ಮೇರಿ ಕೋಮ್ ಫೈನಲ್‌ಗೆ

Update: 2018-04-11 18:46 GMT

ಗೋಲ್ಡ್‌ಕೋಸ್ಟ್, ಎ.11: ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಮೇರಿ ಕೋಮ್ ಮಹಿಳೆಯರ 45-48ಕೆ.ಜಿ. ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಫೈನಲ್‌ಗೆ ತಲುಪಿದ್ದಾರೆ.

ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್ ಆಡುತ್ತಿರುವ 35ರ ಹರೆಯದ ಮೇರಿ ಕೋಮ್ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ.

ಪುರುಷರ ಬಾಕ್ಸಿಂಗ್‌ನಲ್ಲಿ ಗೌರವ್ ಸೋಳಂಕಿ, ವಿಕಾಸ್ ಕ್ರಿಶನ್ ಹಾಗೂ ಮನೀಶ್ ಕೌಶಿಕ್ ಸೆಮಿಫೈನಲ್‌ಗೆ ತಲುಪಿದ್ದಾರೆ.

52 ಕೆ.ಜಿ. ತೂಕ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋಳಂಕಿ ಪಪುವಾ ನ್ಯೂಗಿನಿ ತಂಡದ ಚಾರ್ಲ್ಸ್ ಕೀಮಾರನ್ನು 5-0 ಅಂತರದಿಂದ ಸೋಲಿಸಿದರು. 75 ಕೆಜಿ ತೂಕದ ಕ್ವಾರ್ಟರ್ ಫೈನಲ್‌ನಲ್ಲಿ ವಿಕಾಸ್ ಕ್ರಿಶನ್ ಝಾಂಬಿಯಾದ ಬೆನ್ನಿ ಮುಝಿಯೊರನ್ನು 5-0 ಅಂತರದಿಂದಲೂ, ಮನೀಶ್ ಕೌಶಿಕ್ ಅವರು 60 ಕೆ.ಜಿ. ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಕಾಲುಮ್ ಫ್ರೆಂಚ್‌ರನ್ನು 5-0 ಅಂತರದಿಂದ ಸೋಲಿಸಿದ್ದಾರೆ.

ಇದೇ ವೇಳೆ, 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸರಿತಾ ದೇವಿ ಮಹಿಳೆಯರ 65 ಕೆಜಿ ತೂಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ಅಂಜಾ ಸ್ಟ್ರೀಡ್ಸ್‌ಮನ್ ವಿರುದ್ಧ 0-5 ಅಂತರದಿಂದ ಸೋಲುವುದರೊಂದಿಗೆ ಗೇಮ್ಸ್‌ನಿಂದ ನಿರ್ಗಮಿಸಿದರು. 2014ರಲ್ಲಿ ಕಂಚು ಪದಕ ವಿಜೇತೆ ಪಿಂಕಿ ಸಿಂಗ್ 51 ಕೆ.ಜಿ. ತೂಕ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News