ಉತ್ತರ ಪ್ರದೇಶ ಯುವತಿಯ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕನ ವಿರುದ್ಧ ಕೊನೆಗೂ ಎಫ್‌ಐಆರ್

Update: 2018-04-12 04:33 GMT

ಲಕ್ನೋ, ಎ.12: ಉನ್ನಾವೊದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಕೊನೆಗೂ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕುಲ್‌ದೀಪ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಇದೇ ಸಂದರ್ಭ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಈ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಯುವತಿ ಹೆಸರಿಸಿರುವ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ. ಗಂಭೀರ ಆರೋಪ ಎದುರಿಸುತ್ತಿದ್ದರೂ ಬಿಜೆಪಿ ಶಾಸಕ ಕುಲ್‌ದೀಪ್ ರಾಜಾರೋಷವಾಗಿ ತಿರುಗಾಡುತ್ತಾ ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದರು. ಅಲ್ಲದೇ, ಸಂತ್ರಸ್ತ ಯುವತಿ ಹಾಗೂ ಆಕೆಯ ಕುಟುಂಬದ ವಿರುದ್ಧವೇ ಆರೋಪ ಹೊರಿಸುತ್ತಿದ್ದರು.

ಸಂತ್ರಸ್ತ ಯುವತಿಯ ತಂದೆ ಉತ್ತರ ಪ್ರದೇಶ ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಶಾಸಕ ಕುಲ್‌ದೀಪ್ ಸಿಂಗ್ ಸಹೋದರನನ್ನು ಈಗಾಗಲೇ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News