ದಲಿತರ ಮೇಲೆ ಸಂಘಟಿತ ದಾಳಿ

Update: 2018-04-10 04:11 GMT

ಅಂಬೇಡ್ಕರ್ ಚಿಂತನೆಯ ತಳಹದಿಯ ಮೇಲೆ ಸಂಘಟಿತವಾಗುತ್ತಿರುವ ದಲಿತ ಶಕ್ತಿಯನ್ನು ಜೀರ್ಣಿಸಿಕೊಳ್ಳುವ ಸರ್ವ ಪ್ರಯತ್ನಗಳೂ ವಿಫಲವಾದ ಬಳಿಕ ಮೇಲ್ಜಾತೀಯ ಶಕ್ತಿಗಳು ದಲಿತರ ವಿರುದ್ಧ ಬಹಿರಂಗ ಕದನವೊಂದನ್ನು ಸಾರಲು ಹೊರಟಿದೆಯೆ? ದೈಹಿಕ ಬಲದಿಂದ ದಲಿತರ ಸಂಘಟನೆಗಳನ್ನು, ಹೋರಾಟಗಳನ್ನು ಮಟ್ಟಹಾಕಲು ಯತ್ನಿಸುತ್ತಿವೆಯೆ? ಇಂತಹದೊಂದು ಪ್ರಶ್ನೆ ಇತ್ತೀಚಿನ ‘ಭಾರತ್ ಬಂದ್’ ಪ್ರತಿಭಟನೆಯ ಬಳಿಕ ಮಹತ್ವ ಪಡೆದುಕೊಂಡಿದೆ. ದಲಿತ ದೌರ್ಜನ್ಯ ಕಾಯ್ದೆ ದುರುಪಯೋಗವಾಗುತ್ತಿದೆ ಎಂಬ ನೆಪವೊಡ್ಡಿ ಅದನ್ನು ದುರ್ಬಲಗೊಳಿಸುವ ಸಂಚಿನ ವಿರುದ್ಧ ದೇಶಾದ್ಯಂತ ದಲಿತ ಸಂಘಟನೆಗಳು ‘ಭಾರತ್ ಬಂದ್’ ಆಚರಿಸಿದವು.

ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ದಿನಗಳಲ್ಲಿ ಆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹೇಗೆ ಎನ್ನುವುದನ್ನು ನ್ಯಾಯಾಲಯ ಚಿಂತಿಸಬೇಕೇ ಹೊರತು, ಅದನ್ನು ದುರ್ಬಲಗೊಳಿಸುವುದಲ್ಲ ಎನ್ನುವುದು ಅವರ ಆಗ್ರಹವಾಗಿತ್ತು. ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಹೋಲಿಸಿದರೆ ಈ ಕಾನೂನಿನ ದುರುಪಯೋಗ ಏನೇನೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಈ ಕಾನೂನನ್ನು ಪರಿಣಾಮಕಾರಿಯಾಗಿ ಬಳಕೆಯಾಗದಂತೆ ನೋಡಿಕೊಳ್ಳುವಲ್ಲಿ ನಮ್ಮ ಕಾನೂನು ಯಶಸ್ವಿಯಾಗಿರುವುದೇ, ದಲಿತರ ಮೇಲಿನ ದೌರ್ಜನ್ಯ ಹೆಚ್ಚಲು ಕಾರಣ ಎನ್ನುವುದು ಸಂಘಟನೆಗಳು ಮತ್ತು ಹೋರಾಟಗಾರರ ವಾದವಾಗಿತ್ತು. ಈ ನಿಟ್ಟಿನಲ್ಲಿ ಉತ್ತರಭಾರತದಾದ್ಯಂತ ದಲಿತರು ಸಂಘಟಿತರಾಗಿ ಬೀದಿಗಿಳಿದರು. ಆದರೆ ಭಾರತ ಬಂದ್ ಸಂದರ್ಭದಲ್ಲಿ ದಲಿತರ ಪ್ರತಿಭಟನೆಯನ್ನು ಬಗ್ಗು ಬಡಿಯಲು ಯತ್ನಿಸಿರುವುದು ಪೊಲೀಸರು ಮಾತ್ರವಲ್ಲ, ಮೇಲ್ಜಾತಿಯ ರಾಜಕೀಯ ಮುಖಂಡರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೀದಿಗಿಳಿದರು. ದಲಿತರ ಪ್ರತಿಭಟನೆ ಜಾತಿ ಸಂಘರ್ಷವಾಗಿ ಹಲವೆಡೆ ಬದಲಾಯಿತು.

