ಬಿಜೆಪಿ ನಾಯಕರ ಮೆಚ್ಚಿನ 'ದ ಟ್ರೂ ಪಿಕ್ಚರ್' ವರದಿಯಲ್ಲಿ ಸತ್ಯವೆಷ್ಟು?, ಸುಳ್ಳೆಷ್ಟು?

Update: 2018-04-10 09:09 GMT
ಸಾಂದರ್ಭಿಕ ಚಿತ್ರ

"ಸಿದ್ದರಾಮಯ್ಯ ಅವರ ಕರ್ನಾಟಕದಲ್ಲಿ ಕಾನೂನು & ಸುವ್ಯವಸ್ಥೆ ಸ್ಥಿತಿ ಏನು?" ಇದು 'ದ ಟ್ರೂ ಪಿಕ್ಚರ್' ವೆಬ್ ಸೈಟ್‍ನಲ್ಲಿ ಪ್ರಕಟವಾದ ಲೇಖನದ ಶೀರ್ಷಿಕೆ. ಕೆಲ ದಿನಗಳ ಹಿಂದೆ ಕೇಂದ್ರ ಸಚಿವರು ಇದನ್ನು ಉತ್ಸಾಹದಿಂದ ಶೇರ್ ಮಾಡಿದ್ದರು. ವಿಧಾನಸಭಾ ಚುನಾವಣೆಗೆ ರಂಗ ಸಜ್ಜಾಗಿರುವ ಹಿನ್ನೆಲೆಯಲ್ಲಿ, ಇದು ಅತ್ಯಂತ ಪ್ರಸ್ತುತ ಪ್ರಶ್ನೆ ಮತ್ತು 'ದ ಟ್ರೂ ಪಿಕ್ಚರ್' ಈ ಬಗ್ಗೆ ಯಾವ ನಿರ್ಧಾರಕ್ಕೆ ಬಂದಿದೆ ಎನ್ನುವ ಕುತೂಹಲ ಸಹಜ. ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಈ ಲೇಖನದಲ್ಲಿ ವಿವರಗಳಿವೆ. "ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಅಧಿಕ. ಇದು ರಾಜ್ಯದಲ್ಲಿ ದಲಿತರು ಮತ್ತು ಇತರ ತುಳಿತಕ್ಕೊಳಗಾದ ಸಮುದಾಯಗಳ ಸುರಕ್ಷೆ ದಾಖಲೆಯ ಪ್ರತಿಬಿಂಬ" ಎಂದು ಲೇಖನ ವಿವರಿಸಿದೆ. ನಿರ್ಣಯಕ್ಕೆ ಪೂರಕವಾಗಿ ಈ ಕೆಳಗಿನ ಪೂರಕ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದೆ.

'ದ ಟ್ರೂ ಪಿಕ್ಚರ್' ವರದಿಗೆ ಸಂಬಂಧಿಸಿದಂತೆ ವರದಿಯಲ್ಲಿರುವ ಸತ್ಯಾಂಶಗಳೆಷ್ಟು ಹಾಗು ಸುಳ್ಳೆಷ್ಟು ಎನ್ನುವುದನ್ನು altnews.in ವರದಿ ಮಾಡಿದೆ. 

"ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಯ ದೊಡ್ಡ ಸೂಚಕವೆಂದರೆ ಸಾಮಾಜಿಕ ಸಾಮರಸ್ಯ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷೆ ಹದಗೆಟ್ಟಿದೆ ಎನ್ನುವುದು ಈಗಾಗಲೇ ತಿಳಿದಿದೆ. ಸಾಮಾಜಿಕ ಸಾಮರಸ್ಯವನ್ನು ತಿಳಿಯಲು ಇನ್ನೊಂದು ಮಾನದಂಡವೆಂದರೆ ದಲಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಅಪರಾಧ ಪ್ರಕರಣಗಳು" ಎಂದು 'ದ ಟ್ರೂ ಪಿಕ್ಚರ್' ಹೇಳಿದೆ. ಇದಕ್ಕೆ ಸಂಬಂಧಿಸಿ ಅದು ಒದಗಿಸಿದ ಅಪರಾಧ ಪ್ರಕರಣಗಳ ಸಂಖ್ಯೆಗಳು ಈ ಕೆಳಗಿನಂತಿವೆ.

