ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್‌ಗೆ ಸುಲಭ ಜಯ

Update: 2018-04-11 18:55 GMT

ಗೋಲ್ಡ್‌ಕೋಸ್ಟ್, ಎ.11: ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸುಲಭ ಜಯ ಸಾಧಿಸಿದ ಭಾರತದ ಅಗ್ರ ಶ್ರೇಯಾಂಕದ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಬುಧವಾರ ಕೇವಲ 18 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಪಂದ್ಯದಲ್ಲಿ ಸಿಂಧು ಫಿಜಿಯ ಅಂಡ್ರಾ ವೈಟ್‌ಸೈಡ್‌ರನ್ನು 21-6, 21-3 ನೇರ ಸೆಟ್‌ಗಳಿಂದ ಸೋಲಿಸಿದರು.

ಸಿಂಧು ಮಂಡಿ ನೋವಿನಿಂದಾಗಿ ಬ್ಯಾಡ್ಮಿಂಟನ್ ಟೀಮ್ ವಿಭಾಗದ ಪಂದ್ಯದಿಂದ ಹೊರಗುಳಿದಿದ್ದರು. ಈ ವಿಭಾಗದಲ್ಲಿ ಭಾರತ ಐತಿಹಾಸಿಕ ಚಿನ್ನ ಜಯಿಸಿದೆ.

ಬ್ಯಾಡ್ಮಿಂಟನ್ ಟೀಮ್ ವಿಭಾಗದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ 2ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಕೂಡ ಕೇವಲ 18 ನಿಮಿಷದಲ್ಲಿ ಕೊನೆಗೊಂಡ 32ನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಎಲ್ಸೀ ಡಿವಿಲಿಯರ್ಸ್‌ರನ್ನು 21-3, 21-1 ಅಂತರದಿಂದ ಸೋಲಿಸಿದರು.

ಋತ್ವಿಕಾ ಗಾಡ್ಡೆ 18 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಘಾನಾದ ಗ್ರೇಸ್ ಅಟಿಪಕಾರನ್ನು 21-5, 21-7 ಅಂತರದಿಂದ ಸೋಲಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್ ಮಾರಿಷಸ್‌ನ ಆತೀಶ್ ಲುಬ್ಹಾರನ್ನು 21-13, 21-10 ಅಂತರದಿಂದ ಸೋಲಿಸಿದ್ದಾರೆ.

ಭಾರತದ ಶಟ್ಲರ್‌ಗಳು ಟೀಮ್ ವಿಭಾಗದ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದಂತೆಯೇ ವೈಯಕ್ತಿಕ ಸ್ಪರ್ಧೆಗಳಲ್ಲೂ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಬ್ಯಾಡ್ಮಿಂಟನ್ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲಿ ಸಾತ್ವಿಕ್ ರಾಂಕಿರೆಡ್ಡಿ -ಅಶ್ವಿನಿ ಪೊನ್ನಪ್ಪ, ಪ್ರಣವ್ ಚೋಪ್ರಾ-ಸಿಕ್ಕಿ ರೆಡ್ಡಿ ಜೋಡಿ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸುಲಭ ಜಯ ಸಾಧಿಸಿತು.

ಸಾತ್ವಿಕ್-ಅಶ್ವಿನಿ ಜೋಡಿ ಇಂಗ್ಲೆಂಡ್‌ನ ಬೆನ್ ಲಾನ್ ಹಾಗೂ ಜೆಸ್ಸಿಕಾರನ್ನು 21-17, 21-16 ಅಂತರದಿಂದಲೂ, ಪ್ರಣವ್ ಹಾಗೂ ಸಿಕ್ಕಿ ರೆಡ್ಡಿ ಫಿಜಿಯ ಬರ್ಟಿ ಮೊಲಿಯಾ ಹಾಗೂ ಕರ್ನ್ ಗಿಬ್ಸನ್‌ರನ್ನು 21-8, 21-9 ಗೇಮ್‌ಗಳಿಂದ ಸೋಲಿಸಿದ್ದಾರೆ.

 ಇದೇ ವೇಳೆ, ಸ್ಕ್ವಾಷ್ ಪುರುಷರ ಡಬಲ್ಸ್‌ನಲ್ಲಿ ವಿಕ್ರಮ್ ಮಲ್ಹೋತ್ರಾ ಹಾಗೂ ರಾಮಿತ್ ಟಂಡನ್ ವೇಲ್ಸ್‌ನ ಪೀಟರ್ ಕ್ರೀಡ್ ಹಾಗೂ ಜೊಯೆಲ್ ಮಕಿನ್‌ರನ್ನು 2-1 ಅಂತರದಿಂದ ಸೋಲಿಸಿದ್ದಾರೆ.

ಮಹಿಳೆಯರ ಡಬಲ್ಸ್ ಜೋಡಿ ಜೋಶ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಲ್ಲಿಕಲ್ ವೆಲ್ಶ್‌ನ ಟೆಸ್ನಿ ಎವನ್ಸ್ ಹಾಗೂ ಡಿಯೊನ್ ಸಫ್ಫೆರಿ ಅವರನ್ನು 2-1 ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News