ದಲಿತರ ಹೋರಾಟಗಳನ್ನು ಮೇಲ್‌ಜಾತಿಯ ನಾಯಕರು ಹೀಗೆ ಬೀದಿಗಿಳಿದು ದಮನಿಸಲು ಯತ್ನಿಸಿರುವುದು ಇದೇ ಮೊದಲ ಬಾರಿ ಇರಬೇಕು. ಕೋರೆಗಾಂವ್ ವಿಜಯೋತ್ಸವ ಸಂದರ್ಭದಲ್ಲೂ ಇದೇ ನಡೆದಿತ್ತು. ಪೇಶ್ವೆ ಬಾಜೀರಾಯನ ವಿರುದ್ಧ ಮಹಾರ್ ದಲಿತರು ಸಾಧಿಸಿದ ವಿಜಯವನ್ನು ನೆನಪಿಸುವ ಕೋರೆಗಾಂವ್ ದಿನವನ್ನು ಸಂಘರ್ಷದ ದಿನವಾಗಿ ಸಂಘಪರಿವಾರದ ಜನರು ಪರಿವರ್ತಿಸಿದರು. ಸಮಾರಂಭಕ್ಕೆ ಭಾಗವಹಿಸಲು ಹೊರಟಿದ್ದ ದಲಿತರ ಮೇಲೆ ನೇರವಾಗಿ ದಾಳಿಗಿಳಿದರು. ವಿಪರ್ಯಾಸವೆಂದರೆ, ಈ ಸಂಘರ್ಷದಲ್ಲಿ ಭಾಗಿಯಾದ ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಗೊಳಿಸಲು ಸರಕಾರವೇ ಅತ್ಯಾಸಕ್ತಿವಹಿಸಿದೆ. ಈವರೆಗೆ ದೇಶದಲ್ಲಿ ದಲಿತರ ಮೇಲೆ ಅಲ್ಲಲ್ಲಿ ಅಸ್ಪಶ್ಯತೆ, ಶೋಷಣೆಗಳು ವರದಿಯಾಗುತ್ತಿದ್ದವು. ಆದರೆ ಸಾಮೂಹಿಕವಾಗಿ ದಾಳಿ ನಡೆಯುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಬಿಹಾರದಲ್ಲಿ ಮೇಲ್ಜಾತಿಯ ಜಮೀನ್ದಾರರು ರಣವೀರ ಸೇನೆಯನ್ನು ಕಟ್ಟಿಕೊಂಡು ದಲಿತರ ಮೇಲೆ ನಡೆಸುತ್ತಿದ್ದ ಸಾಮೂಹಿಕ ದಾಳಿ ಮತ್ತೆ ಮರುಕಳಿಸಲಿದೆಯೇ ಎನ್ನುವ ಆತಂಕ ಇದೀಗ ದೇಶದ ದಲಿತರದ್ದಾಗಿದೆ.

 ಭಾರತ್ ಬಂದ್ ಬಳಿಕ ಉತ್ತರ ಪ್ರದೇಶದಲ್ಲಿ ದಲಿತರು ಸಾಮೂಹಿಕವಾಗಿ ಗ್ರಾಮ ತೊರೆಯುತ್ತಿದ್ದಾರೆ. ಉತ್ತರ ಪ್ರದೇಶದ ಶೋಭಾಪುರದಲ್ಲಿ 28ರ ಹರೆಯದ ಗೋಪಿ ಪಾರ್ಯ ಎಂಬ ದಲಿತ ಯುವಕನನ್ನು ಮೇಲ್‌ಜಾತಿಯ ಜನರು ಗುಂಡಿಟ್ಟುಕೊಂದು ಹಾಕಿದ್ದಾರೆ. ಈ ಯುವಕ, ಭಾರತ ಬಂದ್‌ನ ಸಕ್ರಿಯ ನೇತೃತ್ವ ವಹಿಸಿದ್ದ ಎನ್ನಲಾಗಿದೆ. ದಲಿತ ಸಂಘಟನೆಗಳು ಹೇಳುವಂತೆ, ಭಾರತ ಬಂದ್ ವೇಳೆ ಶೋಭಾಪುರದಲ್ಲಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ 83 ದಲಿತ ಯುವಕರ ಹೆಸರುಗಳನ್ನು ಹಿಟ್ ಲಿಸ್ಟ್‌ನಲ್ಲಿ ಸೇರಿಸಲಾಗಿದೆಯಂತೆ.