ರಾಜ್ಯ             -  ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು

ಕರ್ನಾಟಕ        - 1869 ಪ್ರಕರಣಗಳು

ಮಹಾರಾಷ್ಟ್ರ     - 1750 ಪ್ರಕರಣಗಳು

ತೆಲಂಗಾಣ       - 1529 ಪ್ರಕರಣಗಳು

ಗುಜರಾತ್       - 1322 ಪ್ರಕರಣಗಳು

ತಮಿಳುನಾಡು   - 1291 ಪ್ರಕರಣಗಳು

ಕೇರಳ             - 810 ಪ್ರಕರಣಗಳು

ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಅಧಿಕ. ಇದು ರಾಜ್ಯದಲ್ಲಿ ದಲಿತರು ಮತ್ತು ಇತರ ತುಳಿತಕ್ಕೊಳಗಾದ ಸಮುದಾಯಗಳ ಸುರಕ್ಷೆ ದಾಖಲೆಯ ಪ್ರತಿಬಿಂಬ ಎಂದು ವರದಿ ಹೇಳಿದೆ. 

ಈ ಅಂಕಿ ಅಂಶಗಳ ಆಧಾರದಲ್ಲಿ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವೆಂದರೆ, "ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕಾರ್ಯದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕವನ್ನು ಎಲ್ಲರ ಸೇರ್ಪಡೆಯ ಪ್ರಗತಿಯ ಮಾದರಿ ರಾಜ್ಯ ಎಂದು ಬಣ್ಣಿಸಿದ್ದಾರೆ. ಆದರೆ ದಲಿತರ ಮೇಲೆ ನಡೆದಿರುವ ದೌರ್ಜನ್ಯವನ್ನು ನೋಡಿದರೆ, ಈ ಮಾದರಿ ಎಲ್ಲರನ್ನೂ ಒಳಗೊಳ್ಳುವಂತದ್ದಲ್ಲ. ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಳವಾಗಿರುವುದನ್ನು ಹಿಂದಿನ ಲೇಖನದಲ್ಲಿ ವಿವರಿಸಲಾಗಿದೆ"

ಈ ಅಂಕಿ ಅಂಶಗಳನ್ನು ಎನ್‍ಸಿಆರ್ ಬಿಯ "ಭಾರತದಲ್ಲಿ ಅಪರಾಧಗಳು- 2016" ವರದಿಯಿಂದ ಪಡೆಯಲಾಗಿದೆ. ಇದು ನಿಖರ ಕೂಡಾ. ಆದರೆ ಇದು ವಾಸ್ತವ ಚಿತ್ರಣವನ್ನು ಬಿಂಬಿಸಿದೆಯೇ? ಅಂಕಿ ಅಂಶಗಳನ್ನು ನೋಡಿದಾಗ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳತ್ತ ವೆಬ್‍ಸೈಟ್ ಪ್ರಸ್ತುತಪಡಿಸಿದ ಅಭಿಪ್ರಾಯದ ಬಗ್ಗೆ ಗಮನ ಹರಿಸೋಣ.

ಆರು ರಾಜ್ಯಗಳ ಅಂಕಿ ಅಂಶ ಮಾತ್ರ ಏಕೆ?:  ಈ ಲೇಖನ ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸಮಗ್ರ ಚಿತ್ರಣ ನೀಡಿಲ್ಲ. ಕೇವಲ ಆರು ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನೆರೆ ರಾಜ್ಯಗಳು ಎಂದು ಹೋಲಿಸಿದೆ. ಈ ಸಿದ್ಧಾಂತದ ಪ್ರಕಾರ ಹೋದರೂ, ಆಂಧ್ರಪ್ರದೇಶ ಏಕೆ ಈ ನೆರೆ ರಾಜ್ಯಗಳ ಪಟ್ಟಿಯಿಂದ ಮಾಯವಾಗಿದೆ?, ಇನ್ನೊಂದು ನೆರೆ ರಾಜ್ಯವಾದ ಗೋವಾ ಗಾತ್ರದಲ್ಲಿ ಚಿಕ್ಕದು ಎಂಬ ಕಾರಣಕ್ಕೆ ಬಿಟ್ಟಿರಬಹುದು. ಆದರೆ ನೆರೆ ರಾಜ್ಯವಲ್ಲದಿದ್ದರೂ, ಗುಜರಾತ್ ಏಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ?, ಕೇವಲ ನೆರೆ ರಾಜ್ಯಗಳ ಜತೆ ಮಾತ್ರ ಏಕೆ ಹೋಲಿಕೆ?, ಇಲ್ಲಿ ಮುಚ್ಚಿಡುವಂಥದ್ದು ಏನಾದರೂ ಇದೆಯೇ?.... ಪೂರ್ಣ ಚಿತ್ರಣದ ಬಗ್ಗೆ ವಿವರ ಇಲ್ಲಿದೆ.

ದಲಿತರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕದ ಸ್ಥಾನ ಏನು?

ಎಲ್ಲ ರಾಜ್ಯಗಳನ್ನು ಪರಿಗಣಿಸಿದರೆ, ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲಿ ಆರನೇ ಸ್ಥಾನದಲ್ಲಿದೆ. ಆದರೆ "ದ ಟ್ರೂ ಪಿಕ್ಚರ್" ಲೇಖನದಲ್ಲಿ ಅಗ್ರ ಐದು ರಾಜ್ಯಗಳ ಬಗ್ಗೆ ಉಲ್ಲೇಖವೇ ಇಲ್ಲ.

ದಲಿತರ ಮೇಲಿನ ಅಪರಾಧ ಪ್ರಕರಣಗಳ ದರದ ಅನ್ವಯ ಹೋಲಿಕೆ ಹೇಗೆ?

ರಾಜ್ಯಗಳ ನಡುವೆ ಜನಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಆದ್ದರಿಂದ ಕೇವಲ ಪ್ರಕರಣಗಳ ಸಂಖ್ಯೆಯನ್ನಷ್ಟೇ ನೋಡುವುದು ನ್ಯಾಯಸಮ್ಮತ ಎನಿಸದು. ಉತ್ತರ ಪ್ರದೇಶದ ಪ್ರಕರಣಗಳ ಸಂಖ್ಯೆ ಹಿಮಾಚಲ ಪ್ರದೇಶಕ್ಕೆ ಹೋಲಿಸಿದರೆ ಅತ್ಯಧಿಕವಾಗಿರಬಹುದು. ಎರಡು ರಾಜ್ಯಗಳಲ್ಲಿ ಇರುವ ಜನಸಂಖ್ಯೆಯ ಅಂತರವೇ ಇದಕ್ಕೆ ಕಾರಣ. ಆದ್ದರಿಂದ ರಾಜ್ಯಗಳ ನಡುವೆ ಹೋಲಿಕೆ ಮಾಡಬೇಕಾದರೆ, ಅಪರಾಧದ ದರವನ್ನು ನಾವು ನೋಡಬೇಕು. ಅಂದರೆ ರಾಜ್ಯದಲ್ಲಿ ಇರುವ ಪರಿಶಿಷ್ಟ ಜಾತಿಯ ಜನಸಂಖ್ಯೆಯ ಆಧಾರದಲ್ಲಿ ಇದನ್ನು ಲೆಕ್ಕ ಹಾಕಬೇಕಾಗುತ್ತದೆ.

ಅಪರಾಧದ ದರದ ಆಧಾರದಲ್ಲಿ ದೌರ್ಜನ್ಯಗಳ ಪಟ್ಟಿ

(ಅಪರಾಧ ದರ ಎಂದರೆ ಪ್ರತಿ ಲಕ್ಷ ದಲಿತ ಜನಸಂಖ್ಯೆಯ ಪೈಕಿ ದೌರ್ಜನ್ಯಕ್ಕೆ ಒಳಗಾದವರು)

ಹಿಂದಿನ ವರ್ಷಗಳಲ್ಲಿ ಪರಿಸ್ಥಿತಿ ಏನು?

