆಡಳಿತದಲ್ಲಿ ಪಾಲಿಸುತ್ತಿದ್ದರೆ ಅದರ ಅಧಿಕಾರಾವಧಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗಳು ಯಾಕೆ ಧ್ವಂಸಗೊಳ್ಳುತ್ತಿವೆ? ವಿಶೇಷವೆಂದರೆ ಅವರ ಹೇಳಿಕೆಯ ಬೆನ್ನಲ್ಲೇ ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ ಹಾಗೂ ರಾಜಸ್ಥಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಅಲ್ಲದೆ ಪ್ರತಿದಿನವೆಂಬಂತೆ ಪ್ರತಿಮೆಗಳು ಉರುಳುವ ಸುದ್ದಿಗಳು ಬರುತ್ತಿವೆ. ಈ ರಾಜ್ಯಗಳಲ್ಲಿ ಪ್ರಧಾನಿಯವರದೇ ಪಕ್ಷದ ಸರಕಾರವಿದೆ. ಆದರೂ ಅಂಬೇಡ್ಕರ್‌ರ ಪ್ರತಿಮೆಗಳು ಧ್ವಂಸಗೊಳ್ಳುತ್ತಿರುವುದಕ್ಕೆ ಏನೆನ್ನಬೇಕು? ಸಾಂವಿಧಾನಿಕ ಮೌಲ್ಯಗಳನ್ನು ಗಂಭೀರವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಸರಕಾರಕ್ಕಿದೆ. ಆದರೆ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆಯೇ? ಪ್ರಧಾನಿಗಳ ಪಕ್ಷದ ನಾಯಕರು, ಸರಕಾರದ ಮಂತ್ರಿಗಳು ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಗಮನಿಸಿದರೆ ಸರಕಾರ ಎಷ್ಟರ ಮಟ್ಟಿಗೆ ಸಂವಿಧಾನ ಶಿಲ್ಪಿಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಗೌರವಿಸಿದೆ ಎಂಬುದು ಜಗಜ್ಜಾಹೀರಾಗುತ್ತದೆ.
ಪ್ರಧಾನಿ ತಾವು ದಲಿತರ ಹಕ್ಕುಗಳ ರಕ್ಷಣೆಗೆ ಬದ್ಧರೆಂದು ಹೇಳುತ್ತಾರೆ. ಆದರೆ ಅವರು ಈಗ ಗೊಂದಲದಲ್ಲಿರುವ ಎಸ್ಸಿ/ಎಸ್ಟಿ ಕಾಯ್ದೆಯ ಬಗ್ಗೆ ಸುಪ್ರೀಂಕೋರ್ಟ್ ಮುಂದೆ ತನ್ನ ಗಟ್ಟಿ ನಿಲುವನ್ನು ವ್ಯಕ್ತಪಡಿಸಿದ್ದಾರೆಯೇ?
ಸುಪ್ರೀಂಕೋರ್ಟ್ ತೀರ್ಪುನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಲವು ಮಂದಿ ಮೃತಪಟ್ಟರು. ಪ್ರತಿಭಟನೆಯಲ್ಲಿ ಭಾಗವಹಿಸಿದ ದಲಿತರನ್ನು ಗುರುತು ಹಿಡಿದು ಕೇಸು ದಾಖಲಿಸಲಾಗುತ್ತಿದೆಯೆಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಹೀಗಿರುವಾಗ ಪ್ರಧಾನಿಯ ಮಾತನ್ನು ಅರಗಿಸಿಕೊಳ್ಳಲು ಅಥವಾ ನಂಬಲು ಸಾಧ್ಯವೇ?

Similar News