ಜಗತ್ತಿನ ಅತಿ ಹಿರಿಯ ಪುರುಷನಾಗಿ ಜಪಾನ್‌ನ ನೊನಕ
ಟೋಕಿಯೊ, ಎ. 10: ಜಪಾನ್‌ನ 112 ವರ್ಷದ ಮಸಾರೊ ನೊನಕ ಅವರನ್ನು ಮಂಗಳವಾರ ಜಗತ್ತಿನ ಅತಿ ಹಿರಿಯ ಪುರುಷ ಎಂಬುದಾಗಿ ಘೋಷಿಸಲಾಗಿದೆ.
1905 ಜುಲೈ 25ರಂದು ಜನಿಸಿದ ನೊನಕ ಅವರಿಗೆ ಜಪಾನ್‌ನ ಉತ್ತರದ ದ್ವೀಪ ಹೊಕ್ಕಾಯಿಡೊದಲ್ಲಿರುವ ಅವರ ಮನೆಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಅಧಿಕಾರಿಗಳು ಜಗತ್ತಿನ ಅತಿ ಹಿರಿಯ ಪುರುಷ ಎಂಬ ಪ್ರಮಾಣಪತ್ರವನ್ನು ನೀಡಿದರು. ಅವರು ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.‘‘ಅವರಿಗೆ ಓಡಾಡಲು ಗಾಲಿಕುರ್ಚಿಯೊಂದು ಬೇಕು. ಉಳಿದಂತೆ ಅವರ ಆರೋಗ್ಯ ಉತ್ತಮವಾಗಿದೆ’’ ಎಂದು ಅವರ ಮೊಮ್ಮಗಳು ಯುಕೊ ನೊನಕ ಹೇಳುತ್ತಾರೆ.
‘‘ಅವರು ಜಪಾನಿ ಅಥವಾ ಪಾಶ್ಚಾತ್ಯ- ಯಾವುದೇ ಮಾದರಿಯ ಸಿಹಿತಿಂಡಿಗಳನ್ನು ತಿನ್ನುತ್ತಾರೆ’’ ಎಂದು ಯುಕೊ ಹೇಳಿದರು. ‘‘ಅವರು ಪ್ರತಿದಿನ ಪತ್ರಿಕೆಗಳನ್ನು ಓದುತ್ತಾರೆ ಹಾಗೂ ಬಿಸಿ ನೀರಿನ ಬುಗ್ಗೆಯಲ್ಲಿ ಆಗಾಗ ಸ್ನಾನ ಮಾಡುತ್ತಾರೆ’’ ಎಂದರು. ಅವರಿಗೆ 7 ಸಹೋದರರು ಮತ್ತು ಓರ್ವ ಸಹೋದರಿ ಇದ್ದಾರೆ. ಅವರು ಸಮೀಪದ ಪಟ್ಟಣ ಅಶೊರೊದಲಿ ವಾಸಿಸುತ್ತಿದ್ದಾರೆ. ನೊನಕ 1931ರಲ್ಲಿ ಹಟ್ಸುನೊ ಅವರನ್ನು ಮದುವೆಯಾದರು. ದಂಪತಿಗೆ ಐವರು ಮಕ್ಕಳಿದ್ದರು. ಸ್ಪೇನ್‌ನ 113 ವರ್ಷದ ಫ್ರಾನ್ಸಿಸ್ಕೊ ನನೇಝ್ ಒಲಿವೇರ ಫೆಬ್ರವರಿಯಲ್ಲಿ ನಿಧನರಾದ ಬಳಿಕ ನೊನಕ ಜಗತ್ತಿನ ಅತಿ ಹಿರಿಯ ಪುರುಷರಾಗಿದ್ದಾರೆ.
ಅತಿ ಹಿರಿಯ ವ್ಯಕ್ತಿಯಾಗಿದ್ದ ಜಮೈಕದ ವಾಯಲೆಟ್ ಬ್ರೌನ್ 2017 ಜುಲೈಯಲ್ಲಿ ನಿಧನರಾದ ಬಳಿಕ, ಆ ಸ್ಥಾನಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಸಕ್ತ ಶೋಧ ನಡೆಸುತ್ತಿದೆ.