ಲೇಖನದಲ್ಲಿ ಆಯ್ಕೆ ಮಾಡಲಾದ ಈ ರಾಜ್ಯಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅಪರಾಧದ ಸ್ಥಿತಿ ಏನು ಎನ್ನುವುದನ್ನು ತಿಳಿದರೆ ಸಂಪೂರ್ಣ ಚಿತ್ರಣ ಸಿಗುತ್ತದೆ. ದಲಿತರ ಮೇಲೆ ನಡೆದ ದೌರ್ಜನ್ಯಗಳ ಸಂಖ್ಯೆಯನ್ನು ಪರಿಗಣಿಸಿದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸುಮಾರು ಒಂದೇ ಸ್ಥಿತಿಯಲ್ಲಿವೆ. ಅಂದರೆ ಗಣನೀಯ ಹೆಚ್ಚಳವೂ ಆಗಿಲ್ಲ. ತೀವ್ರ ಇಳಿಕೆಯೂ ಆಗಿಲ್ಲ. 2015ರಲ್ಲಿ ಏರಿಕೆಯನ್ನು ಹೊರತುಪಡಿಸಿದರೆ, ತಮಿಳುನಾಡಿನಲ್ಲಿ ದಲಿತ ದೌರ್ಜನ್ಯ ಪ್ರಮಾಣ ಇಳಿಮುಖವಾಗಿದೆ. 2015ರಲ್ಲಿ ಇಳಿಕೆಯ ಬಳಿಕ, ತೆಲಂಗಾಣದಲ್ಲಿ ಏರಿಕೆ ಕಂಡುಬಂದಿದೆ. ಆದರೆ ಗುಜರಾತ್‍ನಲ್ಲಿ ಮಾತ್ರ 2014 ರಿಂದ 2016ರ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಶೇಕಡ 20.8ರಷ್ಟು ಹೆಚ್ಚಿದೆ.

ಎನ್‍ಸಿಆರ್ ಬಿ ಅಂಕಿ ಅಂಶಗಳನ್ನು ತನಗೆ ಬೇಕಾದಂತೆ ಬಳಸಿಕೊಂಡಿರುವ "ದ ಟ್ರೂ ಪಿಕ್ಚರ್" ಕರ್ನಾಟಕ ದಲಿತರ ಮೇಲಿನ ದೌರ್ಜನ್ಯದಲ್ಲಿ ಅಗ್ರಸ್ಥಾನದಲ್ಲಿದೆ ಎಂಬುದನ್ನು ತಪ್ಪಾಗಿ ಬಿಂಬಿಸಿದೆ. ಜತೆಗೆ ತನಗೆ ಅನುಕೂಲವಾಗುವಂತಹ ಮಾನದಂಡಗಳನ್ನು ಬಳಸಿಕೊಂಡಿದೆ. ಈ ಮಾಹಿತಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿದಾಗ, ಅಪರಾಧ ದರದ ಆಧಾರದಲ್ಲಿ ಅಂದರೆ ಆ ರಾಜ್ಯದಲ್ಲಿರುವ ದಲಿತರ ಸಂಖ್ಯೆಯನ್ನು ಪರಿಗಣಿಸಿದಾಗ, ಕರ್ನಾಟಕ ಅಗ್ರ 10 ರಾಜ್ಯಗಳ ಪಟ್ಟಿಯಲ್ಲೂ ಇಲ್ಲ ಎನ್ನುವುದು ವಾಸ್ತವ. ಕರ್ನಾಟಕದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಳೆದ ಎರಡು ವರ್ಷಗಳ ಅಂಕಿ ಅಂಶಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಬಹುತೇಕ ಯಥಾಸ್ಥಿತಿ ಇದೆ.

"ಟ್ರೂ ಪಿಕ್ಚರ್" ಲೇಖನ ತಪ್ಪುದಾರಿಗೆ ಎಳೆಯುವಂಥದ್ದು. ಕೇಂದ್ರ ಸಚಿವರು ಮತ್ತು ಬಿಜೆಪಿ ಸದಸ್ಯರು ಈ ಅಂಕಿ ಅಂಶಗಳನ್ನು ಪರಿಗಣಿಸದೇ ಅತ್ಯುತ್ಸಾಹದಿಂದ ಈ ವೆಬ್‍ಸೈಟನ್ನು ಉತ್ತೇಜಿಸಿರುವುದು ನಿಜಕ್ಕೂ ವಿಚಿತ್ರ.

Courtesy: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News