ಶೀತ ಮತ್ತು ಜ್ವರದ ಕಾಟದಿಂದ ಪಾರಾಗಲು ಅದ್ಭುತ ಮಾರ್ಗಗಳಿಲ್ಲಿವೆ

Update: 2018-04-12 11:03 GMT

ನಿಮ್ಮ ಸಹೋದ್ಯೋಗಿ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರೆ ನೀವೇನು ಮಾಡುತ್ತೀರಿ? ಆತ ಅಥವಾ ಆಕೆ ನಿಮ್ಮ ಬಳಿಯೇ ಕುಳಿತಿರುವುದರಿಂದ ಅದು ನಿಮಗೂ ಹಬ್ಬುತ್ತದೆ ಎಂಬ ಆತಂಕ ನಿಮ್ಮದಾಗಿರಬಹುದು. ನಿಮ್ಮ ಸಹೋದ್ಯೋಗಿ ಯೊಂದಿಗೆ ಮುಖ ಕೊಟ್ಟು ಮಾತನಾಡುವುದನ್ನು ಮತ್ತು ಹಸ್ತಲಾಘವವನ್ನೂ ನೀವು ತಪ್ಪಿಸಿಕೊಳ್ಳಬಹುದು.

ಹಸ್ತಲಾಘವ ಸೂಕ್ಷ್ಮಜೀವಿಗಳು ಒಬ್ಬರಿಂದೊಬ್ಬರಿಗೆ ಹರಡುವ ಸಾಮಾನ್ಯಮಾರ್ಗ ವಾಗಿದೆ. ಹಸ್ತಲಾಘವ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ನಂತರ ಚೆನ್ನಾಗಿ ಕೈ ತೊಳೆದುಕೊಳ್ಳುವುದರಿಂದ ನಿಮ್ಮ ಕೈಗೆ ಅಂಟಿಕೊಂಡಿರಬಹುದಾದ ರೋಗಾಣುಗಳು ನಾಶವಾಗುತ್ತವೆ.

 ಶೀತ ಮತ್ತು ಜ್ವರಕ್ಕೆ ವೈರಾಣುಗಳು ಕಾರಣವಾಗಿದ್ದು, ಇವೆರಡೂ ಉಸಿರಾಟದ ಸೋಂಕುಗಳಾಗಿವೆ. ಇವುಗಳನ್ನು ಸಹಜವಾಗಿ ತಡೆಯಲು ನೈಸರ್ಗಿಕ ಉಪಾಯಗಳಿವೆ.

► ಉಗುರು ಕಡಿಯುವುದನ್ನು ನಿಲ್ಲಿಸಿ

ಉಗುರುಗಳನ್ನು ಕಡಿಯುವುದು ನಿಮ್ಮ ಕೈಗಳಲ್ಲಿರುವ ಸೂಕ್ಷ್ಮಜೀವಿಗಳು ನಿಮ್ಮ ಬಾಯಿಯಲ್ಲಿ ಸೇರಲು ಸುಲಭ ಮಾರ್ಗವಾಗಿದೆ. ಉಗುರು ಕಡಿಯುವ ಅಭ್ಯಾಸ ವನ್ನು ನಿಲ್ಲಿಸುವುದು ಕಷ್ಟವಾಗಬಹುದಾದರೂ ಹಾಗೆ ಮಾಡುವುದರಿಂದ ಅನೇಕ ವಿಧಗಳಲ್ಲಿ ಲಾಭಕಾರಿಯಾಗಿದೆ. ಯಾವುದೇ ಅನಾರೋಗ್ಯ ನಿಮ್ಮ ಶರೀರವನ್ನು ಪ್ರವೇಶಿಸಲು ಮುಖ್ಯದ್ವಾರಗಳೆಂದರೆ ಮೂಗು ಮತ್ತು ಬಾಯಿ. ಕೈಗಳು ಮತ್ತು ಉಗುರುಗಳಲ್ಲಿ ಬಹಳಷು ್ಟಸೂಕ್ಷ್ಮಜೀವಿಗಳಿರುತ್ತವೆ ಮತ್ತು ಇವು ಬಾಯಿಯ ಮೂಲಕ ಸುಲಭವಾಗಿ ಶರೀರವನ್ನು ಪ್ರವೇಶಿಸಬಹುದು. ಹೀಗಾಗಿ ಉಗುರು ಕಡಿಯುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ನಿಲ್ಲಿಸಿ.