ಇದೀಗ ಆ ಪಟ್ಟಿಯಲ್ಲಿರುವ ಬಹುತೇಕರು ಗ್ರಾಮ ಬಿಟ್ಟು ಇತರೆಡೆಗಳಲ್ಲಿ ಅವಿತುಕೊಂಡಿದ್ದಾರೆ. ಮೇಲ್ಜಾತಿಯ ಕೆಂಗಣ್ಣನ್ನು ಎದುರಿಸುತ್ತಾ, ಇಲ್ಲಿನ ದಲಿತರು ಬದುಕುತ್ತಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ ಮೇಘಾಂವ್ ಹಾಗೂ ಭಿಂದ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ದಲಿತರಾದ ಪ್ರದೀಪ್ (22), ಆಕಾಶ್ (15) ಅವರನ್ನು ಮೇಲ್ಜಾತಿಯ ಗುಂಪು ಗುಂಡಿಟ್ಟು ಹತ್ಯೆಗೈದಿದೆ. ಮೇಲ್ಜಾತಿಗೆ ಸೇರಿದ ಸೋನು ಬೈಶಂದರ್, ಮೋನು, ಬಲ್ಲು ರಾಥೋಡ್ ಛಾವಣಿಯಲ್ಲಿ ನಿಂತು ಇವರಿಗೆ ಗುಂಡು ಹಾರಿಸಿದರು ಎಂದು ಪ್ರಥಮ ಮಾಹಿತಿ ವರದಿ ಹೇಳುತ್ತದೆ. ಆಕಾಶ್ ಜಾತವ್‌ನ ಸಾವಿನ ಎಫ್‌ಐಆರ್‌ನಲ್ಲೂ ಇದೇ ಹೆಸರು ಕಂಡು ಬಂದಿದೆ. ಈ ಮೂವರು ನಾಪತ್ತೆಯಾಗಿದ್ದಾರೆ. ಪ್ರತಿಭಟನೆಯ ಬಳಿಕ 40 ಹರೆಯದ ದಶರಥ ಜಾತವ್ ಅವರ ಮೃತದೇಹ ಭಿಂದ್‌ನ ಹೊಲದಲ್ಲಿ ಪತ್ತೆಯಾಗಿತ್ತು. ಮೇಲ್ಜಾತಿಯವರು ಜಾತವ್‌ರನ್ನು ಹತ್ಯೆಗೈದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.

ಗ್ವಾಲಿಯರ್‌ನಲ್ಲಿ ಚಹಾದಂಗಡಿ ನಡೆಸುತ್ತಿದ್ದ 22 ವರ್ಷದ ದೀಪಕ್ ಜಾತವ್ ನಿಗೂಢವಾಗಿ ಹತ್ಯೆಯಾಗಿದ್ದಾರೆ. ಅವರು ಚಹಾದಂಗಡಿ ಸಮೀಪ ನಿಂತಿದ್ದಾಗ ಎರಡು ಗುಂಡು ಅವರ ಹೊಟ್ಟೆಯನ್ನು ಹಾಗೂ ಒಂದು ಗುಂಡು ಅವರ ತಲೆಯನ್ನು ಸೀಳಿವೆ. ಇವೆಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಈ ಹತ್ಯೆಗೆ ಸಂಬಂಧಿಸಿ ಈವರೆಗೆ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗಿಲ್ಲ. ಒಂದೆಡೆ ನ್ಯಾಯಾಲಯ ಹೇಳುತ್ತದೆ ‘‘ದಲಿತ ದೌರ್ಜನ್ಯ ಕಾಯ್ದೆಯು ವ್ಯಾಪಕವಾಗಿ ದುರುಪಯೋಗವಾಗುತ್ತಿದೆ’’ ಎಂದು. ಇನ್ನೊಂದೆಡೆ ನ್ಯಾಯ ಕೇಳಿದ ದಲಿತರನ್ನು ಬರ್ಬರವಾಗಿ ಕೊಂದು ಹಾಕಲಾಗಿದೆ. ಆದರೆ ಈವರೆಗೆ ಒಬ್ಬರನ್ನೂ ಬಂಧಿಸಲಾಗಿಲ್ಲ. ದಲಿತರ ಕುರಿತಂತೆ ನಮ್ಮ ಕಾನೂನು ಎಷ್ಟು ಕಾಳಜಿಯನ್ನು ಹೊಂದಿದೆ ಎನ್ನುವುದನ್ನು ಇದು ಹೇಳುತ್ತದೆ. ಇದೀಗ ಕೇಂದ್ರ ಸರಕಾರದೊಳಗಿರುವ ಸಂಸದರೇ ಒಬ್ಬೊಬ್ಬರಾಗಿ ದಲಿತ ವಿರೋಧಿ ನೀತಿಗಳ ವಿರುದ್ಧ ಧ್ವನಿಯೆತ್ತಿದ್ದಾರೆ.