► ನಡಿಗೆ ರೂಢಿಸಿಕೊಳ್ಳಿ

ಪ್ರತಿನಿತ್ಯ ಸಾಮಾನ್ಯ ದೈಹಿಕ ವ್ಯಾಯಾಮದಲ್ಲಿ ತೊಡಗಿಕೊಂಡಿರುವ ಋತುಚಕ್ರ ನಿಂತಿರುವ ಮಹಿಳೆಯರು ಶೀತ ಮತ್ತು ಜ್ವರಕ್ಕೆ ಗುರಿಯಾಗುವ ಅಪಾಯ ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ವಾರಕ್ಕೆ ಕನಿಷ್ಠ ಐದು ಬಾರಿ 45 ನಿಮಿಷಗಳ ಬಿರುಸಿನ ವಾಕಿಂಗ್ ಶೀತಕ್ಕೆ ಗುರಿಯಾಗುವ ಅಪಾಯವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಪ್ರತಿದಿನ 30ರಿಂದ 60 ನಿಮಿಷಗಳ ಕಾಲ ಸಾಮಾನ್ಯ ದೈಹಿಕ ವ್ಯಾಯಾಮವು ಬಿಳಿಯ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

► ನೀವು ಇರುವಲ್ಲಿ ಸ್ವಚ್ಛವಾಗಿರಲಿ

 ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಸ್ವಚ್ಛತೆ ಅಗತ್ಯವಾಗಿದೆ. ಶೀತ ಮತ್ತು ಜ್ವರವನ್ನು ಹರಡುವ ರೋಗಾಣುಗಳು ಹರಡುವುದನ್ನು ತಡೆಯಲು ನೀವು ಪದೇಪದೇ ಮುಟ್ಟುವ ವಸ್ತುಗಳು ಮತ್ತು ಮೇಲ್ಮೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿದ್ದರೆ ಒಳ್ಳೆಯದು. ಬಾಗಿಲಿನ ಹಿಡಿಕೆಗಳು, ಕೀಬೋರ್ಡ್‌ಗಳು, ಟಾಯ್ಲೆಟ್, ಟಿವಿ ರಿಮೋಟ್ ಮತ್ತು ಲೈಟ್ ಸ್ವಿಚ್ ಇತ್ಯಾದಿಗಳಿಗೆ ಡಿಸ್‌ಇನ್ಫೆಕ್ಟಂಟ್‌ಗಳನ್ನು ಬಳಸುವುದರಿಂದ ಅವು ರೋಗಾಣುಗಳಿಂದ ಮುಕ್ತವಾಗುತ್ತವೆ.

► ಚೆನ್ನಾಗಿ ನಿದ್ರೆ ಮಾಡಿ

 ದಿನಕ್ಕೆ ಕನಿಷ್ಠ ಏಳು ಗಂಟೆಗಳ ಕಾಲ ನಿದ್ರಿಸದಿದ್ದರೆ ಶರೀರವು ಸುಲಭವಾಗಿ ಅನಾರೋಗ್ಯಕ್ಕೆ ಗುರಿಯಾಗುತ್ತದೆ. ಶರೀರದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯ ನಿದ್ರೆ ಅಗತ್ಯವಾಗಿದೆ. ನಿದ್ರೆ ಕಡಿಮೆಯಾದರೆ ಹೆಚ್ಚಿನ ರೋಗ ನಿರೋಧಕ ಜೀವಕೋಶಗಳು ಮತ್ತು ಪ್ರೋಟಿನ್‌ಗಳನ್ನು ಉತ್ಪಾದಿಸಲು ಶರೀರಕ್ಕೆ ಸಾಧ್ಯವಾಗುವುದಿಲ್ಲ.

 ► ಆಹಾರದಲ್ಲಿ ಬೆಳ್ಳುಳ್ಳಿ ಬಳಕೆ

ಉರಿಯೂತ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿಯು ಶೀತ ಮತ್ತು ಜ್ವರವನ್ನು ದೂರವಿಡುತ್ತದೆ. ಅದು ರೋಗಗಳ ವಿರುದ್ಧ ಹೋರಾಡಲು ನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತದೆ.