ಕೇಂದ್ರದಿಂದ ದಲಿತರ ಕಡೆಗಣನೆಯಾಗುತ್ತಿದೆ ಎಂದು ಒಬ್ಬ ಸಂಸದರು ಹೇಳಿಕೆ ನೀಡಿದ್ದರೆ, ಇನ್ನೋರ್ವ ದಲಿತ ಸಂಸದರು, ಭಾರತ ಬಂದ್ ಬಳಿಕ ದಲಿತರನ್ನು ಗುರಿಯಾಗಿಟ್ಟುಕೊಂಡು ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಕುರಿತಂತೆ ತುಟಿ ಬಿಚ್ಚಿಲ್ಲ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಹೆಸರನ್ನು ಬದಲಿಸುವ ಮೂಲಕ, ಹಾಗೆಯೇ ಕೇಸರಿ ಬಣ್ಣದಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ದಲಿತರನ್ನು ಅಣಕಿಸಲಾಗುತ್ತಿದೆ. ಜೊತೆ ಜೊತೆಗೆ ಹಲವೆಡೆ ಅಂಬೇಡ್ಕರ್ ಪ್ರತಿಮೆಗಳ ಮೇಲೆ ದಾಳಿ ನಡೆಯುತ್ತಿದೆ.

ಇವೆಲ್ಲವೂ ಮುಂದಿನ ದಿನಗಳು ದಲಿತರ ಪಾಲಿಗೆ ಅಪಾಯಕಾರಿಯಾಗಲಿವೆ ಎನ್ನುವುದರ ಸೂಚನೆಯಾಗಿದೆ. ಮೇಲ್ವರ್ಗದ ಶೂದ್ರರನ್ನು ಬಳಸಿಕೊಂಡು ದಲಿತರ ಮೇಲೆ ದಾಳಿ ನಡೆಸಿ ಅವರ ಶಕ್ತಿಯನ್ನು ಮಟ್ಟಹಾಕುವುದು ಆರೆಸ್ಸೆಸ್‌ನಂತಹ ಸಂಘಟನೆಯ ಉದ್ದೇಶವಾಗಿದೆ. ಇದನ್ನು ವಿಫಲಗೊಳಿಸಬೇಕಾದರೆ ಅಹಿಂದ ಶಕ್ತಿಗಳು, ಜಾತ್ಯತೀತ ಶಕ್ತಿಗಳು ದೇಶಾದ್ಯಂತ ಭಿನ್ನಮತ ತೊರೆದು ಒಂದಾಗಬೇಕಾಗಿದೆ. ಈ ದೇಶದಲ್ಲಿ ದಲಿತರಷ್ಟೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರೂ ಶೋಷಣೆಗೊಳಗಾದವರು ಮತ್ತು ಅಂಬೇಡ್ಕರ್ ಸಂವಿಧಾನ ಅವರೆಲ್ಲರ ಪಾಲಿಗೆ ಬಿಡುಗಡೆಯ ಗ್ರಂಥವಾಗಿದೆ. ಆ ಗ್ರಂಥದ ತಳಹದಿಯ ಮೇಲೆ ಈ ಮೂರು ವರ್ಗ ಮತ್ತೆ ಒಂದಾಗುವ ಕಾಲ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News