► ಪ್ರೋಬಯಾಟಿಕ್‌ಗಳು

 ಪ್ರೋಬಯಾಟಿಕ್‌ಗಳು ನಮ್ಮ ಕರುಳಿಗೆ ಅಗತ್ಯವಾದ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸಾಮಾನ್ಯ ಸೋಂಕುಗಳು ಮತ್ತು ಕಾಯಿಲೆಗಳ ವಿರುದ್ಧ ಹೋರಾಡಲು ಶರೀರಕ್ಕೆ ನೆರವಾಗುತ್ತವೆ. ಮೊಸರು, ಗಾಢವರ್ಣದ ಚಾಕ್ಲೇಟ್‌ಗಳು, ಉಪ್ಪಿನಕಾಯಿ ಇತ್ಯಾದಿಗಳು ಪ್ರೋಬಯಾಟಿಕ್‌ಗಳ ಉತ್ತಮ ಮೂಲಗಳಾಗಿವೆ.

► ನಾರಿನಂಶ ಸೇವನೆ

ನೀವು ದಿನವಿಡೀ ಸೇವಿಸುವ ಆಹಾರದಲ್ಲಿ ಕನಿಷ್ಠ 30 ಗ್ರಾಂ ನಾರಿನಂಶ ಇರುವುದು ಅಗತ್ಯವಾಗಿದೆ. ಅದು ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಪ್ರೋಬಯಾಟಿಕ್‌ಗಳ ಮೂಲವಾಗಿದೆ. ಅದು ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುವ ಮೂಲಕ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ.

► ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ

ಉಜ್ವಲ ಬಣ್ಣಗಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸೇಬು ಮತ್ತು ಚೆರಿಹಣ್ಣುಗಳಲ್ಲಿರುವ ಫ್ಲಾವನಾಯ್ಡಾಗಳ ಸೇವನೆಯಿಂದ ಶೀತ ತಗುಲುವ ಅಪಾಯ ಶೇ.33ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಹಣ್ಣು ಮತ್ತು ತರಕಾರಿಗಳಲ್ಲಿರುವ ವಿಟಾಮಿನ್ ಸಿ ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.

► ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವದರಿಂದ ಶರೀರದಲ್ಲಿಯ ರೋಗಾಣುಗಳು ಹೊರತಳ್ಳಲ್ಪಡುತ್ತವೆ. ಶರೀರವು ಜಲೀಕರಣವಾಗಿದ್ದರೆ ಅದು ಶೀತ ಮತ್ತು ಜ್ವರದಂತಹ ಸಾಮಾನ್ಯ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರಿನ ಸೇವನೆ ಅಗತ್ಯವಾಗಿದೆ.

► ಗ್ರೀನ್ ಟೀ

 ಲಿಂಬೆರಸ ಮತ್ತು ಜೇನಿನೊಂದಿಗೆ ಗ್ರೀನ್ ಟೀ ಅನ್ನು ಗುಟುಕರಿಸುತ್ತಿರುವುದು ಶೀತ ಮತ್ತು ಜ್ವರವನ್ನು ತಡೆಯಲು ಇನ್ನೊಂದು ಉಪಾಯವಾಗಿದೆ. ಗ್ರೀನ್ ಟೀ ಸೇವಿಸುವಾಗ ಅದರ ಹಬೆಯು ಮೂಗಿನಲ್ಲಿಯ ಸೂಕ್ಷ್ಮರೋಮಗಳನ್ನು ಪ್ರಚೋದಿಸುತ್ತದೆ. ಈ ರೋಮಗಳು ರೋಗಾಣುಗಳನ್ನು ಪರಿಣಾಮಕಾರಿಯಾಗಿ ಹೊರಕ್ಕೆ ಹಾಕುತ್ತವೆ. ಲಿಂಬೆರಸವು ಲೋಳೆಯನ್ನು ತೆಳುವಾಗಿಸುತ್ತದೆ ಮತ್ತು ಜೇನು ಬ್ಯಾಕ್ಟೀರಿಯಾ ನಿರೋಧಕ ಗುಣವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News